ADVERTISEMENT

ನೂತನ ಸಂಸತ್ ಭವನದ ಭಾಗಕ್ಕೆ ಬಸವಣ್ಣನ ಹೆಸರಿಡಲಿ: ಬಸವರಾಜ ಹೊರಟ್ಟಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಮೇ 2022, 3:00 IST
Last Updated 4 ಮೇ 2022, 3:00 IST
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ನಿತೇಶ್ ಕೆ. ಪಾಟೀಲ, ಚಂದ್ರಕಾಂತ ಬೆಲ್ಲದ, ಬಸವರಾಜ ಹೊರಟ್ಟಿ, ಸವಿತಾ ಅಮರಶೆಟ್ಟಿ ಇತರರು ಪುಷ್ಪ ನಮನ ಸಲ್ಲಿಸಿದರು
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ನಿತೇಶ್ ಕೆ. ಪಾಟೀಲ, ಚಂದ್ರಕಾಂತ ಬೆಲ್ಲದ, ಬಸವರಾಜ ಹೊರಟ್ಟಿ, ಸವಿತಾ ಅಮರಶೆಟ್ಟಿ ಇತರರು ಪುಷ್ಪ ನಮನ ಸಲ್ಲಿಸಿದರು   

ಧಾರವಾಡ: ‘ಮನುಕುಲಕ್ಕೆ ಸಮಾನತೆಯ ಸಂದೇಶ ಸಾರಿದ ಬಸವಣ್ಣ ಅವರ ಹೆಸರನ್ನು ನೂತನವಾಗಿ ನಿರ್ಮಾಣವಾಗುತ್ತಿರುವ ಸಂಸತ್‌ ಭವನದ ಸೂಕ್ತ ಭಾಗವೊಂದಕ್ಕೆ ಇಡಬೇಕು. ಜತೆಗೆ ಕಾಯಕವೇ ಕೈಲಾಸ ಎಂದು ಅವರ ಜನ್ಮದಿನದಂದು ರಜೆ ಮಾಡದೇ ಎಲ್ಲರೂ ಕರ್ತವ್ಯ ನಿರ್ವಹಿಸಿ ಗೌರವ ಸಮರ್ಪಿಸಬೇಕು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಜಿಲ್ಲಾಡಳಿತ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಡೆದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬಸವಣ್ಣನವರು ಯಾವುದೇ ಜಾತಿ, ಧರ್ಮಕ್ಕೆ, ಒಂದು ನಾಡು, ದೇಶಕ್ಕೆ ಮಾತ್ರ ಸೀಮಿತವಲ್ಲ. ಸಮಸ್ತ ಮನುಕುಲಕ್ಕೆ ಸಮಾನತೆ ಸಂದೇಶ ಸಾರಿದ್ದಾರೆ. 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಸಂಸದೀಯ ಮಾದರಿ ಪ್ರಜಾಪ್ರಭುತ್ವ ಜಾರಿಗೊಳಿಸಿದ ಹಿರಿಮೆ ಬಸವಣ್ಣನವರದು. ನವದೆಹಲಿಯಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಸಂಸತ್ ಭವನದ ಒಂದು ಸೂಕ್ತ ವಿಭಾಗಕ್ಕೆ ಬಸವಣ್ಣನವರ ಹೆಸರು ಇಡಲು ಮನವಿ ಮಾಡಿದ್ದೇನೆ’ ಎಂದರು.

ADVERTISEMENT

ವಿಶೇಷ ಉಪನ್ಯಾಸ ನೀಡಿದ ಆಕಾಶವಾಣಿಯ ನಿವೃತ್ತ ಅಧಿಕಾರಿ ಡಾ. ಬಸವರಾಜ ಸಾದರ, ‘ಶರಣ ಕ್ರಾಂತಿ ಮತ್ತು ವಚನ ಸಾಹಿತ್ಯಕ್ಕೆ ಇಡೀ ಸಮಾಜದ ನೋವು, ದೌರ್ಬಲ್ಯ ಹಾಗೂ ಅನಾರೋಗ್ಯಕ್ಕೆ ಚಿಕಿತ್ಸೆ ನೀಡುವ ಶಕ್ತಿ ಇದೆ ಎಂದರು.

ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ, ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ.ಹಿರೇಮಠ, ಬಸವರಾಜ ಸೂರಗೊಂಡ, ಎಂ.ಆರ್.ಶರಣ್ಣವರ, ಎಸ್.ಎ.ತಿಗಡಿ, ಶಂಕರ ಕುಂಬಿ ಇದ್ದರು.

ಹುಬ್ಬಳ್ಳಿಯ ಡಾ. ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್‌ನ ವಿದ್ಯಾರ್ಥಿಗಳಿಂದ ವಚನಗಾಯನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.