
ಹುಬ್ಬಳ್ಳಿ: ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಬೇಕು. ಆಗ ಮಾತ್ರ ಉನ್ನತ ಸ್ಥಾನಕ್ಕೇರಿ ಮತ್ತೊಬ್ಬರಿಗೆ ಸಹಾಯ ಮಾಡಲು ಸಾಧ್ಯ’ ಕೆನರಾ ಬ್ಯಾಂಕ್ ಹೈದರಾಬಾದ್ ಶಾಖೆಯ ನಿವೃತ್ತ ಉಪ ಮಹಾಪ್ರಬಂಧಕ ಶೀಲಂ ಗಿರಿ ಹೇಳಿದರು.
ಇಲ್ಲಿನ ಕರ್ನಾಟಕ ವಾಣಿಜ್ಯೋಮ ಸಂಸ್ಥೆ ಸಭಾಂಗಣದಲ್ಲಿ ಸಮೃದ್ಧಿ ಚಾರಿಟಬಲ್ ಟ್ರಸ್ಟ್ ಹಾಗೂ ಕೆನರಾ ಬ್ಯಾಂಕ್ ವತಿಯಿಂದ ಶನಿವಾರ ನಡೆದ ‘ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿಗಳ ಕಿಟ್’ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಮಕ್ಕಳು ದುಶ್ಚಟಗಳ ದಾಸರಾಗದೆ, ಹೆತ್ತವರ ಹಾಗೂ ಗುರು–ಹಿರಿಯ ಮಾರ್ಗದರ್ಶನದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕು. ಪರಿಶ್ರಮದ ಓದು ಬದುಕಿಗೆ ಆಸರೆಯಾಗುತ್ತದೆ. ಮಕ್ಕಳು ಓದಿನ ಜತೆಗೆ ಕೌಶಲ ಬೆಳೆಸಿಕೊಳ್ಳಬೇಕು’ ಎಂದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಸ್.ಪಿ. ಸಂಶಿಮಠ ಮಾತನಾಡಿ, ‘ಪ್ರತಿಭಾ ಪುರಸ್ಕಾರ ಪಡೆದ ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಿ, ಕಲಿತ ಶಾಲೆಗೆ ಹಾಗೂ ಪಾಲಕರಿಗೆ ಒಳ್ಳೆಯ ಹೆಸರು ತರಬೇಕು. ಮುಂದೆ ನೀವು ಸಹ ದೊಡ್ಡ ವ್ಯಕ್ತಿಗಳಾಗಿ ಬಡ ಮಕ್ಕಳಿಗೆ ಓದಲು ಸಹಾಯ ಮಾಡಬೇಕು’ ಎಂದು ಸಲಹೆ ನೀಡಿದರು.
ಸಮೃದ್ಧಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಿ.ಎಲ್. ನಾಗೇಂದ್ರಪ್ಪ, ಬ್ಯಾಂಕ್ ಅಧಿಕಾರಿಗಳಾದ ರಮೇಶ ನಾಯಕ, ಸಂಜೀವ ಕುಮಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.