ಕಲಘಟಗಿ ಪಟ್ಟಣದ ರಸಗೊಬ್ಬರ ಮಳಿಗೆಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ ನೀಡಿ, ಯೂರಿಯಾ ರಸಗೊಬ್ಬರ ಸಮರ್ಪಕವಾಗಿ ವಿತರಿಸಲು ಸೂಚಿಸಿದರು
ಕಲಘಟಗಿ: ‘ಖಾಸಗಿ ಮಳಿಗೆಯವರು ಹಾಗೂ ವಿವಿಧ ಸೊಸೈಟಿಯವರು ರೈತರಿಗೆ ರಸಗೊಬ್ಬರ ವಿತರಿಸುವಾಗ ಕಡ್ಡಾಯವಾಗಿ ರಸೀದಿ ನೀಡಬೇಕು. ಹೆಚ್ಚಿನ ಹಣ ಪಡೆಯುವಂತಿಲ್ಲ. ಒತ್ತಾಯವಾಗಿ ಲಿಂಕ್ ನೀಡಿ ರೈತರಿಗೆ ತೊಂದರೆ ನೀಡಿದರೆ ಅಂತವರ ವಿರುದ್ದ ಪ್ರಕರಣ ದಾಖಲು ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಎಚ್ಚರಿಸಿದರು.
ಪಟ್ಟಣದ ವಿವಿಧ ರಸಗೊಬ್ಬರ ಮಳಿಗೆಗಳಿಗೆ ಭೇಟಿ ನೀಡಿ, ಯೂರಿಯಾ ದಾಸ್ತಾನು ಬಗ್ಗೆ ಮಾಹಿತಿ ಪಡೆದರು. ನಂತರ ದಾಸ್ತಾನು ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
‘ರೈತರಿಗೆ ರಸೀದಿ ನೀಡಬೇಕು. ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು‘ ಎಂದು ಸೂಚಿಸಿದರು.
ಇದೇ ವೇಳೆ ಮಾರ್ಕೆಟಿಂಗ್ ಸೊಸೈಟಿಯಲ್ಲಿ ಬಿಲ್ ನೀಡದೆ ರಸಗೊಬ್ಬರ ನೀಡುತ್ತಿದ್ದಾರೆ ಎಂದು ರೈತರು ದೂರಿದರು.
ಜಿಲ್ಲಾಧಿಕಾರಿ ಅವರು, ಸೊಸೈಟಿ ಕಾರ್ಯನಿರ್ವಾಹಕ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡು, ‘ಸರ್ಕಾರದ ನಿಗದಿತ ಬೆಲೆಯಲ್ಲಿ ರೈತರಿಗೆ ಯೂರಿಯಾ ರಸಗೊಬ್ಬರ ವಿತರಿಸಬೇಕು. ರಸಗೊಬ್ಬರ ದಾಸ್ತಾನು ಇರುವ ಬಗ್ಗೆ ದರಪಟ್ಟಿ ಅಳವಡಿಸಬೇಕು. ನಿಯಮ ಉಲ್ಲಂಘಿಸಿದರೆ ಕ್ರಮಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.
ತಾಲ್ಲೂಕಿನ ರೈತರಿಗೆ ಯೂರಿಯಾ 4,800 ಮೆಟ್ರಿಕ್ ಟನ್ ಅಗತ್ಯವಿದೆ. ಈಗಾಗಲೇ 5 ಸಾವಿರ ಮೆಟ್ರಿಕ್ ಟನ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಮಹಾವೀರ ಖಾಸಗಿ ಮಳಿಗೆ ಆಗ್ರೋ ಸೆಂಟರ್‌ಗೆ ಭೇಟಿ ನೀಡಿ, ‘ರೈತರಿಗೆ ಲಿಂಕ್ ನೀಡುವ ಹಾಗಿಲ್ಲ, ಗೊಬ್ಬರ ದರ ಪಟ್ಟಿ ಅಂಟಿಸಬೇಕು’ ಎಂದರು.
‘ರೈತರು ಜಮೀನಿನ ಮಣ್ಣಿನ ಗುಣಮಟ್ಟ ಆಧರಿಸಿ ಪೋಷಕಾಂಶವುಳ್ಳ ವಿವಿಧ ರಸಗೊಬ್ಬರ ಹಾಕಬೇಕು’ ಸಲಹೆ ನೀಡಿದರು.
ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತಹಶೀಲ್ದಾರ್ ಬಸವರಾಜ ಬೆಣ್ಣೆ ಶಿರೂರು, ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ, ಪ.ಪಂ ಮುಖ್ಯಾಧಿಕಾರಿ ಚಂದ್ರಶೇಖರ್ ಬಿ, ಸಚಿವರ ಆಪ್ತ ಕಾರ್ಯದರ್ಶಿ ಸೋಮಶೇಖರ, ಬೆನ್ನೂರ, ಬಾಳು ಖಾನಾಪುರ, ಕಂದಾಯ ನಿರೀಕ್ಷಕರ ಉಮೇಶ ಬಮ್ಮಿಗಟ್ಟಿ, ರೈತ ಮುಖಂಡರಾದ ಉಳವಪ್ಪ ಬಳಗೇರಿ, ನಾಗೇಶ್ ಇಟಗಿ, ಸಹದೇವಪ್ಪ ಕುಂಬಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.