ಧಾರವಾಡ: ನಗರದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಕೈಚಳಕದಲ್ಲಿ ಜಿಲ್ಲಾಧಿಕಾರಿ ಕಚೇರಿ, ನಿವಾಸ ಆವರಣದ ಗೋಡೆ, ಕಾಂಪೌಂಡ್ ಮೇಲೆ ವೈವಿಧ್ಯಮಯ ಚಿತ್ತಾರಗಳು ಅರಳಿವೆ.
ಎರಡು ದಿನಗಳಿಂದ 40 ಚಿತ್ರಕಲಾ ವಿದ್ಯಾರ್ಥಿಗಳು ಹಾಗೂ ನಾಲ್ವರು ಶಿಕ್ಷಕರು ಚಿತ್ರಗಳನ್ನು ರಚಿಸಿ, ಗೋಡೆಯ ಸೊಬಗು ಹೆಚ್ಚಿಸಿದ್ದಾರೆ.
ಸಾಹಿತಿಗಳಾದ ದ.ರಾ.ಬೇಂದ್ರೆ, ವಿ.ಕೃ.ಗೋಕಾಕ, ಗಿರೀಶ ಕಾರ್ನಾಡ, ಸಂಗೀತಗಾರರಾದ ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಶಿ, ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು ಮೊದಲಾದ ಸಾಧಕರ ಚಿತ್ರಗಳನ್ನು ಬಿಡಿಸಿದ್ದಾರೆ.
ಜನಪದ ಕಲೆ, ಮಹಾರಾಷ್ಟ್ರ ಮೂಲದ ವರ್ಲಿಕಲೆಯ ಸೊಬಗು, ಸ್ಥಳೀಯ ಸ್ಮಾರಕಗಳು, ವಾದ್ಯಗಳು, ಗ್ರಾಮೀಣ ಪರಿಸರ, ಪಕ್ಷಿಗಳು, ವನ್ಯಜೀವಿಗಳ ಜೀವನ ಶೈಲಿ ಚಿತ್ರಗಳು ಇವೆ. ಅಕ್ರಾಲಿಕ್, ಅಲ್ಟ್ರೀಮಾ ವರ್ಣದಲ್ಲಿ ಚಿತ್ರಗಳನ್ನು ಬಿಡಿಸಿದ್ದಾರೆ.
‘ಸಾಹಿತ್ಯ, ಸಂಗೀತ, ಪ್ರಕೃತಿ ಮತ್ತು ಕಲೆಗೆ ಸಂಬಂಧಿಸಿದ ಚಿತ್ರಗಳನ್ನು ರಚಿಸಲಾಗಿದೆ. ಹಲವು ವರ್ಷಗಳವರೆಗೆ ಬಾಳಿಕೆ ಬರುತ್ತವೆ. ಚಿತ್ರಗಳು ಜನರ ಕಣ್ಮನ ಸೆಳೆಯುತ್ತವೆ’ ಎಂದು ಪ್ರಾಚಾರ್ಯ ಬಸವರಾಜ ಕುರಿಯವರ ತಿಳಿಸಿದರು.
ಪ್ರೊ.ಎಸ್.ಕೆ. ಪತ್ತಾರ, ಶಿವಕುಮಾರ ಕಂಕನವಾಡಿ ಇದ್ದರು.
‘ಸ್ಥಳೀಯ ಪರಂಪರೆ ಪರಿಚಯ’
’ಸ್ಥಳೀಯ ಕಲೆ ಸಾಹಿತ್ಯ ಸಂಗೀತ ಮತ್ತು ರಂಗಭೂಮಿ ಸಾಧಕರನ್ನು ಸರ್ಕಾರಿ ಕಚೇರಿ ಹಾಗೂ ಕಟ್ಟಡಗಳಲ್ಲಿ ಚಿತ್ರಿಸುವುದರಿಂದ ನಮ್ಮ ಪರಂಪರೆ ಸಂಸ್ಕೃತಿ ಸಾಧನೆಯನ್ನು ನೆನಪಿಸಿಕೊಂಡಂತೆ ಆಗುತ್ತದೆ. ಯುವ ಪೀಳಿಗೆಗೆ ನಮ್ಮ ಜಿಲ್ಲೆಯ ಹೆಮ್ಮೆಯ ಸಂಗತಿ ಸಾಧನೆಗಳನ್ನು ತಿಳಿಸುವುದು ಈ ಚಿತ್ರಕಲೆಗಳ ಉದ್ದೇಶವಾಗಿದೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು. ‘ನಿತ್ಯ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಗೆ ವಿವಿಧ ಕಾರಣಗಳಿಗಾಗಿ ಭೇಟಿ ನೀಡುತ್ತಾರೆ. ಚಿತ್ರಗಳನ್ನು ನೋಡಿದಾಗ ಅವರ ಮನ ಮನೆಗಳಿಗೆ ಜಿಲ್ಲೆಯ ಇತಿಹಾಸ ಸಾಧಕರ ಮಾಹಿತಿ ತಲುಪುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.