ADVERTISEMENT

ಹುಬ್ಬಳ್ಳಿ | ಧರ್ಮಸ್ಥಳ ಪುಟಕ್ಕಿಟ್ಟ ಚಿನ್ನ: ಚಕ್ರವರ್ತಿ ಸೂಲಿಬೆಲಿ

ಧಾರ್ಮಿಕ ಕ್ಷೇತ್ರದ ವಿರುದ್ಧ ಷಡ್ಯಂತ್ರ: ಆರೋಪ, ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 5:11 IST
Last Updated 18 ಆಗಸ್ಟ್ 2025, 5:11 IST
ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಸದಸ್ಯರು ಹುಬ್ಬಳ್ಳಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು
ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಸದಸ್ಯರು ಹುಬ್ಬಳ್ಳಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ‘ಜಿಹಾದಿಗಳು, ಮಾವೋವಾದಿಗಳು ಸೇರಿ ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಧರ್ಮಸ್ಥಳವನ್ನು ನಾಶ ಮಾಡಲು ಯತ್ನಿಸಿದ್ದರು. ಅತ್ಯಾಚಾರ, ಕೊಲೆ ಪ್ರಕರಣ ಆರೋಪಿಸಿ ಹತ್ತಾರು ಕಡೆ ನೆಲ ಅಗೆಸಿದರು. ಇದೀಗ ಧರ್ಮಸ್ಥಳ ಆರೋಪದಿಂದ ಮುಕ್ತವಾಗಿ ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುತ್ತಿದೆ’ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲಿ ಹೇಳಿದರು.

ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ನಗರದ ಇಂದಿರಾ ಗಾಜಿನ ಮನೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

‘2014ರಲ್ಲಿ ನಡೆದ ಕೊಲೆ ಪ್ರಕರಣದಿಂದ ಇಲ್ಲಿಯವರೆಗೂ ಧರ್ಮಸ್ಥಳದ ವಿರುದ್ಧ ಒಂದಿಲ್ಲೊಂದು ಆರೋಪ ಮಾಡುತ್ತ ಬಂದಿದ್ದರು. ಇತ್ತೀಚಿಗೆ ಶವ ಹೂತಿಟ್ಟಿರುವ ಆರೋಪ ಮಾಡಿ, ಎಸ್‌ಐಟಿ ತನಿಖೆಗೆ ಒತ್ತಾಯಿಸಿದರು. ಸುಮಾರು ಹದಿನೇಳು ಜಾಗ ಅಗೆದು ಶೋಧ ನಡೆಸಿದರೂ, ಒಂದೇ ಒಂದು ಶವ ಪತ್ತೆಯಾಗಿಲ್ಲ. ಹಿಂದೂಗಳ ಧಾರ್ಮಿಕ ಕ್ಷೇತ್ರವನ್ನು ನಾಶ ಮಾಡಬೇಕೆನ್ನುವ ಏಕೈಕ ಉದ್ದೇಶ ಅವರದ್ದಾಗಿತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಸರ್ಕಾರವೂ ಆರೋಪಗಳಿಗೆ ಕಿವಿಗೊಟ್ಟು ತನಿಖೆಗೆ ಆದೇಶಿಸಿತು. ಕೊನೆಗೂ ಸತ್ಯವೇ ಗೆದ್ದಿತು. ಆರೋಪ ಹುಸಿಯೆಂದು ಅರಿವಾದಾಗ ಬೆನ್ನಿಗೆ ನಿಲ್ಲುತ್ತಿರುವ ಧರ್ಮಸ್ಥಳ ಆರಾಧಕರು, ಆರೋಪ ಕೇಳಿ ಬಂದಾಗ ವಿರೋಧಿಸಬೇಕಿತ್ತು. ಆರೋಪ ಮಾಡುವವರು ನಾವು– ನೀವು ತಿಳಿದುಕೊಂಡಷ್ಟು ಸಾಮಾನ್ಯರಲ್ಲ’ ಎಂದು ಎಚ್ಚರಿಸಿದರು.

‘ಹಿಂದೂ ಧರ್ಮ‌ವನ್ನು ನಾಶ ಮಾಡಬೇಕೆನ್ನುವ ಶಕ್ತಿ ಹಿಂದೆಂದಿಗಿಂತಲೂ ಶಕ್ತಿಯುತವಾಗಿದೆ. ಸರ್ಕಾರ ಸಹ ಷಡ್ಯಂತ್ರ ನಡೆಸುತ್ತಿದೆ. ಧರ್ಮ ಜಾಗೃತಿಗೆ ನಾವೆಲ್ಲ ಒಗ್ಗಟ್ಟು ಪ್ರದರ್ಶಿಸದಿದ್ದರೆ, ಹಿಂದೂಗಳಿಗೆ ಉಳಿಗಾಲವಿಲ್ಲ. ಧರ್ಮಸ್ಥಳದ ವಿರುದ್ಧ ಆರೋಪ ಮಾಡುವವರ ಹಿಂದೆ ಯಾರಿದ್ದಾರೆ ಎನ್ನುವ ಕುರಿತು ತನಿಖೆ ನಡೆಸಲು ಸರ್ಕಾರಕ್ಕೆ ಒತ್ತಡ ಹಾಕಬೇಕು. ಕೇಂದ್ರದ ಎನ್‌ಐಎ, ಸಿಬಿಐನಂಥ ತಂಡದಿಂದ ತನಿಖೆ ನಡೆಯಬೇಕು. ಆಗ ಮಾತ್ರ ಅವರ ನಿಜವಾದ ಬಂಡವಾಳ ಬಹಿರಂಗವಾಗುತ್ತದೆ. ವಿದೇಶದಿಂದ ಎಷ್ಟು ಹಣ ಬಂದಿದೆ, ಯಾವ್ಯಾವ ಎನ್‌ಜಿಒಗಳು ಅವರ ಬೆನ್ನಿಗೆ ನಿಂತಿವೆ ಎನ್ನುವುದು ತಿಳಿಯಲಿದೆ’ ಎಂದರು.

ಸಭೆಗೂ ಮುನ್ನ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಇಂದಿರಾ ಗಾಜಿನಮನೆ ಆವರಣದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಶಾಸಕ ಮಹೇಶ ಟೆಂಗಿನಕಾಯಿ, ರಾಜಣ್ಣ ಕೊರವಿ, ಶಿವು ಮೆಣಸಿನಕಾಯಿ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

ಧರ್ಮ ಕ್ಷಣೆಗೆ ಎಲ್ಲರೂ ಕಟಿಬದ್ಧರಾಗಬೇಕು.‌ ಷಡ್ಯಂತ್ರ ನಡೆಸುವವರ ವಿರುದ್ಧ ಕಠಿಣ ಸಂದೇಶ ಸಾರಬೇಕು
ಮಹಾದೇವ ಕರಮರಿ ಉದ್ಯಮಿ
ಹಿಂದೂಗಳ ಶ್ರದ್ಧಾ ಕೇಂದ್ರದ ಮೇಲೆ ವ್ಯವಸ್ಥಿತವಾಗಿ ಅಪಪ್ರಚಾರ ನಡೆಯುತ್ತಿದೆ. ಧರ್ಮ ಜಾಗೃತಿಗೆ ಎಲ್ಲರೂ ಮುಂದಾಗಬೇಕು
ಸುಭಾಸಸಿಂಗ್ ಜಮಾದಾರ ಹಿಂದೂ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.