ADVERTISEMENT

ಧಾರವಾಡ | ಪೊಲೀಸರಿಂದಲೂ ನಿಯಮ ಉಲ್ಲಂಘನೆ; ಹಾಫ್‌ ಹೆಲ್ಮೆಟ್‌ಗೆ ಇಲ್ಲ ಕಡಿವಾಣ!

ಹದಿನೈದು ದಿನಗಳಲ್ಲಿ ಐದು ಮಂದಿ ಬೈಕ್‌ ಸವಾರರು ಸಾವು

ನಾಗರಾಜ್ ಬಿ.ಎನ್‌.
Published 30 ಆಗಸ್ಟ್ 2025, 7:32 IST
Last Updated 30 ಆಗಸ್ಟ್ 2025, 7:32 IST
ಹುಬ್ಬಳ್ಳಿಯಲ್ಲಿ ಹಾಫ್‌ ಹೆಲ್ಮೆಟ್‌ ಧರಿಸಿ ಸವಾರಿ ಮಾಡುತ್ತಿರುವ ದ್ವಿಚಕ್ರ ವಾಹನ ಸವಾರರು
–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯಲ್ಲಿ ಹಾಫ್‌ ಹೆಲ್ಮೆಟ್‌ ಧರಿಸಿ ಸವಾರಿ ಮಾಡುತ್ತಿರುವ ದ್ವಿಚಕ್ರ ವಾಹನ ಸವಾರರು –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ದ್ವಿಚಕ್ರ ವಾಹನ ಸವಾರರಿಗೆ ಸಂ‍‍ಪೂರ್ಣ (ಫುಲ್) ಹೆಲ್ಮೆಟ್‌ ಬಳಕೆ ಕಡ್ಡಾಯ ಮಾಡಲಾಗಿದೆ. ಆದರೆ, ಬಹುತೇಕ ಜನರು ಅರ್ಧ (ಹಾಫ್‌) ಹೆಲ್ಮೆಟ್‌ಗಳನ್ನು ಧರಿಸುತ್ತಾರೆ. ಐಎಸ್‌ಐ ಗುರುತಿನ ಫುಲ್‌ ಹೆಲ್ಮೆಟ್‌ ಬಳಕೆಗೆ  ಸರ್ಕಾರ ಸುತ್ತೋಲೆ ಹೊರಡಿಸಿ ಏಳೆಂಟು ವರ್ಷಗಳು ಕಳೆದಿವೆ. ಆದರೆ, ಪಾಲನೆಯಾಗುತ್ತಿಲ್ಲ.

ಪೊಲೀಸ್‌ ಇಲಾಖೆ ಸಹ ಸಂಚಾರ ಜಾಗೃತಿ ಸಪ್ತಾಹ ಮತ್ತು ಇತರ ಕಾರ್ಯಕ್ರಮಗಳಲ್ಲಿ ಹಾಫ್‌ ಹೆಲ್ಮೆಟ್‌ ಮತ್ತು ಐಎಸ್‌ಐ ಗುರುತಿಲ್ಲದ ಹೆಲ್ಮೆಟ್‌ ಧರಿಸದಂತೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡುತ್ತಿದೆ. ಆದರೆ, ಅನುಷ್ಠಾನಕ್ಕೆ ಬಂದಿಲ್ಲ. ಸ್ವತಃ ಪೊಲೀಸರೇ ಸಹ ಹಾಫ್‌ ಹೆಲ್ಮೆಟ್‌ ಧರಿಸಿ ದ್ವಿಚಕ್ರ ವಾಹನ ಓಡಿಸುತ್ತಾರೆ ಎಂಬ ದೂರುಗಳಿವೆ.

‘ರಸ್ತೆಗಳ ಬದಿಯಲ್ಲಿ ಗುಣಮಟ್ಟವಿಲ್ಲದ ಹಾಗೂ ಐಎಸ್‌ಐ ಗುರುತಿಲ್ಲದ ಹಾಫ್‌ ಮತ್ತು ಫುಲ್‌ ಹೆಲ್ಮೆಟ್‌ಗಳನ್ನು ಕಡಿಮೆ ದರಕ್ಕೆ ಮಾರಲಾಗುತ್ತದೆ. ಅವುಗಳ ಮಾರಾಟ ಮತ್ತು ಖರೀದಿ ಎರಡೂ ಕಾನೂನುಬಾಹಿರ. ಆದರೂ ಪೊಲೀಸ್‌ ಇಲಾಖೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ’ ಎಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಹೆಲ್ಮೆಟ್‌ ಧರಿಸದೆ ಸವಾರಿ ಮಾಡುವವರನ್ನು ನಗರದ ವಿವಿಧೆಡೆ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಪತ್ತೆ ಹಚ್ಚಿ, ಸವಾರರ ವಿಳಾಸಕ್ಕೆ ದಂಡದ ನೋಟಿಸ್‌ ಕಳುಹಿಸಲಾಗುತ್ತಿದೆ. ಆದರೆ, ಹಾಫ್‌ ಹೆಲ್ಮೆಟ್‌ ಧರಿಸಿ ಸಂಚರಿಸುವವರಿಗೆ ವಿನಾಯ್ತಿ ನೀಡಲಾಗುತ್ತದೆ. ಕಾನೂನು, ನಿಯಮ ಎಂದಾಗ ಎಲ್ಲವೂ ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು’ ಎಂದು ಬೈಕ್‌ ಸವಾರ ಸಲೀಂ ಅಹ್ಮದ್‌ ತಿಳಿಸಿದರು.

‘ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಈಚೆಗೆ ಬಸ್‌ ಹಾಗೂ ವಾಹನ ಅಪಘಾತದಲ್ಲಿ ಪೊಲೀಸ್ ಸಿಬ್ಬಂದಿ ಸೇರಿ, ಐದಕ್ಕೂ ಹೆಚ್ಚು ಬೈಕ್‌ ಸವಾರರು ಮೃತಪಟ್ಟಿದ್ದಾರೆ. ಇವರಲ್ಲಿ ಮೂವರು ಹಾಫ್‌ ಹೆಲ್ಮೆಟ್‌ ಧರಿಸಿದ್ದರೆ, ಇಬ್ಬರು ಹೆಲ್ಮೆಟ್‌ನ್ನೇ ಧರಿಸಿರಲಿಲ್ಲ. ಹೊರವಲಯದ ಬೈಪಾಸ್‌ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಬೈಕ್‌ ಅಪಘಾತಗಳು ಈಗೀಗ, ನಗರದ ಜನದಟ್ಟಣೆ ಪ್ರದೇಶದಲ್ಲಿ ನಡೆಯುತ್ತಿವೆ’ ಎಂದು ಪೊಲೀಸರು ತಿಳಿಸಿದರು.

ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ಮಾರಟಕ್ಕಿಟ್ಟಿರುವ ಹಾಫ್‌ ಹೆಲ್ಮೆಟ್‌ಗಳು
ಕಡಿಮೆ ದರಕ್ಕೆ ಸಿಗುತ್ತದೆ ಎಂದು ಹಾಫ್‌ ಹೆಲ್ಮೆಟ್‌ ಖರೀದಿಸುತ್ತಾರೆ. ಗುಣಮಟ್ಟವಿಲ್ಲದ ಸುರಕ್ಷತೆ ನೀಡದ ಅಂತಹ ಹೆಲ್ಮೆಟ್‌ಗಳನ್ನು ಸವಾರರು ಬಳಸಬಾರದು.
– ಸಿ.ಆರ್‌. ರವೀಶ, ಡಿಸಿಪಿ ಸಂಚಾರ ವಿಭಾಗ

ಪೊಲೀಸರಿಗೂ ಎಚ್ಚರಿಕೆ: ಡಿಸಿಪಿ

‘ಐಎಸ್‌ಐ ಗುರುತು ಇರುವ ಫುಲ್‌ ಹೆಲ್ಮೆಟ್‌ಗಳನ್ನೇ ದ್ವಿಚಕ್ರ ವಾಹನ ಸವಾರರು ಬಳಸಬೇಕು. ಹಾಫ್‌ ಹೆಲ್ಮೆಟ್‌ ಬಳಸಿ ಸವಾರಿ ಮಾಡಲು ಅವಕಾಶವಿಲ್ಲ. ಅದನ್ನು ಬಳಸಿ ಸವಾರಿ ಮಾಡಿದರೆ ಸಿಗ್ನಲ್‌ಗಳಲ್ಲಿರುವ ಸಿಸಿ ಟಿವಿ ಕ್ಯಾಮೆರಾಗಳ ಸಹಾಯದಿಂದ ವಾಹನಗಳ ನೋಂದಣಿ ಸಂಖ್ಯೆ ಪತ್ತೆ ಹಚ್ಚಿ ನೋಟಿಸ್‌ ಕಳುಹಿಸಲಾಗುತ್ತದೆ. ನಮ್ಮ ಸಿಬ್ಬಂದಿಯಲ್ಲೂ ಕೆಲವರು ಹಾಫ್‌ ಹೆಲ್ಮೆಟ್‌ ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಾರೆ. ಅವರಿಗೂ ನೋಟಿಸ್‌ ನೀಡಲಾಗುವುದು’ ಎಂದು ಸಂಚಾರ ವಿಭಾಗದ ಡಿಸಿಪಿ ಸಿ.ಆರ್‌.ರವೀಶ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.