ADVERTISEMENT

ಧಾರವಾಡ– ಹಳಿಯಾಳ ಮಾರ್ಗ ಸಂಚಾರ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 4:29 IST
Last Updated 18 ಜನವರಿ 2024, 4:29 IST
ಧಾರವಾಡ ತಾಲ್ಲೂಕಿನ ಅಂಬ್ಲಿಕೊಪ್ಪ ಕ್ರಾಸ್ ಸಮೀಪ ಕಲ್ಲುಮಣ್ಣಿನ ರಸ್ತೆಯಲ್ಲಿ ಲಾರಿ ಸಂಚಾರ 
ಧಾರವಾಡ ತಾಲ್ಲೂಕಿನ ಅಂಬ್ಲಿಕೊಪ್ಪ ಕ್ರಾಸ್ ಸಮೀಪ ಕಲ್ಲುಮಣ್ಣಿನ ರಸ್ತೆಯಲ್ಲಿ ಲಾರಿ ಸಂಚಾರ    

ಧಾರವಾಡ: ನಗರದಿಂದ ಹಳಿಯಾಳ ಸಂಪರ್ಕಿಸುವ ರಸ್ತೆಯು ಹದಗೆಟ್ಟಿದೆ. ಡಾಂಬರು ಕಿತ್ತಿದ್ದು, ಗುಂಡಿಗಳಾಗಿದ್ದು, ಈ ಮಾರ್ಗದಲ್ಲಿ ಸಂಚಾರ ಫಜೀತಿಯಾಗಿದೆ.

ಪ್ರತಿನಿತ್ಯ ಬಸ್‌ಗಳು, ಕಾರು, ಲಾರಿ, ನೂರಾರು ದ್ವಿಚಕ್ರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಕಲ್ಲುಮಣ್ಣಿನ ಈ ರಸ್ತೆಯಲ್ಲಿ ವಾಹನಗಳು ಸಾಗುವಾಗ ದೂಳೆಬ್ಬಿಸುತ್ತವೆ. ಈ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರು, ದ್ವಿಚಕ್ರ ವಾಹನ ಸವಾರರು, ‍ಪಾದಚಾರಿಗಳು ದೂಳಿನ ‘ಶಿಕ್ಷೆ’ ಅನುಭವಿಸುವಂತಾಗಿದೆ.

‘ಧಾರವಾಡದಿಂದ ದಾಂಡೇಲಿಗೆ ನಿತ್ಯ ಬೈಕ್‌ನಲ್ಲಿ ಓಡಾಡುತ್ತೇನೆ. ರಸ್ತೆ ಹಾಳಾಗಿದ್ದರಿಂದ ದೂಳಿನ ಕಾಟ ತಪ್ಪಿಸಿಕೊಳ್ಳಲು ಮಾಸ್ಕ್ ಧರಿಸಿಯೇ ಓಡಾಡಬೇಕು. ಹದಗೆಟ್ಟಿರುವ ಈ ರಸ್ತೆಯಲ್ಲಿ ವಾಹನ ಚಲಾಯಿಸುವುದು ಸವಾಲಾಗಿದೆ‘ ಎಂದು ಸಹ ಪ್ರಾಧ್ಯಾಪಕ ಶಿವಾನಂದ ಗಾಣಿಗೇರ ಹೇಳಿದರು.

ADVERTISEMENT

ಹುಲಕೊಪ್ಪ, ಹಲ್ತಿಕೋಟಿ, ಮುರಕಟ್ಟಿ, ಹಳ್ಳಿಗೇರಿ ಸಹಿತ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಶಾಲೆ–ಕಾಲೇಜುಗಳಿಗೆ ಧಾರವಾಡಕ್ಕೆ ನಿತ್ಯ ಸಂಚರಿಸುತ್ತಾರೆ. ಶಿಕ್ಷಕರು ಸಹಿತ ವಿವಿಧ ಇಲಾಖೆ ನೌಕರರು ಹಳಿಯಾಳ ನಗರದಿಂದ ಇತರೆಡೆಗಳಿಂದ ಪ್ರತಿನಿತ್ಯ ಓಡಾಡುತ್ತಾರೆ.

ನಗರದಿಂದ ಹಳಿಯಾಳ ಕಡೆಗೆ ಸಾಗುವ ಮಾರ್ಗದಲ್ಲಿ ಸುಮಾರು ಐದು ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದೆ. ಮನಸೂರ ಕ್ರಾಸ್, ಸಲಕ್ಕಿನಕೊಪ್ಪ, ಬಾಡದಲ್ಲಿ ಅಲ್ಲಲ್ಲಿ ಗುಂಡಿಗಳಾಗಿವೆ. ಅಬ್ಲಿಕೊಪ್ಪ ಕ್ರಾಸ್ ಹಾಗೂ ಮುರಕಟ್ಟಿಯಿಂದ ಹಳ್ಳಿಗೇರಿ ಕ್ರಾಸ್‍ವರೆಗೂ ಡಾಂಬರು ಕಿತ್ತಿದೆ.

ಗುಂಡಿಮಯ ರಸ್ತೆಯಲ್ಲಿ ಆಯತಪ್ಪಿ ದ್ವಿಚಕ್ರವಾಹನ ಸವಾರರು ಬಿದ್ದು ಪೆಟ್ಟಾಗಿರುವ, ನುಚ್ಚು ಕಲ್ಲಿನ ರಸ್ತೆಯಲ್ಲಿ ಟಯರ್‌ ಪಂಕ್ಚರ್‌ ಆಗಿ ಪಡಿಪಾಟಲುಪಟ್ಟಿರುವ ಉದಾಹರಣೆಗಳು ಇವೆ. ದೂಳಿನಿಂದಾಗಿ ವಾಹನ ಸವಾರರಿಗೆ ಎದುರಿನ ವಾಹನಗಳು ಗೋಚರಿಸದಂತಹ ಸ್ಥಿತಿ ಇದೆ. ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ಅಪಘಾತಗಳು ಸಂಭವಿಸಿವೆ.

ಫಸಲು ಹಾನಿ: ವಾಹನಗಳು ಸಾಗುವಾಗ ಎಬ್ಬಿಸುವ ದೂಳು ರಸ್ತೆ ಇಕ್ಕೆಲದ ತೋಟ, ಗದ್ದೆ, ಜಮೀನುಗಳ ಬೆಳೆಗಳಿಗೆ ಹಾನಿ ಉಂಟುಮಾಡುತ್ತಿದೆ. ಕಬ್ಬು, ಮಾವಿನ ಮರಗಳು ದೂಳುಮಯವಾಗಿವೆ. ದೂಳಿನ ಕಾರಣಕ್ಕೆ ಈ ಭಾಗದ ಜಮೀನು, ಗದ್ದೆ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ.

‘ಈಗ ಮಾವಿನ ಮರುಗಳು ಹೂಕಟ್ಟುವ ಕಾಲ. ದೂಳು ಹೂವಿನ ಮೇಲೆಲ್ಲ ಹರಡಿ ಹಾನಿ ಉಂಟು ಮಾಡುತ್ತಿದೆ. ದೂಳಿನಿಂದ ಅಲರ್ಜಿ ಉಂಟಾಗುತ್ತದೆ ಎಂದು ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ದೂಳಿನಿಂದಾಗಿ ಕೃಷಿ ಚಟುವಟಿಕೆ ನಿರ್ವಹಿಸುವುದು ಸವಾಲಾಗಿದೆ’ ಎಂದು ರೈತರು ಸಂಕಷ್ಟ ತೋಡಿಕೊಳ್ಳುತ್ತಿದ್ದಾರೆ.

ಈ ರಸ್ತೆಯಲ್ಲಿ ಒಮ್ಮೊಮ್ಮೆ ರಾತ್ರಿ ವೇಳೆ ಸಾರಿಗೆ ಬಸ್ಸು, ಲಾರಿ, ಕಾರು, ಬೈಕ್ ವಾಹನಗಳು ಕೆಟ್ಟು ನಿಲ್ಲುತ್ತವೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದರು.

‘ಒಮ್ಮೊಮ್ಮೆ ರಾತ್ರಿ ವೇಳೆ ಬಸ್‌, ಲಾರಿ, ಕಾರು, ಬೈಕ್ ಕೆಟ್ಟು ನಿಲ್ಲುತ್ತವೆ.  ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ರಸ್ತೆಯಲ್ಲಿ ಸಂಚಾರ ಕಷ್ಟಕರವಾಗಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ರಸ್ತೆ ದುರಸ್ತಿಗೆ ಕ್ರಮ ವಹಿಸಬೇಕು’ ಎಂದು ಹಳ್ಳಿಗೇರಿ ಗ್ರಾಮದ ರೈತ ಯಲ್ಲಪ್ಪ ಕೊಟ್ಟಳ್ಳಿ ಒತ್ತಾಯಿಸಿದರು.

ಧಾರವಾಡ ತಾಲ್ಲೂಕಿನ ಅಂಬ್ಲಿಕೊಪ್ಪ ಕ್ರಾಸ್ ಸಮೀಪ ಹದಗೆಟ್ಟ ರಸ್ತೆಯಲ್ಲಿ ವಾಹನ ಸಂಚಾರ
ಧಾರವಾಡ ತಾಲ್ಲೂಕಿನ ಮುರಕಟ್ಟಿ ಸಮೀಪ ರಸ್ತೆಯಲ್ಲಿ ಕಬ್ಬು ತುಂಬಿದ್ದ ಟ್ರಾಕ್ಟರ್‌ ಕೆಟ್ಟು ನಿಂತಿರುವುದು
ಧಾರವಾಡ ತಾಲ್ಲೂಕಿನ ಮುರಕಟ್ಟಿ ಸಮೀಪ ಹದಗೆಟ್ಟ ರಸ್ತೆಯಲ್ಲಿ ಬಸ್‌ ಸಂಚಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.