ADVERTISEMENT

ಕೆಐಆರ್‌ಡಿಎಲ್‌ಗೆ ನವ ಬೆಂಗಳೂರು ಯೋಜನೆ ಕಾಮಗಾರಿ; ಆಯೋಗಕ್ಕೆ ದೂರು: ಶೆಟ್ಟರ್‌

'ದೂರು ನೀಡಲು ನಿರ್ಧಾರ'

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 9:16 IST
Last Updated 28 ಏಪ್ರಿಲ್ 2019, 9:16 IST
   

ಹುಬ್ಬಳ್ಳಿ: ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆಯಡಿ ಮಂಜೂರಾದ ಅನುದಾನ ಹಾಗೂ ವಾರ್ಡ್‌ ಮಟ್ಟದ ಎಲ್ಲ ಅಭಿವೃದ್ಧಿ ಕಾರ್ಯಗಳ ಕಾಮಗಾರಿಯನ್ನು ಕೆಆರ್‌ಐಡಿಎಲ್‌ಗೆ ನೀಡಿದ್ದು ಕಾನೂನು ಬಾಹಿರ. ಈ ಕುರಿತು ಚುನಾವಣಾ ಆಯೋಗಕ್ಕೆ ಮತ್ತೊಂದು ಬಾರಿ ದೂರು ನೀಡಲಾಗುವುದು ಎಂದು ಬಿಜೆಪಿ ಶಾಸಕ ಜಗದೀಶ ಶೆಟ್ಟರ್‌ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘₹ 4,200 ಕೋಟಿ ವೆಚ್ಚದ ಕಾಮಗಾರಿಯನ್ನು ಕೆಆರ್‌ಐಡಿಎಲ್‌ಗೆ ಒಪ್ಪಿಸುವಲ್ಲಿ ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರ ನಡೆದಿದೆ. ಮೇ 23ರ ತನಕ ಲೋಕಸಭಾ ಚುನಾವಣೆಯ ನೀತಿಸಂಹಿತೆ ಜಾರಿಯಲ್ಲಿದ್ದರೂ ಈ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ’ ಎಂದರು.

‘ಬಿಜೆಪಿ ಈಗಾಗಲೇ ಒಂದು ಸಲ ಚುನಾವಣಾ ಆಯೋಗಕ್ಕೆ ದೂರುಕೊಟ್ಟಿದೆ. ಈಗ ಮತ್ತೊಂದು ಸಲ ದೂರು ಕೊಡುತ್ತೇವೆ. ಆಯೋಗ ಕ್ರಮ ತೆಗೆದುಕೊಳ್ಳದೇ ಹೋದರೆ ಕಾನೂನು ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಚುನಾವಣೆಯಲ್ಲಿ ಖರ್ಚು ಮಾಡಲು ಗುತ್ತಿಗೆದಾರರಿಂದ ಹಣ ಪಡೆದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಈ ಯೋಜನೆ ಮೂಲಕ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಕೆಐಆರ್‌ಡಿಎಲ್‌ ಎಂ.ಡಿ. ವೆಂಕಟೇಶ, ಕುಮಾರಸ್ವಾಮಿ ಮತ್ತು ದೇವೇಗೌಡರ ಹತ್ತಿರದ ಸಂಬಂಧಿಯಾಗಿದ್ದಾರೆ’ ಎಂದು ಆರೋಪಿಸಿದರು.

‘ಲೋಕಸಭಾ ಚುನಾವಣೆಯ ಮೈಸೂರು ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲದಿದ್ದರೆ ರಾಜ್ಯ ಸರ್ಕಾರ ಉಳಿಯುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಎಚ್‌ಎಂಟಿ (ಹಾಸನ, ಮಂಡ್ಯ, ತುಮಕೂರು) ಕ್ಷೇತ್ರದಲ್ಲಿ ನಾವು ಗೆಲ್ಲದಿದ್ದರೆ ಸರ್ಕಾರ ಇರುವುದು ಅನುಮಾನ ಎಂದು ದೇವೇಗೌಡರು ಹೇಳಿದ್ದಾರೆ. ಆದ್ದರಿಂದ ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ನಾವು ಏನೂ ಪ್ರಯತ್ನ ಮಾಡುವುದಿಲ್ಲ. ಅವರ ಕಚ್ಚಾಟದಿಂದಲೇ ಸರ್ಕಾರ ಪತನವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.