
ಧಾರವಾಡ: ‘ಆರ್ಯ (ಪಿ.ಆರ್.ಆಚಾರ್ಯ) ಅವರು ಬಹುಮುಖ ಪ್ರತಿಭೆಯಾಗಿದ್ದರು. ಅವರು ಚಿತ್ರಕಲೆ, ಸಾಹಿತ್ಯದಲ್ಲಿ ಪಾಂಡಿತ್ಯ ಗಳಿಸಿದ್ದರು’ ಎಂದು ಅಥಣಿಯ ವಿಮೋಚನಾ ದೇವದಾಸಿ ಪುನರ್ವಸತಿ ಸಂಸ್ಥೆ ಅಧ್ಯಕ್ಷ ಬಿ.ಎಲ್.ಪಾಟೀಲ ಹೇಳಿದರು.
ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದ ಭವನದಲ್ಲಿ ಭಾನುವಾರ ನಡೆದ ‘ಆರ್ಯ ಸ್ಮರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರ್ಯ ಅವರು ಸರಳ ಜೀವನ ನಡೆಸಿದರು. ಅವರ ಚಿಂತನೆಗಳು ಉನ್ನತವಾಗಿದ್ದವು. ಅಥಣಿಯ ದೇವದಾಸಿಯರ ಮಕ್ಕಳ ಅಭ್ಯುದಯಕ್ಕೆ ಶ್ರಮಿಸಿದರು ಎಂದರು.
ಚಿತ್ರ ಕಲಾವಿದೆ ಗಾಯತ್ರಿ ದೇಸಾಯಿ ಮಾತನಾಡಿ, ‘ಆರ್ಯ ಅವರು ಜ್ಞಾನ ಸಂಪಾದನೆಗೆ ಆದ್ಯತೆ ನೀಡಿದ್ದರು. ಪಡೆದುಕೊಂಡ ಜ್ಞಾನವನ್ನು ಪಸರಿಸುತ್ತಿದ್ದರು. ಚಿತ್ರಕಲೆಯಲ್ಲಿ ತಮ್ಮದೇ ವಿಶಿಷ್ಟ ಶೈಲಿ ರೂಢಿಸಿಕೊಂಡಿದ್ದರು’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿ.ಸಿ.ತಲ್ಲೂರ ಮಾತನಾಡಿ, ಉಡುಪಿಯಿಂದ ಧಾರವಾಡಕ್ಕೆ ಬಂದ ಆರ್ಯ ಅವರು ಸದಾ ಕ್ರಿಯಾಶೀಲರು. ಸಮಯ ನಿರ್ವಹಣೆ, ಶಿಸ್ತುಬದ್ಧತೆ ರೂಢಿಸಿಕೊಂಡಿದ್ದರು ಎಂದರು. ಲಾತವ್ಯ ಆಚಾರ್ಯ ಮಾತನಾಡಿದರು. ಲೇಖಕ ಹ.ವೆಂ.ಕಾಖಂಡಿಕಿ ನಿರೂಪಿಸಿದರು.
‘ಆರ್ಯರ ಸೃಜನಶೀಲ ಸಾಹಿತ್ಯ: ನಾಟಕ’ ಗೋಷ್ಠಿಯಲ್ಲಿ ಪ್ರಕಾಶ ಗರುಡ, ವಿಜಯಸಿಂಹ ಆಚಾರ್ಯ, ಶಶಿಧರ ನರೇಂದ್ರ ಹಾಗೂ ‘ಆರ್ಯ ಅವರ ಸೃಜನಶೀಲ ಸಾಹಿತ್ಯ: ಕಥೆಗಳು’ ಗೋಷ್ಠಿಯಲ್ಲಿ ಶಾಮಸುಂದರ ಬಿದರಕುಂದಿ, ಹರ್ಷ ಡಂಬಳ, ವಿನಾಯಕ ನಾಯಕ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.