ಹುಬ್ಬಳ್ಳಿ: ‘ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆಗಸ್ಟ್ 11ರಂದು ಧಾರವಾಡದಲ್ಲಿ ಮೌನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ’ ಎಂದು ಧರ್ಮಸ್ಥಳ ಜನಜಾಗೃತಿ ವೇದಿಕೆಯ ಅಧ್ಯಕ್ಷ ರಾಜಣ್ಣ ಕೊರವಿ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಧರ್ಮಸ್ಥಳ ಭಕ್ತವೃಂದ ವೇದಿಕೆಯಿಂದ ಅಂದು ಬೆಳಿಗ್ಗೆ 11 ಗಂಟೆಗೆ ಧಾರವಾಡದ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ನಡೆಯಲಿದೆ. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಎರಡು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.
‘ಧರ್ಮಸ್ಥಳ ಕ್ಷೇತ್ರಕ್ಕೆ 800 ವರ್ಷಗಳ ಇತಿಹಾಸ ಇದೆ. ರಾಜ್ಯ ಮಾತ್ರವಲ್ಲದೆ ವಿವಿಧ ರಾಜ್ಯಗಳಿಂದ ಪ್ರತಿದಿನ 50 ಸಾವಿರದಿಂದ 1 ಲಕ್ಷ ಜನ ಅಲ್ಲಿಗೆ ಭೇಟಿ ನೀಡುತ್ತಾರೆ. ಆದರೆ, ಈ ಕ್ಷೇತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತುಚ್ಛ ಹೇಳಿಕೆ ನೀಡುತ್ತಿರುವುದರಿಂದ ಭಕ್ತರಿಗೆ ನೋವಾಗಿದೆ’ ಎಂದರು.
‘ಗಿರೀಶ ಮಟ್ಟಣ್ಣವರ್, ಮಹೇಶ ಶೆಟ್ಟಿ ತಿಮರೋಡಿ, ಸಮೀರ್ ಎಂ.ಡಿ., ಸಂತೋಷ್ ಶೆಟ್ಟಿ, ಜಯಂತ ಟಿ., ಅಜಯ್ ಅಂಚನ್ ಅವರು ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಬಗ್ಗೆ ಕೀಳು ಮಟ್ಟದ ಭಾಷೆ ಬಳಸಿ, ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ಧಾರೆ. ಅವರನ್ನು ಪ್ರಚೋದಿಸುತ್ತಿರುವವರು ಯಾರು?, ಅಪಪ್ರಚಾರಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ಸೂಕ್ತ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.
‘ವೀರೇಂದ್ರ ಹೆಗ್ಗಡೆಯವರು 57 ವರ್ಷಗಳಿಂದ ಧರ್ಮಾಧಿಕಾರಿಯಾಗಿದ್ದಾರೆ. ಅವರ ಸಮಾಜ ಸೇವಾ ಕಾರ್ಯಗಳು ಧರ್ಮಸ್ಥಳಕ್ಕೆ ಮಾತ್ರ ಸೀಮಿತವಾಗದೆ, ರಾಜ್ಯದ ವಿವಿಧ ಜಿಲ್ಲೆಗಳಿಗೂ ವಿಸ್ತರಣೆಯಾಗಿವೆ. ಇದನ್ನು ಕೆಲವರಿಗೆ ಸಹಿಸಲು ಆಗುತ್ತಿಲ್ಲ’ ಎಂದರು.
‘ಧರ್ಮಸ್ಥಳದಲ್ಲಿನ ಅಪರಾಧ ಪ್ರಕರಣಗಳ ಕುರಿತು ಈಗಾಗಲೇ ಎಸ್‌ಐಟಿ ತನಿಖೆ ನಡೆಸುತ್ತಿದೆ. ಅದನ್ನು ಸ್ವಾಗತಿಸುತ್ತೇವೆ. ಆದರೆ, ವೀರೇಂದ್ರ ಹೆಗ್ಗಡೆಯವರ ವಿರುದ್ಧ ಪಿತೂರಿ ನಡೆಯುತ್ತಿದೆ. ಈ ಬಗ್ಗೆ ಸರ್ಕಾರ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
ಪಿರಾಜಿ ಖಂಡೇಕರ, ವಸಂತ ಅರ್ಕಾಚಾರ್, ಮಾರುತಿ ಶೇಠ್, ಸ್ವಪ್ನಾ ಹಿರೇಮಠ ಇದ್ದರು.
‘ಕುತಂತ್ರಿಗಳಿಗೆ ಶಿಕ್ಷೆಯಾಗಲಿ’
ಹುಬ್ಬಳ್ಳಿ: ‘ಧರ್ಮಸ್ಥಳದ ದೇವಸ್ಥಾನ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಅಶ್ರದ್ಧೆ ಮೂಡಿಸುವ ಕೆಲಸವನ್ನು ಕೆಲವು ಕುತಂತ್ರಿಗಳು ಮಾಡುತ್ತಿದ್ದಾರೆ. ಇದು ಖಂಡನೀಯ’ ಎಂದು ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತದ ಧಾರ್ಮಿಕ ಪ್ರಚಾರಕ ಬಸವರಾಜ್ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಧರ್ಮಸ್ಥಳದಲ್ಲಿನ ಅಪರಾಧ ಪ್ರಕರಣಗಳ ಕುರಿತು ತನಿಖೆಗೆ ಎಸ್‌ಐಟಿ ರಚನೆ ಮಾಡಿದ ರೀತಿ ಕುತಂತ್ರಿಗಳ ಬಗ್ಗೆ ತನಿಖೆ ನಡೆಸಿ ಅವರಿಗೆ ಶಿಕ್ಷೆ ಕೊಡಿಸುವ ಕೆಲಸ ಆಗಬೇಕು’ ಎಂದರು.
‘ಧರ್ಮಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವುದನ್ನು ವಿಶ್ವ ಹಿಂದೂ ಪರಿಷತ್ ಸಹಿಸುವುದಿಲ್ಲ. ಬಡವರು ಶ್ರೀಮಂತರೆನ್ನದೆ ಎಲ್ಲ ವರ್ಗದವರು ದೇವಸ್ಥಾನಕ್ಕೆ ನಡೆದುಕೊಳ್ಳುತ್ತಾರೆ. ಕ್ಷೇತ್ರದ ಹೆಸರು ಹಾಳು ಮಾಡಲು ಯತ್ನಿಸಿದರೆ ತಕ್ಕ ಉತ್ತರ ಕೊಡಲಾಗುವುದು’ ಎಂದು ಎಚ್ಚರಿಸಿದರು.
‘ಅಪರಾಧ ಕೃತ್ಯಗಳ ಬಗ್ಗೆ ದಾಖಲೆಗಳಿದ್ದರೆ ನ್ಯಾಯಾಲಯದ ಮೊರೆ ಹೋಗಬೇಕು. ಅದನ್ನು ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ. ಸರ್ಕಾರದ ಸಹ ಈ ವಿಷಯದಲ್ಲಿ ಜಾಣ ಕುರುಡು ಪ್ರದರ್ಶಿಸುತ್ತಿದೆ’ ಎಂದರು. ಪ್ರದೀಪ್ ಶೆಟ್ಟಿ ಗಣಪತಿ ಸ್ವಾದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.