ADVERTISEMENT

ಹುಬ್ಬಳ್ಳಿ: ಸದ್ದಿಲ್ಲದೆ ಹರಡುತ್ತಿದೆ ‘ಡೆಂಗಿ’

ರೋಗದಿಂದ ಬಳಲುತ್ತಿದ್ದಾರೆ ವಾಣಿಜ್ಯನಗರಿಯ 24 ಮಂದಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 19:45 IST
Last Updated 15 ಜುಲೈ 2019, 19:45 IST
   

ಹುಬ್ಬಳ್ಳಿ: ಮುಂಗಾರು ಮಳೆ ಆರಂಭಗೊಂಡ ಬೆನ್ನಲ್ಲೇ ವಾಣಿಜ್ಯನಗರಿಯಲ್ಲಿ ಸಾಂಕ್ರಾಮಿಕ ರೋಗವಾದ ಡೆಂಗಿಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಮಳೆಗೆ ಮುಂಚೆ 8 ಮಂದಿಗೆ ಇದ್ದ ಡೆಂಗಿ, ಇದೀಗ 24 ಜನರಲ್ಲಿ ಕಾಣಿಸಿಕೊಂಡಿದೆ. ಈ ಪೈಕಿ, ಕೆಲವರು ಸರ್ಕಾರಿ ಹಾಗೂ ಉಳಿದವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಗರದಲ್ಲಿ ಡೆಂಗಿ ಆತಂಕ ಹೆಚ್ಚಾಗಿದೆ.

ಮಳೆಗಾಲ ಆರಂಭವಾದಂತೆ ನಗರದಲ್ಲಿ ಸ್ವಚ್ಛತೆ ಮರೀಚಿಕೆಯಾಗುತ್ತಿದೆ. ವಾರ್ಡ್‌ಗಳಲ್ಲಿ ತಾಜ್ಯ ಸರಿಯಾಗಿ ವಿಲೇವಾರಿಯಾಗುವುದಿಲ್ಲ. ಇದರಿಂದಾಗಿ, ಸ್ಥಳೀಯರು ಖಾಲಿ ಜಾಗ ಅಥವಾ ರಸ್ತೆ ಬದಿ ಕಸದ ತಂದು ಹಾಕುವುದು ಸಾಮಾನ್ಯವಾಗಿದೆ. ಮಳೆ ನೀರಿನ ಹರಿವಿನಿಂದಾಗಿ ಕಸ–ಕಡ್ಡಿಯಿಂದ ಕಟ್ಟಿಕೊಳ್ಳುವ ಗಟಾರಗಳನ್ನು ಸ್ವಚ್ಛಗೊಳಿಸುವವರೇ ಇಲ್ಲವಾಗಿದೆ. ಇದರಿಂದಾಗಿ, ಸಾಂಕ್ರಾಮಿಕ ರೋಗಗಳಾದ ಡೆಂಗಿ, ಚಿಕೂನ್ ಗುನ್ಯಾ, ಮಲೇರಿಯಾ ಹಾಗೂ ವಿಷಮ ಜ್ವರದಂತಹ ಕಾಯಿಲೆಗಳು ಜನರಲ್ಲಿ ಕಾಣಿಸಿಕೊಳ್ಳುತ್ತಿವೆ.

‘ಪಾಲಿಕೆ ವ್ಯಾಪ್ತಿಯಲ್ಲಿ ಡೆಂಗಿ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿಯೇ 150 ಮಂದಿಯ ತಂಡವನ್ನು ರಚಿಸಲಾಗಿದೆ. ಈ ತಂಡ ಶಂಕಿತ ಡೆಂಗಿ ಪ್ರಕರಣಗಳು ಪತ್ತೆಯಾಗಿರುವ ಪ್ರದೇಶಕ್ಕೆ, ತಿಂಗಳ ಮೊದಲ ಹಾಗೂ ಮೂರನೇ ಶುಕ್ರವಾರ ಭೇಟಿ ನೀಡಿ ಜಾಗೃತಿ ಮೂಡಿಸುತ್ತಾರೆ. ಪ್ರತಿ ದಿನ 30 ಮನೆಗಳಿಗೆ ತೆರಳಿ ಲಾರ್ವಾ ಸಮೀಕ್ಷೆ ನಡೆಸುತ್ತಾರೆ. ಜತೆಗೆ, ಸೊಳ್ಳೆಗಳು ಹರಡದಂತೆ ಫಾಗಿಂಗ್‌ ಮಾಡಿಸಲಾಗುತ್ತಿದೆ’ ಎಂದು ಮಹಾನಗರ ಪಾಲಿಕೆ ವೈದ್ಯಾಧಿಕಾರಿ ಡಾ. ಪ್ರಭು ಬಿರಾದಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

‘ಗಟಾರಗಳಲ್ಲಿ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಬೀದಿ ಹಾಗೂ ಮನೆಯ ಸುತ್ತಮುತ್ತ ಕಸದ ರಾಶಿ ಇರದಂತೆ ಎಚ್ಚರಿಕೆ ವಹಿಸಬೇಕು. ಮನೆಯಲ್ಲಿ ಡ್ರಮ್, ಟೈರ್‌, ತೆಂಗಿನ ಚಿಪ್ಪು, ಪ್ಲಾಸ್ಟಿಕ್‌ನಲ್ಲಿ ಧೀರ್ಘಾವಧಿಯವರೆಗೆ ಸಂಗ್ರಹವಾಗುವ ಮಳೆ ನೀರಿನಿಂದಾಗಿ ಡೆಂಗಿ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಹಾಗಾಗಿ, ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಬೇಕು’ ಎಂದು ಸಲಹೆ ನೀಡಿದರು.

ಡೆಂಗಿ ಲಕ್ಷಣಗಳು:ಅತಿಯಾದ ಜ್ವರ, ಮೈಕೈನೋವು, ವೀಪರಿತ ತಲೆನೋವು, ಸುಸ್ತು, ಚರ್ಮದ ಮೇಲೆ ಗುಳ್ಳೆಗಳು ಹಾಗೂ ಮೂಗಿನಿಂದ ರಕ್ತ ಸೋರುವಿಕೆ ಡೆಂಗಿ ರೋಗದ ಸಾಮಾನ್ಯ ಲಕ್ಷಣಗಳಾಗಿವೆ. ಯಾರಿಗಾದರೂ, ಮೇಲಿನ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಸಮೀಪದ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಆರಂಭದಲ್ಲೇ ಡೆಂಗಿಗೆ ಚಿಕಿತ್ಸೆ ಪಡೆಯುವುದರಿಂದ, ಮುಂದೆ ಆಗುವ ಅನಾಹುತದಿಂದ ತಪ್ಪಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.