ಧಾರವಾಡ: ‘ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಫೆ.3 ಮತ್ತು 4ರಂದು ನಗರದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ’ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ. ಲಿಂಗರಾಜ ಅಂಗಡಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾಧಿಕಾರಿ ದಿವ್ಯಪ್ರಭು ಅವರು 3ರಂದು ಬೆಳಿಗ್ಗೆ 8.30ಕ್ಕೆ ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು. ವಿದ್ಯಾವರ್ಧಕ ಸಂಘದ ಬಸವಪ್ರಭು ಹೊರಕೇರಿ ಕನ್ನಡ ಧ್ವಜಾರೋಹಣ ಹಾಗೂ ಲಿಂಗರಾಜ ಅಂಗಡಿ ಪರಿಷತ್ ಧ್ವಜಾರೋಹಣ ನೆರವೇರಿಸುವರು. 9.30ಕ್ಕೆ ‘ಕನ್ನಡಕ್ಕಾಗಿ ನಡಿಗೆ’ ಆರಂಭವಾಗಲಿದೆ. ಡಿಡಿಪಿಐ ಎಸ್.ಎಸ್.ಕೆಳದಿಮಠ ಚಾಲನೆ ನೀಡುವರು. ‘ಕೇಳೋಣ ಬನ್ನಿ’ ಕವಿಗೋಷ್ಠಿ 9.30ಕ್ಕೆ ಆರಂಭವಾಗಲಿದೆ. ಕೃಷಿ ಅಧಿಕಾರಿ ಚನ್ನಪ್ಪ ಅಂಗಡಿ ಆಶಯ ನುಡಿಯಾಡುವರು. ಕವಿ ಪುಟ್ಟು ಕುಲಕರ್ಣಿ ಅಧ್ಯಕ್ಷತೆ ವಹಿಸುವರು’ ಎಂದರು.
‘ಸಾಹಿತಿ ಮೃತ್ಯುಂಜಯ ರುಮಾಲೆ ಅವರು 10.30ಕ್ಕೆ ಸಮ್ಮೇಳನದ ಉದ್ಘಾಟನೆ ನೆರವೇರಿಸುವರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಆಶಯ ನುಡಿಯಾಡುವರು. ಸಮ್ಮೇಳನಾಧ್ಯಕ್ಷ ಪ್ರೊ. ಎಸ್.ಆರ್.ಗುಂಜಾಳ ಮಾತನಾಡುವರು. ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಮ್ಮೇಳನಾಧ್ಯಕ್ಷರ ಸಾಹಿತ್ಯ ಪ್ರದರ್ಶನ ಉದ್ಘಾಟಿಸುವರು. ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಪುಸ್ತಕ ಬಿಡುಗಡೆಗೊಳಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಪುಸ್ತಕ ಮಳಿಗೆ ಉದ್ಘಾಟಿಸುವರು’ ಎಂದು ತಿಳಿಸಿದರು.
‘ಮಧ್ಯಾಹ್ನ 2 ಗಂಟೆಗೆ ಮೊದಲ ಗೋಷ್ಠಿ ನಡೆಯಲಿದೆ. ‘ನುಡಿಗಳ ಉಳಿವನ ಉಪಾಯಗಳು’ ಕುರಿತು ಶ್ಯಾಮಸುಂದರ ಬಿದರಕುಂದಿ ಹಾಗೂ ‘ಭಾಷೆ ಸಂವಹನ– ಕಲಿಕೆ ಮತ್ತು ಶಿಕ್ಷಣ ಮಾಧ್ಯಮ’ ಕುರಿತು ವೆಂಕಟೇಶ ಮಾಚಕನೂರ ಮಾತನಾಡುವರು. ಪ್ರೊ. ದುಷ್ಯಂತ ನಾಡಗೌಡ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 4 ಗಂಟೆಗೆ ಎರಡನೇ ಗೋಷ್ಠಿ ನಡೆಯಲಿದೆ. ‘ವಚನ ಸಾಹಿತ್ಯದಲ್ಲಿ ಸಂವಿಧಾನದ ತತ್ವಗಳು’ ಕುರಿತು ವಕೀಲ ಕೆ.ಎಸ್.ಕೋರಿಶೆಟ್ಟರ ಹಾಗೂ ‘ಬಸವಣ್ಣ ಸಾಂಸ್ಕೃತಿಕ ನಾಯಕ’ ಕುರಿತು ಪ್ರೊ. ಅನಸೂಯಾ ಕಾಂಬಳೆ ಮಾತನಾಡುವರು. ನಿವೃತ್ತ ನ್ಯಾಯಾಧೀಶ ಎಸ್.ಎಚ್. ಮಿಟ್ಟಲಕೋಡ ಅಧ್ಯಕ್ಷತೆ ವಹಿಸುವರು. ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ಉದ್ಘಾಟಿಸುವರು’ ಎಂದು ಮಾಹಿತಿ ನೀಡಿದರು.
‘4ರಂದು ಮಧ್ಯಾಹ್ನ 12 ಗಂಟೆಗೆ ಮೂರನೇ ಗೋಷ್ಠಿ ನಡೆಯಲಿದೆ. ಸತೀಶ ಕುಲಕರ್ಣಿ ಅವರು ‘ವರ್ತಮಾನ ಕನ್ನಡ ಕಾವ್ಯದ ಒಲವು–ನಿಲುವು’ ಹಾಗೂ ಚಿದಾನಂದ ಮನಸೂರ ಅವರು ‘ಒಕ್ಕಲುತನದ ಸವಾಲುಗಳು’ ವಿಷಯ ಮಂಡಿಸುವರು. ಮೋಹನ ಹೆಗಡೆ ಅಧ್ಯಕ್ಷತೆ ವಹಿಸುವರು. ಶಂಭಯ್ಯ ಹಿರೇಮಠ ಮತ್ತು ತಂಡದವರು ಜನಪದ ಸಂಗೀತ ಪ್ರಸ್ತುತಪಡಿಸುವರು. ಮಧ್ಯಾಹ್ನ 2 ಗಂಟೆಗೆ ನಾಲ್ಕನೇ ಗೋಷ್ಠಿ ‘ನಮ್ಮವರು’ ನಡೆಯಲಿದೆ. ಶಂಕರ ಹಲಗತ್ತಿ ಅವರು ‘ಇಂದಿನ ಶಾಲಾ ಮಕ್ಕಳು’ ಹಾಗೂ ಬಿ.ಎ.ಪಾಟೀಲ ಅವರು ‘ನಮ್ಮ ಹಿರಿಯರು ನಮ್ಮ ಹೆಮ್ಮೆ’ ವಿಷಯ ಮಂಡಿಸುವರು. ಸಿ.ಯು. ಬೆಳ್ಳಕ್ಕಿ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ4 ಗಂಟೆಗೆ ‘ಸಮ್ಮೇಳಾನಧ್ಯಕ್ಷರೊಂದಿಗೆ ಮಾತು’ ಸಂವಾದ ನಡೆಯಲಿದೆ. 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಪ್ರೊ.ವೀರಣ್ಣ ರಾಜೂರ ಅವರು ಸಮಾರೋಪ ನುಡಿಯಾಡುವರು. ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಅಧ್ಯಕ್ಷತೆ ವಹಿಸುವರು’ ಎಂದರು.
ಧಾರವಾಡದಲ್ಲಿ ನಡೆದಿದ್ದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ನೀಡಿದ್ದ ಹಣದಲ್ಲಿ ಉಳಿತಾಯ ಮಾಡಿದ್ದ ₹ 25 ಲಕ್ಷ ಈಗ ₹ 27 ಲಕ್ಷವಾಗಿದೆ. ಈ ಹಣದಲ್ಲಿ ಪರಿಷತ್ತಿನ ಜಿಲ್ಲಾ ಸಾಹಿತ್ಯ ಪರಿಷತ್ತಿನ ಭವನದ ಆವರಣದಲ್ಲಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆಪ್ರೊ. ಲಿಂಗರಾಜ ಅಂಗಡಿ ಜಿಲ್ಲಾಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ತು
‘ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ಮುಗಿಸಿ ಕೈತೊಳೆದುಕೊಂಡು ಕೂರಬಾರದು. ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳ ಅನುಷ್ಠಾನ ನಿಟ್ಟಿನಲ್ಲಿ ಸರ್ಕಾರಕ್ಕೆ ಒತ್ತಡ ಹೇರಬೇಕು’ ಎಂದು ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
‘ಸರ್ಕಾರವು ಬಸವಣ್ಣ ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದೆ. ಆದರೆ ಸಾಂಸ್ಖೃತಿಕ ನಾಯಕ ಎನ್ನುವುದನ್ನು ಜನರಿಗೆ ಯಾವ ರೀತಿ ಮುಟ್ಟಿಸಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಕ್ರಿಯಾಶೀಲವಾಗಿಲ್ಲ. ಸಾಹಿತ್ಯ ಪರಿಷತ್ತು ಕ್ರಿಯಾಶೀಲವಾಗಿ ಆ ಕಾರ್ಯ ಮಾಡಬೇಕು’ ಎಂದು ತಿಳಿಸಿದರು. ‘ಶಿಕ್ಷಣ ಕ್ಚೇತ್ರದ ಹೆಚ್ಚು ಸಂಕಷ್ಟದಲ್ಲಿದೆ. ಸ್ಥಳೀಯ ಮಹತ್ವ ಕಳೆದುಕೊಳ್ಳುವ ರೀತಿಯಲ್ಲಿ ಶಿಕ್ಷಣ ಬೆಳೆಯುತ್ತಿದೆ. ಪ್ರಾದೇಶಿಕ ಚರಿತ್ರೆ ಪರಂಪರೆ ಅಸ್ಮಿತೆಗಳನ್ನು ಮಕ್ಕಳಿಗೆ ಬೋಧಿಸದಿದ್ದರೆ ಒಕ್ಕೂಟ ವ್ಯವಸ್ಥೆಯೊಳಗೆ ನಮ್ಮ ರಾಜ್ಯದ ಅಸ್ಮಿತೆ ಉಳಿಸಿಕೊಳ್ಳಲು ಸಾಧ್ಯ ಇಲ್ಲ. ಶಿಕ್ಷಣ ಕುರಿತು ಹಿಂದಿನ ಮತ್ತು ಇಂದಿನ ವ್ಯವಸ್ಥೆಯನ್ನು ತೌಲನಿಕ ದೃಷ್ಟಿಕೋನದಲ್ಲಿ ವಿವೇಚನೆಗೊಡ್ಡಿ ಮುಂದಿನ ಶಿಕ್ಷಣ ಹೇಗಿರಬೇಕು ಎಂಬ ನಿರ್ದೇಶನವನ್ನು ಕೊಡುವ ಶಕ್ತಿ ಸಾಹಿತ್ಯ ಪರಿಷತ್ತಿಗೆ ಇದೆ. ಕನ್ನಡದ ಭವಿಷ್ಯ ರೂಪಿಸುವ ಜವಾಬ್ದಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಇದೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರ ರಾಜಕೀಯ ಪಕ್ಷಗಳ ಮುಖವಾಣಿಯಾಗದೆ ಸ್ವಾಯತ್ತತೆ ಉಳಿಸಿಕೊಂಡಿರುವ ಕಡೆ ಪ್ರಜಾಪ್ರಭುತ್ವ ಬೆಳೆಯುತ್ತದೆ’ ಎಂದರು. ‘ದ.ರಾ. ಬೇಂದ್ರೆ ಭವನ ಮತ್ತು ಟ್ರಸ್ಟ್ ಅಭಿವೃದ್ಧಿಗೆ ಗಮನ ಹರಿಸುವುದಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವರು ಭರವಸೆ ನೀಡಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.