ಹುಬ್ಬಳ್ಳಿ: ಅಂಗಡಿಗಳ ಮುಂದೆ ತೂಗುತ್ತ ನಿಂತ ಬಣ್ಣ ಬಣ್ಣದ ಆಕಾಶ ಬುಟ್ಟಿಗಳ ಮುಂದೆ ಸುತ್ತುವರಿದ ಗ್ರಾಹಕರು ಒಂದೆಡೆ, ರಾಶಿ ಹಣತೆಗಳ ನಡುವೆ ಆಯ್ದು ಹೆಕ್ಕಿ ಚೌಕಾಸಿ ಮಾಡುತ್ತ ನಿಂತವರು ಇನ್ನೊಂದೆಡೆ, ಹೂವು, ಹಣ್ಣುಗಳ ಅಂಗಡಿಯಲ್ಲಿ ಕಿಕ್ಕಿರಿದ ಜನ... ಬೆಳಕಿನ ಹಬ್ಬ ದೀಪಾವಳಿ ಅಂಗವಾಗಿ ನಗರದ ಮಾರುಕಟ್ಟೆಗಳಲ್ಲಿ ಬುಧವಾರ ಕಂಡುಬಂದ ದೃಶ್ಯವಿದು.
ಹೂವು ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಗೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದು, ಇಲ್ಲಿನ ದುರ್ಗದಬೈಲು ಮಾರುಕಟ್ಟೆ ಗಿಜಿಗುಡುತ್ತಿತ್ತು. ಹಬ್ಬಕ್ಕೆ ಕೆಲವೇ ದಿನಗಳಿರುವುದರಿಂದ ಆಕಾಶಬುಟ್ಟಿ, ಹಣತೆ ಪಟಾಕಿ, ಬೂದುಕುಂಬಳಕಾಯಿ, ಹೂವು ಹಾಗೂ ಇತರ ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದರು.
ವಿವಿಧ ಶೈಲಿಯ ಆಕಾಶಬುಟ್ಟಿಗಳು ಮಾರುಕಟ್ಟೆಯಲ್ಲಿ ಜನರನ್ನು ಆಕರ್ಷಿಸಿದವು. ಕೋಲ್ಕತ್ತ, ಮುಂಬೈ ಹಾಗೂ ದೇಶದ ವಿವಿಧ ಭಾಗಗಳಿಂದ ಆಕಾಶಬುಟ್ಟಿ ತರಿಸಿ ಮಾರಾಟ ಮಾಡಲಾಗುತ್ತಿದೆ. ಹಳದಿ, ಕೆಂಪು ಬಣ್ಣಗಳ ಆಕಾಶಬುಟ್ಟಿಗಳನ್ನು ಗ್ರಾಹಕರು ಹೆಚ್ಚಾಗಿ ಖರೀದಿಸಿದರು. ಗಾತ್ರಕ್ಕೆ ತಕ್ಕಂತ ದರ ನಿಗದಿಪಡಿಸಲಾಗಿದ್ದು, ಸುಮಾರು ₹100 ರಿಂದ ₹1 ಸಾವಿರದವರೆಗಿನ ಬೆಲೆಯ ಆಕಾಶಬುಟ್ಟಿಗಳು ಲಭ್ಯ ಇವೆ.
ಮಣ್ಣಿನ ಹಣತೆಗೆ ಬೇಡಿಕೆ ಹೆಚ್ಚಿದ್ದು ₹20ರಿಂದ ₹200ರ ವರೆಗಿನ ವಿವಿಧ ಗಾತ್ರ, ವಿನ್ಯಾಸಗಳ ಹಣತೆಗಳು ಮಾರಾಟವಾಗುತ್ತಿವೆ. ಮಣ್ಣಿನ ಹಣತೆ, ಗಾಜು, ಬೊಂಬೆ, ದೇವರ ಮೂರ್ತಿಗಳ ವಿನ್ಯಾಸವಿರುವ ಹಣತೆಗಳು, ಪಿಂಗಾಣಿ ಹಣತೆ, ತೂಗುದೀಪಗಳೂ ಮಾರಾಟ ಮಾಡುತ್ತಿದ್ದೇವೆ. ಗುಣಮಟ್ಟ, ಗಾತ್ರಕ್ಕೆ ತಕ್ಕ ಬೆಲೆ ನಿಗದಿಪಡಿಸಲಾಗಿದೆ ಎನ್ನುತ್ತಾರೆ ತಮಿಳುನಾಡಿನಿಂದ ಬಂದು ಹಣತೆ ವ್ಯಾಪಾರ ಮಾಡುತ್ತಿರುವ ಅಣ್ಣಾಮಲೈ.
ನಾವು ಐದು ಮಂದಿ ಬಂದು ಪ್ರತ್ಯೇಕ ಅಂಗಡಿಗಳನ್ನು ಮಾಡಿಕೊಂಡಿದ್ದೇವೆ. ಬಂದು ಒಂದು ತಿಂಗಳಾದರೂ ಮಳೆಯ ಕಾರಣದಿಂದ ವ್ಯಾಪಾರ ಸರಿಯಾಗಿ ಆಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಪಟಾಕಿಗಳ ಮಾರಾಟ ನಡೆಯುತ್ತಿದ್ದರೂ ಖರೀದಿಸುವವರ ಸಂಖ್ಯೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿತ್ತು.
ಹಬ್ಬದ ಅಂಗವಾಗಿ ಹಣ್ಣು ತರಕಾರಿ ಹಾಗೂ ಇತರ ವಸ್ತುಗಳಿಗೆ ಬೆಲೆ ಏರಿಕೆಯಾಗಿದ್ದು, ಆದರೂ ಖರೀದಿಗೆ ಜನ ಹಿಂದೇಟು ಹಾಕಿಲ್ಲ. ಮಹಿಳೆಯರು ಮಕ್ಕಳು ಹೊಸ ಬಟ್ಟೆಗಳ ಖರೀದಿಯಲ್ಲಿ ತೊಡಗಿದ್ದ ದೃಶ್ಯವೂ ಕಂಡುಬಂತು. ಮಾರುಕಟ್ಟೆಯಲ್ಲಿ ಜನ ಹೆಚ್ಚಿದ್ದರಿಂದ ಪ್ರಮುಖ ರಸ್ತೆಗಳಲ್ಲಿ ಸಂಚಾರದಟ್ಟಣೆಯೂ ಹೆಚ್ಚಿತ್ತು.
Cut-off box - ವ್ಯಾಪಾರಕ್ಕೆ ಮಳೆ ಅಡ್ಡಿ ಭರ್ಜರಿ ವ್ಯಾಪಾರ ನಡೆಯುತ್ತಿರುವುದರ ನಡುವೆಯೇ ನಗರದಲ್ಲಿ ಬುಧವಾರ ಜೋರಾಗಿ ಮಳೆ ಸುರಿದಿದ್ದು ಜನರು ವ್ಯಾಪಾರಿಗಳು ಸಂಕಷ್ಟ ಎದುರಿಸಿದರು. ವ್ಯಾಪಾರಿಯೊಬ್ಬರು ಮಾರಾಟಕ್ಕಾಗಿ ತಂದಿದ್ದ ಕುಂಬಳಕಾಯಿ ಮಳೆನೀರಿನಲ್ಲಿ ರಸ್ತೆ ಬದಿ ತೇಲುತ್ತಿದ್ದ ದೃಶ್ಯ ಕಂಡುಬಂತು. ಅನಿರೀಕ್ಷಿತವಾಗಿ ಮಳೆ ಸುರಿದಿದ್ದರಿಂದ ಜನರು ಆಶ್ರಯ ಹುಡುಕುತ್ತ ಓಡಿಹೋಗಿ ಸಮೀಪದ ಅಂಗಡಿಗಳ ಮುಂದೆ ನಿಂತರು. ಮಹಿಳೆಯರು ಮಕ್ಕಳು ಮಳೆಯಿಂದ ರಕ್ಷಣೆ ಪಡೆಯಲು ಒದ್ದಾಡಿದರು. ವ್ಯಾಪಾರಿಗಳು ಕೊಡೆ ಹಿಡಿದುಕೊಂಡು ಮಳೆಯ ನಡುವೆಯೇ ವ್ಯಾಪಾರ ಮಾಡಿದರು. ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೂ ಅಡ್ಡಿಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.