ADVERTISEMENT

ರಾಜಕಾಲುವೆ ತಡೆಗೋಡೆ ನಿರ್ಮಾಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜುಲೈ 2023, 16:16 IST
Last Updated 26 ಜುಲೈ 2023, 16:16 IST
ಹುಬ್ಬಳ್ಳಿಯ 81ನೇ ವಾರ್ಡ್‌ನ ನಿವಾಸಿಗಳು ಬುಧವಾರ ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು
ಹುಬ್ಬಳ್ಳಿಯ 81ನೇ ವಾರ್ಡ್‌ನ ನಿವಾಸಿಗಳು ಬುಧವಾರ ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ಇಲ್ಲಿನ  81ನೇ ವಾರ್ಡ್‌ನ ರಾಜಕಾಲುವೆಯ ತಡೆಗೋಡೆ ಹಾಳಾಗಿದ್ದು, ಗೋಡೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಅಕ್ಕಾ ಪೌಂಡೇಶನ್ ಟ್ರಸ್ಟ್‌ ನೇತೃತ್ವದಲ್ಲಿ 81ನೇ ವಾರ್ಡಿನ ನಿವಾಸಿಗಳು ಬುಧವಾರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಎಲ್‌ ಅಂಡ್‌ ಟಿ ಕಂಪನಿಯವರು 24X7 ನಳ ಜೋಡಣೆ ಕಾಮಗಾರಿ ನಡೆಸುವ ವೇಳೆ ರಾಜಕಾಲುವೆಯ ತಡೆಗೊಡೆಗೆ ಹಾನಿ ಮಾಡಿರುತ್ತಾರೆ. ಇದರಿಂದಾಗಿ ಜನರ ಸಂಚಾರಕ್ಕೆ ತೊಂದರೆಯಾಗಿದೆ. ಮಹಿಳೆಯರು, ಮಕ್ಕಳು ಭಯದಿಂದ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ತಡೆಗೋಡೆ ನಿರ್ಮಿಸಿ ಎಂದು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾ ನಿರತರು ಅಸಮಾಧಾನ ವ್ಯಕ್ತಪಡಿಸಿದರು.

ರಾಜನಾಲೆಯ ತಡೆಗೊಡೆ ಹಾಳಾಗಿದ್ದರಿಂದ ಕೊಳಚೆ ನೀರು ಹೊರಗೆ ಹರಿಯುತ್ತಿದೆ. ಇದರಲ್ಲಿಯೇ ಜನರು ಸಂಚರಿಸುತ್ತಿದ್ದಾರೆ. ರೋಗ ಹರಡುವ ಸಾಧ್ಯತೆಯೂ ಇರುತ್ತದೆ. ಅಧಿಕಾರಿಗಳು ತಡೆಗೊಡೆ ನಿರ್ಮಿಸಲು ಕ್ರಮಕೈಗೊಳ್ಳಬೇಕು. ನಿರ್ಲಕ್ಷ್ಯಸಿದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುವುದು ಎಂದೂ ಎಚ್ಚರಿಸಿದರು.

ADVERTISEMENT

ಪ್ರತಿಭಟನಾಕಾರರು ಪಾಲಿಕೆ ಕಚೇರಿ ಅಧಿಕಾರಿಗೆ ಹಾಗೂ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ್‌ ಅಬ್ಬಯ್ಯ ಅವರ ಸಹಾಯಕ ಅಧಿಕಾರಿಗೆ ಮನವಿ ಸಲ್ಲಿಸಿದರು.

ರೇಷ್ಮಾ, ಮೆಹಬೂಬು ಅಲಿ, ಹುಸೇನ್‌, ನಜರ್‌, ರಿಯಾಜ್‌, ಎಸ್.ವಿ.ನಡುವಿನಮನಿ, ಚಂದ್ರಕಲಾ, ಆರ್‌.ಪಿ.ಮಾನವಿ, ಪದ್ಮಾ, ರೇಣುಕಾ ಬೀರವಳ್ಳಿ, ಕೆ.ಪ್ರೇಮಾ, ಲಲಿತಾ ಹಾಗೂ ಅಕ್ಕಾ ಪೌಂಡೇಶನ್ ಟ್ರಸ್ಟ್‌ನ ಪ್ರಮುಖರು, ವಾರ್ಡ್‌ನ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.