ADVERTISEMENT

ಕಾರು ಉರುಳಿ ಇಬ್ಬರ ಸಾವು

ದೊಡ್ಡಬಳ್ಳಾಪುರದಿಂದ ದಾಂಡೇಲಿಗೆ ಪ್ರವಾಸ ಹೊರಟಿದ್ದ ಸ್ನೇಹಿತರು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 1:29 IST
Last Updated 19 ಮಾರ್ಚ್ 2022, 1:29 IST

ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಪ್ರಕರಣ ನಗರದ ಗಬ್ಬೂರ ಬೈಪಾಸ್ ಬಳಿ ಶುಕ್ರವಾರ ನಡೆದಿದೆ.

ದೊಡ್ಡಬಳ್ಳಾಪುರ ಮೂಲದ ರಾಕೇಶ್‌ (21) ಮತ್ತು ರಂಜಿತ್‌ (23) ಮೃತ ಪಟ್ಟವರು. ಆರು ಮಂದಿ ಸ್ನೇಹಿತರು ಸೇರಿ ದೊಡ್ಡಬಳ್ಳಾಪುರದಿಂದ ದಾಂಡೇಲಿಗೆ ಪ್ರವಾಸಕ್ಕೆ ತೆರಳುತ್ತಿದ್ದರು. ಬೆಳಿಗ್ಗೆ 4ರ ವೇಳೆಗೆ ಗಬ್ಬೂರ ಬೈಪಾಸ್ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ, ಪಕ್ಕದ ಕಟ್ಟೆಗೆ ಡಿಕ್ಕಿ ಹೊಡೆದಿದೆ. ನಿತಿನ್, ಅಮಿತ್‌, ಪ್ರಮೋದ್ ಮತ್ತು ಲೋಕೇಶ್ ಗಾಯಗೊಂಡಿದ್ದು ಕಿಮ್ಸ್‌ಗೆ ದಾಖಲಿಸಲಾಗಿದೆ. ದಕ್ಷಿಣ ಸಂಚಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿನಿಗೆ ವಂಚನೆ: ನಗರದ ಕೆಎಲ್‌ಇ ಕಾಲೇಜಿನಲ್ಲಿ ಮಹಾರಾಷ್ಟ್ರ ಮೂಲದ ಎಂಜಿನಿಯರಿಂಗ್‌ ವಿದ್ಯಾರ್ಥಿನಿಗೆ ವಂಚಕನೊಬ್ಬ ಕರೆ ಮಾಡಿ, ಒಟಿಪಿ ಪಡೆದು ₹1.70 ಲಕ್ಷ ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡಿದ್ದಾನೆ.

ADVERTISEMENT

ಕಾಲೇಜು ಶುಲ್ಕ ಪಾವತಿಸಲೆಂದು ಪಾಲಕರು ವಿದ್ಯಾರ್ಥಿನಿಯ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಿದ್ದರು. ಬ್ಯಾಂಕ್‌ ಸಿಬ್ಬಂದಿ ಎಂದು ವಿದ್ಯಾರ್ಥಿನಿಗೆ ಕರೆ ಮಾಡಿದ ವಂಚಕ, ಒಟಿಪಿ ಪಡೆದು ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹90 ಸಾವಿರ ವಂಚನೆ: ಜೀವ ವಿಮೆ ಹಣ ಕ್ಲೇಮ್‌ ಮಾಡುವುದಾಗಿ ಗೋಕುಲ ರಸ್ತೆಯ ಸಂದೀಪ ಬಿ. ಅವರಿಗೆ ಕರೆ ಮಾಡಿದ ವಂಚಕ, ಅವರಿಂದ ಬ್ಯಾಂಕ್‌ ಮಾಹಿತಿ ಪಡೆದು ಆನ್‌ಲೈನ್‌ನಲ್ಲಿ ₹90 ಸಾವಿರ ವರ್ಗಾವಣೆ ಮಾಡಿಕೊಂಡಿದ್ದಾನೆ.

ಎಕ್ಸೈಡ್ ಜೀವ ವಿಮೆ ಕಂಪನಿ ಸಿಬ್ಬಂದಿ ಎಂದು ಪರಿಚಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.

ವಂಚನೆ: ಬ್ಯಾಂಕ್‌ನ ಉಳಿತಾಯ ಖಾತೆ ಅಪ್‌ಡೇಟ್‌ ಮಾಡುವುದಾಗಿ ಬೈರಿದೇವರಕೊಪ್ಪದ ಮೇಹಬೂಬ್‌ ಯೂಸುಫ್‌ಖಾನ್‌ ಅವರಿಗೆ ಕರೆ ಮಾಡಿದ ವಂಚಕ, ಮೊಬೈಲ್‌ಗೆ ಎನಿ ಡೆಸ್ಕ್‌ ಆ್ಯಪ್‌ ಅಳವಡಿಸಿಕೊಳ್ಳಲು ಹೇಳಿ ₹20 ಸಾವಿರ ವರ್ಗಾವಣೆ ಮಾಡಿಕೊಂಡಿದ್ದಾನೆ. ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜು; ಬಂಧನ: ನಗರದ ಎಂಟಿ ಮಿಲ್ ಕ್ರಾಸ್ ಜೂಜಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿ, ₹4 ಸಾವಿರ ನಗದು ಹಾಗೂ ಮೊಬೈಲ್‌ ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.

ಕಳವು; ಆರೋಪಿಗಳ ಬಂಧನ: ಇಸ್ಲಾಂ
ಪುರ ಇಂಡಸ್ಟ್ರಿಯಲ್‌ ಪ್ರದೇಶದ ಗೋದಾಮಿನಲ್ಲಿದ್ದ 17 ಸಿಸಿಟಿವಿ ಕ್ಯಾಮೆರಾ ಹಾಗೂ ₹45 ಸಾವಿರ ನಗದು ಕಳವು ಮಾಡಿದ ಇಬ್ಬರು ಆರೋಪಿ
ಗಳನ್ನು ಅರ್ಧ ತಾಸಿನಲ್ಲಿ ಕಸಬಾಪೇಟೆ ಪೊಲೀಸರು ಬಂಧಿಸಿದ್ದಾರೆ.

ಕಸಬಾಪೇಟೆಯ ಕಬೀರ ಎಂಬುವವರ ಮಾಲೀಕತ್ವದ ಗೋದಾಮಿನ ಕಿಟಕಿಯ ಗ್ರಿಲ್ ಮುರಿದು, ಸಿಸಿಟಿವಿ ಕ್ಯಾಮೆರಾ ಮತ್ತು ನಗದು ಕಳವು ಮಾಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಸೋನಿಯಾ ಗಾಂಧಿನಗರ ಮತ್ತು ದಿವಾನ ಅಲಿ ದರ್ಗಾದ ಬಳಿಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.