ಹುಬ್ಬಳ್ಳಿ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ತಕ್ಷಣವೇ ಆಡಳಿತಾಧಿಕಾರಿ ನೇಮಿಸಬೇಕು ಎಂದು ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸರ್ಕಾರವನ್ನು ಒತ್ತಾಯಿಸಿದೆ.
ಸಂಘದ ಅವಧಿ 2019 ಡಿಸೆಂಬರ್ 17ಕ್ಕೆ ಮುಗಿದಿದೆ. ಹೆಚ್ಚುವರಿ ಆರು ತಿಂಗಳ ಕಾಲಾವಧಿಯೂ ಜೂನ್ 17ಕ್ಕೆ ಮುಕ್ತಾಯವಾಗಿದೆ. ಕೊರೊನಾ ಸೋಂಕು ಹೆಚ್ಚು ಪಸರಿಸುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಚುನಾವಣೆ ನಡೆಸುವುದು ಅಸಾಧ್ಯ. ಆದ್ದರಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಆಡಳಿತಾಧಿಕಾರಿ ನೇಮಿಸಬೇಕು. ಈಗಿರುವ ಕಾರ್ಯಕಾರಿ ಸಮಿತಿ ಹಾಗೂ ಪದಾಧಿಕಾರಿಗಳ ಸಮಿತಿಯನ್ನು ವಿಸರ್ಜಿಸಬೇಕು ಎಂದು ರಾಜ್ಯ ಘಟಕದ ಅಧ್ಯಕ್ಷ ಅಶೋಕ ಎಂ.ಎಜ್ಜನ ಆಗ್ರಹಿಸಿದ್ದಾರೆ.
ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಸಮಿತಿಗಳ ಪದಾಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಲು ಅನುಮತಿ ನೀಡಬಾರದು. ಒಂದು ವೇಳೆ ಮಾಡಿದರೆ ಅದನ್ನು ಅಸಿಂಧು ಎಂದು ಪರಿಗಣಿಸಬೇಕು. ಚುನಾವಣೆ ಆಗುವವರೆಗೂ ಶಿಕ್ಷಕರಿಂದ ₹200 ಪಡೆಯಬಾರದು. ಅವಧಿ ಮುಗಿದಿರುವ ಸಮಿತಿಗೆ ಮಾನ್ಯತೆ, ಹಣಕಾಸು ವ್ಯವಹಾರ ನಡೆಸಲು ಅನುಮತಿ ನೀಡಿದರೆ ಶಿಕ್ಷಕರಿಗೆ ಅನ್ಯಾಯವಾಗಲಿದೆ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.