ADVERTISEMENT

ಎಲ್ಲೆಲ್ಲೂ ದೀಪಾವಳಿ ಸಂಭ್ರಮ; ಮೈದಾನದಲ್ಲಿ ಎಮ್ಮೆಗಳ ಕರಿ ಹರಿದ ಗೌಳಿಗರು

ಪಟಾಕಿ ಹಚ್ಚಿ ನಲಿದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 14:45 IST
Last Updated 8 ನವೆಂಬರ್ 2018, 14:45 IST
ದೀಪಾವಳಿ ಅಂಗವಾಗಿ ಗೌಳಿಗರು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಎಮ್ಮೆಗಳಿಗೆ ಕರಿಹರಿದು ಓಡಿಸಿದರು–ಪ್ರಜಾವಾಣಿ ಚಿತ್ರ
ದೀಪಾವಳಿ ಅಂಗವಾಗಿ ಗೌಳಿಗರು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಎಮ್ಮೆಗಳಿಗೆ ಕರಿಹರಿದು ಓಡಿಸಿದರು–ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಬೆಳಕಿನ ಹಬ್ಬ ದೀಪಾವಳಿ ಅಂಗವಾಗಿ ನಗರದಲ್ಲಿ ಸಂಭ್ರಮ ಮನೆ ಮಾಡಿದ್ದು, ಮಕ್ಕಳು, ದೊಡ್ಡವರು ಪಟಾಕಿ ಸಿಡಿಸಿ, ಸುರುಸುರು ಬತ್ತಿ ಬೆಳಗಿ, ದೀಪದ ಪಣತೆ ಹಚ್ಚಿ ನಲಿದರು.

ಪಾಡ್ಯದ ದಿನವಾದ ಗುರುವಾರ ಮನೆಗಳನ್ನು ಸಿಹಿ ಅಡುಗೆ ಮಾಡಿದರು. ನಗರದ ಹೋಟೆಲುಗಳಲ್ಲಿಯೂ ಸಿಹಿ ಊಟ ತಯಾರಿಸಿ ಗ್ರಾಹಕರಿಗೆ ಬಡಿಸಲಾಯಿತು. ವಾಣಿಜ್ಯ ನಗರಿಯ ಎಲ್ಲ ಅಂಗಡಿಗಳು ತಳಿರು ತೋರಣ, ಬಣ್ಣದ ದೀಪಗಳಿಂದ ಸಿಂಗಾರಗೊಂಡಿದ್ದವು. ಪೂಜೆ, ಪುನಸ್ಕಾರಗಳು ಹಾಗೂ ಎಲ್ಲ ವರ್ಗದ ಜನಸಮುದಾಯ ಮನೆಮಂದಿಯೊಂದಿಗೆ ಸಮಯ ಕಳೆದಿದ್ದರಿಂದ ನಗರದಲ್ಲಿ ವಾಹನಗಳು ಹಾಗೂ ಜನಸಂಚಾರ ಹೇಳಿಕೊಳ್ಳುವಷ್ಟು ಇರಲಿಲ್ಲ. ಸರ್ಕಾರಿ ಕಚೇರಿಗಳಿಗೆ ರಜೆಯನ್ನೂ ಘೋಷಿಸಲಾಗಿತ್ತು. ಪೂಜೆಯ ಬಳಿಕ ಕೆಲ ಅಂಗಡಿಗಳನ್ನು ಮುಚ್ಚಲಾಗಿತ್ತು.

ದೀಪಾವಳಿ ಹಬ್ಬ ಗೌಳಿಗರಿಗೆ ಎಮ್ಮೆಗಳನ್ನು ಸಿಂಗಾರ ಮಾಡುವ ಹಬ್ಬ. ನೆಹರೂ ಮೈದಾನದಲ್ಲಿ ಸಮುದಾಯದ ಸ್ವಾಮೀಜಿ ಹಾಗೂ ಹಿರಿಯರ ಸಮ್ಮುಖದಲ್ಲಿ ತಮ್ಮ ಎಮ್ಮೆಗಳನ್ನು ಕರೆತಂದ ಗೌಳಿಗರು ಅವುಗಳನ್ನು ಮೈದಾನದ ಸುತ್ತ ಓಡಿಸಿದರು. ಇದಕ್ಕೂ ಮುನ್ನ ಸ್ವಾಮೀಜಿ ಪಾರೋಜಿ ಅವರ ಆಶೀರ್ವಾದ ಪಡೆದರು.

ADVERTISEMENT

ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಗೌಳಿ ಸಮಾಜದ ಹಿರಿಯ, ಬಾನಿ ಓಣಿಯ ವಸಂತ ಪಂಗಡವಾಲೆ, ‘ಪ್ರತಿ ದೀಪಾವಳಿ ಸಂದರ್ಭದಲ್ಲಿ ಎಮ್ಮೆಗಳಿಗೆ ಜಳಕ ಮಾಡಿಸಿ ಕೋಡುಗಳಿಗೆ ಆಯಿಲ್‌ ಪೇಂಟ್‌ ಹಚ್ಚಿ, ಮೈಗೆ ಅರಿಶಿಣ ಬಣ್ಣ ಹಚ್ಚಿ ಇಲ್ಲಿಗೆ ಕರೆತರುತ್ತಾರೆ. ಸುಮಾರು 250ಕ್ಕೂ ಅಧಿಕ ಎಮ್ಮೆಗಳನ್ನು ಓಡಿಸಿ ಮತ್ತೆ ಮನೆಗಳತ್ತ ಕೊಂಡೊಯ್ಯುತ್ತಾರೆ. ಇದು ಅನಾದಿ ಕಾಲದಿಂದ ನಡೆಸಿಕೊಂಡು ಬಂದಿರುವ ಆಚರಣೆ’ ಎಂದರು.

ಮುಖಂಡರಾದ ಸತ್ಯಪ್ಪ ಉಪ್ಪಾರ, ಮರುತಿ ಗಡೆಪ್ಪ, ಪರಮೇಶ್ವರ ಶಿರಕೋಳ, ಲಕ್ಷ್ಮಣ ಅಂಡೇನವರ, ರಮೇಶ ವಾಘಮೋಡೆ ಇದ್ದರು.

‍ಕಡಿಮೆಯಾದ ಪಟಾಕಿ ಅಬ್ಬರ:ಪಟಾಕಿ ಹಚ್ಚುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ, ಪರಿಸರ ಹಾನಿ ಸೇರಿದಂತೆ ಹಲವು ಕಾರಣಗಳಿಗಾಗಿ ಈ ಬಾರಿ ಪಟಾಕಿ ಅಬ್ಬರ ಕಡಿಮೆ ಇತ್ತು. ಶಾಲೆಗಳಲ್ಲಿ ಹಾನಿಕರ ಪಟಾಕಿ ಹಚ್ಚುವುದಿಲ್ಲ ಎಂದು ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ್ದರು. ಹಾಗಾಗಿ, ಮಕ್ಕಳೂ ಸ್ವಯಂ ಪ್ರೇರಣೆಯಿಂದಲೇ ಪಟಾಕಿ ಹಚ್ಚುವುದರಿಂದ ದೂರ ಉಳಿದರು. ಈ ಬಾರಿ ಪಟಾಕಿ ಹಚ್ಚಲೇಬೇಕು ಎಂದುಕೊಂಡವರು ಸುರುಸುರು ಬತ್ತಿ ಬೆಳಗಿ ಸಂಭ್ರಮಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಡಿಸಿಪಿ ಬಿ.ಎಸ್‌. ನೇಮಗೌಡ, ‘ಕಳೆದ ವರ್ಷಕ್ಕಿಂತ ಈ ಬಾರಿ ಪಟಾಕಿ ಹಚ್ಚುವುದು ಸಾಕಷ್ಟು ಕಡಿಮೆಯಾಗಿದೆ. ಮಕ್ಕಳಲ್ಲಿ ಪರಿಸದ ಬಗ್ಗೆ ಜಾಗೃತಿ ಮೂಡುತ್ತಿರುವುದು ಒಳ್ಳೆಯ ಬೆಳವಣಿಗೆ. ಮುಂದಿನ ವರ್ಷ ಇನ್ನೂ ಪಟಾಕಿ ಬಳಕೆ ತಗ್ಗುವ ನಿರೀಕ್ಷೆ ಇದೆ. ಹೆಚ್ಚು ಜನ ಪಟಾಕಿ ಹೊಡೆದಿಲ್ಲವಾದ್ದರಿಂದ ಪಟಾಕಿ ಸಿಡಿದು ಗಾಯಗೊಂಡ ಪ್ರಕರಣಗಳೂ ಕೇಳಿಬಂದಿಲ್ಲ’ ಎಂದರು.

ಪಟಾಕಿ ಸಿಡಿದು ಗಾಯ

ಪಟಾಕಿ ಹಚ್ಚುವ ಸಂದರ್ಭದಲ್ಲಿ ಪಟಾಕಿಯ ಬೆಂಕಿ ಕಣ್ಣಿಗೆ ಬಡಿದಿದ್ದರಿಂದ ಉಣಕಲ್‌ನ ನಿವಾಸಿ ರಾಜೇಶ್‌ ಬಿಂಗೆ (28) ಎಂಬುವವರ ಕಣ್ಣಿಗೆ ಕೊಂಚ ಹಾನಿಯಾಗಿದೆ. ಅದೃಷ್ಟವಶಾತ್‌ ಕಣ್ಣಿನ ಒಳಭಾಗಕ್ಕೆ ಪಟಾಕಿ ಸಿಡಿದಿಲ್ಲ. ಹೀಗಾಗಿ, ದೃಷ್ಟಿಗೆ ಹಾನಿಯಾಗಿಲ್ಲ. ರಾಕೆಟ್‌ನಂತಹ ಪಟಾಕಿ ಹಚ್ಚುವುದರಿಂದ ಅದನ್ನು ನೋಡಲು ನಿಂತವರ ಕಣ್ಣಿಗೆ ಹೋಗಿ ಬಡಿಯುವ ಸಾಧ್ಯತೆ ಇದೆ. ಹೀಗಾಗಿ, ಸಾರ್ವಜನಿಕರು ಪಟಾಕಿ ಹಚ್ಚುವಾಗ ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ರಾಜೇಶ್‌ ಅವರಿಗೆ ಚಿಕಿತ್ಸೆ ನೀಡಿದ ಡಾ.ಎಂ.ಎಂ. ಜೋಶಿ ಆಸ್ಪತ್ರೆಯ ಡಾ. ಶ್ರೀನಿವಾಸ ಜೋಶಿ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.