ADVERTISEMENT

ಹುಬ್ಬಳ್ಳಿ: ಉತ್ತರ ಪ್ರದೇಶ ಸರ್ಕಾರ ವಜಾಕ್ಕೆ ಒತ್ತಾಯ

ಯುವತಿ ಮೇಲಿನ ಅತ್ಯಾಚಾರಕ್ಕೆ ಖಂಡನೆ, ಕಠಿಣ ಕ್ರಮಕ್ಕೆ ಆಗ್ರಹಿಸಿ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 13:43 IST
Last Updated 12 ಅಕ್ಟೋಬರ್ 2020, 13:43 IST
ಹಾಥರಸ್‌ನಲ್ಲಿ ಯುವತಿ ಮೇಲಿನ ಅತ್ಯಾಚಾರ ಖಂಡಿಸಿ ಹುಬ್ಬಳ್ಳಿಯಲ್ಲಿ ಸೋಮವಾರ ವಿವಿಧ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು
ಹಾಥರಸ್‌ನಲ್ಲಿ ಯುವತಿ ಮೇಲಿನ ಅತ್ಯಾಚಾರ ಖಂಡಿಸಿ ಹುಬ್ಬಳ್ಳಿಯಲ್ಲಿ ಸೋಮವಾರ ವಿವಿಧ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು   

ಹುಬ್ಬಳ್ಳಿ: ಹಥಾರಸ್‌ನಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ ಕ್ರೌರ್ಯದ ಪರಮಾವಧಿಯಾಗಿದ್ದು, ಉತ್ತರ ಪ್ರದೇಶ ಸರ್ಕಾರವನ್ನು ವಜಾ ಮಾಡಬೇಕು ಮತ್ತು ಪ್ರಕರಣ ನಿರ್ವಹಿಸುವಲ್ಲಿ ವಿಫಲವಾದ ಹಥಾರಸ್‌ ಜಿಲ್ಲಾಡಳಿತ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.

ಸೋಮವಾರ ನಗರದಲ್ಲಿ ಕರ್ನಾಟಕ ದಲಿತ ವಿಮೋಚನಾ ಸಮಿತಿ ಜಿಲ್ಲಾ ಘಟಕ, ಹುಬ್ಬಳ್ಳಿ–ಧಾರವಾಡ ವಿವಿಧ ದಲಿತ ಸಂಘ–ಸಂಸ್ಥೆಗಳ ಒಕ್ಕೂಟ, ಜಿಲ್ಲಾ ವಾಲ್ಮೀಕಿ ನಾಯಕ ಸಂಘ, ಪ್ರಸಾದ ಅಬ್ಬಯ್ಯ ಅಭಿಮಾನಿಗಳ ಬಳಗದ ಮುಖಂಡರು ದೊಡ್ಡ ಮಟ್ಟದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್‌ ಮೂಲಕ ಪ್ರಧಾನಿ, ಗೃಹಸಚಿವರು ಮತ್ತು ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಹುಬ್ಬಳ್ಳಿ ಅಂಜುಮನ್‌ ಎ ಇಸ್ಲಾಂ ಸಂಸ್ಥೆ ಬೆಂಬಲ ವ್ಯಕ್ತಪಡಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿತು.

ಅಂಬೇಡ್ಕರ್‌ ವೃತ್ತದಿಂದ ಹೊರಟ ಮೆರವಣಿಗೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಮೂಲಕ ಮಿನಿವಿಧಾನ ಸೌಧದ ತನಕ ಸಾಗಿತು. ಈ ವೇಳೆ ಮುಖಂಡರು ತಹಶೀಲ್ದಾರ್‌ ಕಚೇರಿ ಮತ್ತು ಇದರ ಮುಂಭಾಗದ ರಸ್ತೆಯಲ್ಲಿ ಕುಳಿತು ಉತ್ತರ ಪ್ರದೇಶ ಸರ್ಕಾರ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಘೋಷಣೆಗಳನ್ನು ಕೂಗಿದರು.

ADVERTISEMENT

ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಯುವತಿಯ ಅಂತ್ಯಸಂಸ್ಕಾರಕ್ಕೆ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿಲ್ಲ. ಈ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ವ್ಯವಸ್ಥಿತ ತಂತ್ರ ಮಾಡಿದ್ದಾರೆ. ಯುವತಿ ಕುಟುಂಬದವರಿಗೆ ಸಾಂತ್ವನ ಹೇಳಲು ವಿವಿಧ ರಾಜಕೀಯ ಪಕ್ಷಗಳ ಮತ್ತು ಸಂಘಟನೆಗಳ ಮುಖಂಡರಿಗೆ ಅವಕಾಶ ನೀಡಿಲ್ಲ. ಇದೆಲ್ಲವನ್ನು ನೋಡಿದರೆ ಹಥಾರಸ್‌ ಜಿಲ್ಲಾಡಳಿತ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ಮುಖಂಡರು ಆರೋಪಿಸಿದರು.

ಈ ಘಟನೆಯಲ್ಲಿ ಅಮಾನುಷವಾಗಿ ನಡೆದುಕೊಂಡ ಸ್ಥಳೀಯ ಪೊಲೀಸರು ಕರ್ತವ್ಯ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ನಿರ್ಲಕ್ಷ್ಯ ತೋರಿದ್ದಾರೆ. ದೆಹಲಿ ಆಸ್ಪತ್ರೆಯಲ್ಲಿ ಯುವತಿ 12 ದಿನಗಳ ಕಾಲ ಇದ್ದರೂ ಉತ್ತರ ಪ್ರದೇಶ ಸರ್ಕಾರ ಸರಿಯಾಗಿ ಚಿಕಿತ್ಸೆ ಕೊಡಿಸಿಲ್ಲ ಎಂದು ದೂರಿದರು.

ಈ ಘಟನೆಗೆ ಕಾರಣರಾದ ತಪ್ಪಿತಸ್ಥರಿಗೆ ಮರಣ ದಂಡನೆ ವಿಧಿಸಬೇಕು, ಸ್ಥಳೀಯ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಮೊಕದ್ದಮೆ ದಾಖಲಿಸಬೇಕು, ಯುವತಿ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಹುಡೇದ, ದಲಿತ ಸೇನಾದ ರಾಜ್ಯ ಘಟಕದ ಅಧ್ಯಕ್ಷ ಎಂ. ಅರವಿಂದ, ಸಮತಾ ಸೇನಾದ ರಾಜ್ಯ ಘಟಕದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ, ವಿಮೋಚನಾ ಸಮಿತಿಯ ಮುಖಂಡರಾದ ಸುರೇಶ ಆರ್‌. ಖಾನಾಪುರ, ಅನಿಲ ಗೋನಾಳ, ಎಂ. ಸಿದ್ಧಾರ್ಥ, ರಮೇಶ ಕೊದ್ದಡ್ಡಿ, ಮೈಲಾರಿ ಹಂಚಿನಮನಿ, ಓಂಕಾರ ವೀರಾಪೂರ, ಸುರೇಶ ಶಿವಣ್ಣವರ, ನಿಂಗಪ್ಪ ಮಲ್ಲಮ್ಮನವರ, ಅಂಜುಮನ್‌ ಸಂಸ್ಥೆ ಅಧ್ಯಕ್ಷ ಮಹಮ್ಮದ್ ಯೂಸುಫ್‌ ಸವಣೂರು, ಪ್ರಮುಖರಾದ ಅಲ್ತಾಫ್‌ ನವಾಜ್‌ ಕಿತ್ತೂರ, ಅಲ್ತಾಫ್‌ ಹಳ್ಳೂರ, ಎಂ.ಎ. ಪಠಾಣ, ಮಹಮ್ಮದ್ ಕೋಳೂರ, ನಾಶೀರ ಅಸುಂಡಿ, ಬಾಬಾಜಾನ ಕಾರಡಗಿ, ನವೀದ ಮುಲ್ಲಾ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

’ಹೈದರಾಬಾದ್‌ನಲ್ಲಿ ಕ್ರಮ; ಹಾಥರಸ್‌ನಲ್ಲಿ ಏಕಿಲ್ಲ?’

ಹೈದರಾಬಾದ್‌ನಲ್ಲಿ ವೈದ್ಯೆ ಮೇಲೆ ಅತ್ಯಾಚಾರ ನಡೆದಾಗ ಕೆಲ ದಿನಗಳಲ್ಲಿ ಆರೋಪಿಗಳನ್ನು ಎನ್‌ಕೌಂಟರ್ ಮಾಡಲಾಗಿತ್ತು. ಉತ್ತರ ಪ್ರದೇಶದಲ್ಲಿ ಇದೇ ರೀತಿಯ ಘಟನೆ ನಡೆದರೆ ಕಠಿಣ ಕ್ರಮ ಏಕಿಲ್ಲ ಎಂದು ವಿವಿಧ ದಲಿತ ಸಂಘ–ಸಂಸ್ಥೆಗಳ ಒಕ್ಕೂಟ ಮನವಿಯಲ್ಲಿ ಪ್ರಶ್ನಿಸಿದೆ.

‘ಆದಿತ್ಯನಾಥ್‌ ಸರ್ಕಾರ ಮತಬ್ಯಾಂಕ್‌ಗಾಗಿ ನೊಂದ ಕುಟುಂಬಕ್ಕೆ ಬೆದರಿಕೆ ಹಾಕಿ, ಸಾಕ್ಷ್ಯ ನಾಶ ಮಾಡಿದೆ. ಸಂವಿಧಾನಬದ್ಧವಾಗಿ ಅಧಿಕಾರಕ್ಕೆ ಬಂದ ಉತ್ತರ ಪ್ರದೇಶ ಸರ್ಕಾರ ಮನುವಾದದಂತೆ ಆಡಳಿತ ನಡೆಸುತ್ತಿದೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ, ದಲಿತಾ ಸೇನಾ ಸಂಘಟನೆ ಅಧ್ಯಕ್ಷ ಎಂ. ಅರವಿಂದ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.