ಹುಬ್ಬಳ್ಳಿ: ಹಲವು ದಶಕಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿದ್ದ ಇಲ್ಲಿನ ವಿಶ್ವೇಶ್ವರನಗರದಲ್ಲಿನ ರಕ್ಷಣಾ ಇಲಾಖೆಯ ಏಳು ಎಕರೆ ಜಾಗಕ್ಕೆ, ಪರ್ಯಾಯವಾಗಿ ಬೆಂಗಳೂರಿನಲ್ಲಿ ಜಾಗದ ಹುಡುಕಾಟ ನಡೆದಿದೆ.
ಈ ಕುರಿತು ಜಿಲ್ಲಾಧಿಕಾರಿ ದಿವ್ಯಪ್ರಭು ಮತ್ತು ಶಾಸಕ ಮಹೇಶ ಟೆಂಗಿನಕಾಯಿ ಅವರು ಶೀಘ್ರ ಬೆಂಗಳೂರಿನಲ್ಲಿ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸುವರು. ಯೋಜನೆ ಪ್ರಕಾರ, ಇಲ್ಲಿರುವ ರಕ್ಷಣಾ ಇಲಾಖೆಯ 7 ಎಕರೆ ಜಾಗವನ್ನು ರಾಜ್ಯ ಸರ್ಕಾರ ಖರೀದಿಸಲಿದೆ. ಬೆಂಗಳೂರಿನಲ್ಲಿರುವ ಸರ್ಕಾರದ ಜಾಗವನ್ನು ರಕ್ಷಣಾ ಇಲಾಖೆಗೆ ನೀಡಲಾಗುತ್ತದೆ. ಜಾಗ ಗುರುತಿಸುವ ಕೆಲಸ ನಡೆದಿದ್ದು, ಜನವಸತಿ ಪ್ರದೇಶದಲ್ಲಿರುವ ರಕ್ಷಣಾ ಇಲಾಖೆ ಜಾಗ ಶೀಘ್ರ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ.
ರಕ್ಷಣಾ ಪಡೆಯ ಕುದುರೆಗಳನ್ನು ಮೇಯಿಸಲು ಬಳಸಲಾಗುತ್ತಿದ್ದ ವಿಶ್ವೇಶ್ವರನಗರದಲ್ಲಿನ ಜಾಗವನ್ನು, ರಕ್ಷಣೆ ಮಾಡಲು ಕಷ್ಟವೆಂದು ಎನ್‌ಸಿಸಿಯವರಿಗೆ ಫೈರಿಂಗ್ ಕ್ಯಾಂಪ್ ನಡೆಸಲು ನೀಡಲಾಗಿತ್ತು. ನಗರ ಬೆಳೆದಂತೆ ಜನವಸತಿ ಪ್ರದೇಶಗಳು ಹೆಚ್ಚಾದವು, ಸಾಕಷ್ಟು ಮನೆ, ವಾಣಿಜ್ಯ ಸಂಕೀರ್ಣಗಳು ನಿರ್ಮಾಣವಾದವು. ಇದರಿಂದ ಎನ್‌ಸಿಸಿಯವರಿಗೂ ಆ ಜಾಗ ಬಳಸಲು ಸಾಧ್ಯವಾಗುತ್ತಿಲ್ಲ. ಜಾಗ ಅತಿಕ್ರಮಿಸಲು ಕೆಲವರುಮುಂದಾದಾಗ ರಕ್ಷಣ ಇಲಾಖೆ, ‘ಸೇನಾ ಭೂಮಿ, ಸಾರ್ವಜನಿಕರಿಗೆ ಪ್ರವೇಶವಿಲ್ಲ. ಅತಿಕ್ರಮಣ ಮಾಡುವಂತಿಲ್ಲ’ ಎಂದು ಎಚ್ಚರಿಕೆಯ ನಾಮಫಲಕ ಅಳವಡಿಸಿತು.
‘ಜನವಸತಿ ಪ್ರದೇಶದ ಮಧ್ಯ ರಕ್ಷಣಾ ಇಲಾಖೆ ಜಾಗ ಇರುವುದರಿಂದ, ರಸ್ತೆ ವಿಸ್ತರಿಸಲು ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲು ಸಹ ಕಷ್ಟವಾಗುತ್ತಿದೆ. ಕಳೆದ ವರ್ಷ ಈ ಜಾಗಕ್ಕೆ ಪರ್ಯಾಯವಾಗಿ ನಗರದ ಹೊರವಲಯದಲ್ಲಿ ಮೂರು ಜಾಗಗಳನ್ನು ಗುರುತಿಸಲಾಗಿತ್ತು. ಮಲ್ಲಸಂದ್ರದಲ್ಲಿರುವ ಗುಡ್ಡಗಾಡು ಪ್ರದೇಶದ ಜಾಗ ಅಂತಿಮವೂ ಆಗಿತ್ತು. ದರದಲ್ಲಿ ಹೊಂದಾಣಿಕೆ ಆಗಿಲ್ಲ. ಪರ್ಯಾಯ ಜಾಗದ ಕುರಿತು ರಕ್ಷಣಾ ಇಲಾಖೆ ಅಧಿಕಾರಿಗಳ ಜೊತೆ ನಿರಂತರ ಸಭೆ ನಡೆಸಿದ ಕಾರಣ, ಇದೀಗ ಇಲಾಖೆ ಬೆಂಗಳೂರಿನಲ್ಲಿ ಪರ್ಯಾಯ ಜಾಗ ಗುರುತಿಸುತ್ತಿದೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಳೆದ ವಾರ ಬೆಂಗಳೂರಿನಲ್ಲಿ ರಕ್ಷಣಾ ಇಲಾಖೆ ಅಧಿಕಾರಿ ಜೊತೆ, ಜಿಲ್ಲಾಧಿಕಾರಿ ದಿವ್ಯಪ್ರಭು ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸಲಾಗಿದೆ. ಬೆಂಗಳೂರಿನಲ್ಲಿ ಗುರುತಿಸುವ ಜಾಗದ ಹಾಗೂ ಇಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯದ ಕುರಿತು ಮುಂದಿನ ವಾರ ಮತ್ತೊಂದು ಸಭೆ ನಡೆಯಲಿದೆ. ಇಲ್ಲಿನ ಜಾಗವನ್ನು ರಾಜ್ಯ ಸರ್ಕಾರ ಖರೀದಿಸಿ, ಬೆಂಗಳೂರಿನಲ್ಲಿರುವ ಜಾಗವನ್ನು ರಕ್ಷಣ ಇಲಾಖೆಗೆ ನೀಡಲಾಗುತ್ತದೆ. ಇದು ರಕ್ಷಣಾ ಇಲಾಖೆ ಜಾಗವಾಗಿರುವುದರಿಂದ ಏನೆಲ್ಲ ಅಭಿವೃದ್ಧಿ ಕಾರ್ಯಗಳು ನಡೆಸಲಾಗುತ್ತದೆ ಎನ್ನುವ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕಾಗುತ್ತದೆ. ಜಿಲ್ಲಾಡಳಿತ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ’ ಎಂದು ವಿವರಿಸಿದರು.
‘ಮುಂದಿನ ವಾರ ಬೆಂಗಳೂರಲ್ಲಿ ಸಭೆ’:
‘ಜನವಸತಿ ಪ್ರದೇಶದ ಮಧ್ಯೆ ರಕ್ಷಣಾ ಇಲಾಖೆ ಜಾಗ ಇರುವುದರಿಂದ, ಅಭಿವೃದ್ಧಿ ಕಾರ್ಯಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಜನಪ್ರತಿನಿಧಿಗಳಿಂದ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ರಕ್ಷಣಾ ಇಲಾಖೆಗೆ ಪರ್ಯಾಯ ಜಾಗ ನೀಡುವ ಕುರಿತು ಪತ್ರ ವ್ಯವಹಾರ ಸಹ ನಡೆಸಿ, ಸಾಕಷ್ಟು ಬಾರಿ ಸಭೆಯೂ ನಡೆದಿದೆ. ಹುಬ್ಬಳ್ಳಿ–ಧಾರವಾಡ ಸುತ್ತಲೂ ನಾವು ಪರ್ಯಾಯ ಜಾಗ ಗುರುತಿಸಿದ್ದೇವೆ. ಮಿಲಿಟರಿ ಕಾರ್ಯಚಟುವಟಿಕೆಗಳು ಇಲ್ಲಿ ನಡೆಯದ ಕಾರಣ, ಅವರು ಬೆಂಗಳೂರಿನಲ್ಲಿ ಜಾಗ ಕೇಳುತ್ತಿದ್ದಾರೆ. ಸರ್ಕಾರದ ಮಟ್ಟದಲ್ಲಿ ಇದು ನಿರ್ಧಾರವಾಗಬೇಕಿದ್ದು, ಈ ಬಗ್ಗೆ ಶೀಘ್ರ ಬೆಂಗಳೂರಿನಲ್ಲಿ ಅಧಿಕಾರಿಗಳ ಜತೆ ಸಭೆ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.