ಧಾರವಾಡ: ನಗರದ ಏಳನೇ ವಾರ್ಡ್‌ನ ಅರ್ಧದಷ್ಟು ಭಾಗದಲ್ಲಿ 24X7 ನೀರು ಪೂರೈಕೆ ಸೌಲಭ್ಯವಿದೆ. ಹಲವು ಕಡೆ ಕಾಂಕ್ರೀಟ್ ರಸ್ತೆ, ಓಣಿಗಳನ್ನು ನಿರ್ಮಿಸಲಾಗಿದೆ. ವಾರ್ಡ್‌ನ ಹಲವೆಡೆ ಚರಂಡಿ, ಛೇಂಬರ್ ಸಮಸ್ಯೆ ಇದೆ. ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತದೆ.
ಈ ವಾರ್ಡ್‌ನಲ್ಲಿ ರೈತಾಪಿ ಜನರೇ ಹೆಚ್ಚು ವಾಸವಿದ್ದಾರೆ. ಎಮ್ಮೆ, ಹಸು, ಎತ್ತು ಸಾಕಾಣಿಕೆ ಇದೆ. ಹಳೆಯ ಧಾರವಾಡ ಭಾಗ ಇದು. ಕವಿ ದ.ರಾ.ಬೇಂದ್ರೆ ಅವರು ಕಲಿತ ಶಾಲೆ (ನಂಬರ್ 8) ಇಲ್ಲಿದೆ.
ಗಣಾಚಾರ ಓಣಿ ಭಾಗದಿಂದ ವಿದ್ಯಾರಣ್ಯ ಶಾಲೆವರೆಗಿನ ಪ್ರದೇಶದಲ್ಲಿ 24X7 ನೀರು ಸೌಲಭ್ಯ ಇದೆ. ಹಲವು ಓಣಿಗಳಲ್ಲಿ ಇಂಟರ್‌ಲಾಕ್ ಸಿಮೆಂಟ್ ಇಟ್ಟಿಗೆ ಅಳವಡಿಸಲಾಗಿದೆ. ಹಲವೆಡೆ ಎಲ್‌ಇಡಿ ಬೀದಿದೀಪಗಳು ಇವೆ.
ಬಾರಾ ಇಮಾಮ್ ಗಲ್ಲಿ ಸಹಿತ ವಿವಿಧೆಡೆ ಒಳಚರಂಡಿ ‘ಛೇಂಬರ್’ ಸಮಸ್ಯೆ ಇದೆ. ದೇಸಾಯಿ ಓಣಿ ಸೇರಿದಂತೆ ಕೆಲವು ಓಣಿಗಳಲ್ಲಿ ಚರಂಡಿಗಳ ನೀರು ರಸ್ತೆಗೆ ಹೊರಳುತ್ತದೆ.
ತಾಯಣ್ಣವರ ಕಲ್ಯಾಣ ಮಂಟಪ ಭಾಗದಿಂದ ಹೆಬ್ಬಳಿ ಫಾರ್ಮ್‌ವರೆಗಿನ ಪ್ರದೇಶದಲ್ಲಿ 24X7 ನೀರು ಪೂರೈಕೆ ಕಾರ್ಯಗತಗೊಳಿಸಿಲ್ಲ. ವೃತ್ತಗಳು, ಪ್ರಮುಖ ರಸ್ತೆಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಿಲ್ಲ. ಪಶು ಆಸ್ಪತ್ರೆ ಇದ್ದೂ ಇಲ್ಲದ್ದಂತಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು ಬೇಡಿಕೆ ಈಡೇರಿಲ್ಲ. ಸಾರ್ವಜನಿಕ ಶೌಚಾಲಯಗಳು (ಹೆಬ್ಬಳ್ಳಿ–ಅಗಸಿ) ನಿರ್ವಹಣೆ ಕೊರತೆಯಿಂದ ಬಳಕೆಗೆ ಯೋಗ್ಯವಾಗಿಲ್ಲ ಎಂದು ನಿವಾಸಿಗಳು ದೂರುತ್ತಾರೆ.
‘ವಾರ್ಡ್‌ನಲ್ಲಿ ರಸ್ತೆಗಳು ಚೆನ್ನಾಗಿವೆ. ಕಸ ಸಂಗ್ರಹ ವಾಹನಗಳು ನಿಯಮಿತವಾಗಿ ಬರುತ್ತವೆ. ಈಚೆಗೆ ಎಲ್‌ಇಡಿ ಬೀದಿದೀಪಗಳನ್ನು ಅಳವಡಿಸಿದ್ದಾರೆ. ನಿವೇಶನಗಳಲ್ಲಿ ತ್ಯಾಜ್ಯ ಎಸೆಯುವುದಕ್ಕೆ ಕಡಿವಾಣ ಹಾಕಬೇಕು’ ಎಂದು ಮಂಗಳವಾರಪೇಟೆಯ ರೂಪಾ ಮಡಿವಾಳಣ್ಣವರ ಒತ್ತಾಯಿಸಿದರು.
ನೀರಿನ ಸಮಸ್ಯೆ ಇಲ್ಲ.ದೇಸಾಯಿ ಓಣಿ ಭಾಗದ ಗಟಾರ ರಿಪೇರಿಗೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ವಹಿಸಿಲ್ಲ. ಗಟಾರ ಸಮಸ್ಯೆ ಪರಿಹರಿಸಬೇಕು. ವಾರ್ಡ್‌ನಲ್ಲಿ ಆಸ್ಪತ್ರೆ ಸ್ಥಾಪಿಸಬೇಕು.ರವೀಂದ್ರ ಯಲಿಗಾರ ವರ್ತಕ ಮಂಗಳವಾರ ಪೇಟೆ
‘ಚರಂಡಿ ರಸ್ತೆ ನಿರ್ಮಾಣ: ಕಾಮಗಾರಿ ಆರಂಭ’
‘ಚರಂಡಿ ನಿರ್ಮಾಣಕ್ಕೆ ₹ 5 ಕೋಟಿ ಹಾಗೂ ರಸ್ತೆಗಳ ನಿರ್ಮಾಣಕ್ಕೆ ₹ 5 ಕೋಟಿ ಅನುದಾನ ಮಂಜೂರಾಗಿದೆ. ವಿವಿಧೆಡೆ ಚರಂಡಿ ನಿರ್ಮಾಣ ಕಾಮಗಾರಿ ಆರಂಭವಾಗಿದೆ’ ಎಂದು ವಾರ್ಡ್ ಸದಸ್ಯೆ ದೀಪಾ ನೀರಲಕಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಉದ್ಯಾನ ಮತ್ತು ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಜಾಗದ ಕೊರತೆ ಇದೆ. ಇಮಾಮ್ ಗಲ್ಲಿಯ ಒಳಚರಂಡಿ ಛೇಂಬರ್ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗುವುದು. ಎಲ್ ಅಂಡ್ ಟಿ ಸಂಸ್ಥೆಯಿಂದ ಪೈಪ್ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಮುಗಿದರೆ ವಾರ್ಡ್‌ನ ಇತರ ಕಡೆಗಳಲ್ಲೂ 24X7 ನೀರು ಯೋಜನೆ ಕಾರ್ಯಗತವಾಗುತ್ತದೆ. ಪಶು ಆಸ್ಪತ್ರೆಗೆ ವೈದ್ಯರ ನಿಯೋಜನೆಗೆ ಮನವಿ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.