ಸಂತೋಷ್ ಲಾಡ್
ಹುಬ್ಬಳ್ಳಿ: ಕನ್ನಡ ಜಾಗೃತಿ ಸಮಿತಿಗೆ ಧಾರವಾಡ ಜಿಲ್ಲೆಯಿಂದ ನಾಮನಿರ್ದೇಶನಗೊಂಡ ಸದಸ್ಯರ ಪಟ್ಟಿ ತಡೆಹಿಡಿಯುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಪತ್ರ ಬರೆದ ಹಿನ್ನೆಲೆಯಲ್ಲಿ, ನವೆಂಬರ್ 7ರಂದು ಬೆಂಗಳೂರಿನಲ್ಲಿ ನಡೆಯುವ ಸದಸ್ಯರ ಒಂದು ದಿನದ ರಾಜ್ಯಮಟ್ಟದ ಕಮ್ಮಟಕ್ಕೆ ಜಿಲ್ಲೆಯ ಸದಸ್ಯರಿಗೆ ಭಾಗವಹಿಸದಂತೆ ಸೂಚಿಸಲಾಗಿದೆ.
ಹುಬ್ಬಳ್ಳಿ–ಧಾರವಾಡ ಮಹಾನಗರ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಜಂಟಿಯಾಗಿ ಸಲ್ಲಿಸಿದ್ದ ಮನವಿ ಆಧರಿಸಿ, ಸಚಿವ ಲಾಡ್ ಅವರು ಅಕ್ಟೋಬರ್ 17ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರಿಗೆ ಪತ್ರ ಬರೆದಿದ್ದಾರೆ. ‘ಕನ್ನಡ ಅಭಿವೃದ್ಧಿ ಪ್ರಾಧಿಕಾರದಡಿ ಬರುವ ಧಾರವಾಡ ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ಸೆಪ್ಟೆಂಬರ್ 10ರಂದು ನಾಮ ನಿರ್ದೇಶನಗೊಂಡವರ ಪಟ್ಟಿ ತಡೆಹಿಡಿಯುವಂತೆ ತಿಳಿಸಿ, ಜಂಟಿ ಸಮಿತಿ ನೀಡಿರುವ ಮನವಿಪತ್ರವನ್ನು ಲಗತ್ತಿಸಿದ್ದಾರೆ.
ಸಚಿವರ ಸೂಚನೆ ಮೇರೆಗೆ, ಪ್ರಾಧಿಕಾರದಿಂದ ಜಿಲ್ಲೆಯ ಜಾಗೃತಿ ಸಮಿತಿ ಸದಸ್ಯರಿಗೆ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿ, ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕಮ್ಮಟದಲ್ಲಿ ಪಾಲ್ಗೊಳ್ಳದಂತೆ ವಿನಂತಿಸಲಾಗಿದೆ. ಧಾರವಾಡ ಜಿಲ್ಲೆಯಿಂದ ಐದು ಮಂದಿ ಹಾಗೂ ಹುಬ್ಬಳ್ಳಿ–ಧಾರವಾಡ ಮಹಾನಗರದಿಂದ ಆರು ಮಂದಿ ಸದಸ್ಯರು ನಾಮ ನಿರ್ದೇಶನಗೊಂಡಿದ್ದಾರೆ.
ಪ್ರಾಧಿಕಾರದ ಮನವಿ ಮೇರೆಗೆ ಧಾರವಾಡ ಜಿಲ್ಲೆ ಮತ್ತು ಮಹಾನಗರ ಹೊರತುಪಡಿಸಿ, ಉಳಿದ 30 ಜಿಲ್ಲೆಗಳ ಹಾಗೂ 10 ಮಹಾನಗರ ಪಾಲಿಕೆಯ ಒಟ್ಟು 238 ಸದಸ್ಯರು ಕಮ್ಮಟದಲ್ಲಿ ಭಾಗವಹಿಸಲಿದ್ದಾರೆ.
ಕಾರಣವೇನು? ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಜಾಗೃತಿ ಸಮಿತಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡಬೇಕಿತ್ತು. ಆದರೆ, ಇದ್ಯಾವುದನ್ನೂ ಮಾಡದೆ ತಮಗಿಷ್ಟವಾದ ಮಂದಿಯನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಇದನ್ನು ಖಂಡಿಸಿ ಸಚಿವರಿಗೆ ಪಕ್ಷದ ವತಿಯಿಂದ ಮನವಿ ಸಲ್ಲಿಸಲಾಗಿತ್ತು’ ಎಂದು ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ ಹೇಳಿದರು.
‘ನಾಮ ನಿರ್ದೇಶನಗೊಂಡ ಸದಸ್ಯರ ಕುರಿತು ಜಿಲ್ಲೆ ಹಾಗೂ ನಗರ ಪ್ರದೇಶದ ಕೆಲವು ಕನ್ನಡ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಸಾಕಷ್ಟು ವರ್ಷಗಳಿಂದ ಶ್ರಮಿಸುತ್ತಿದ್ದರೂ, ತಮ್ಮನ್ನು ಪರಿಗಣಿಸದೆ ಯಾರ‍್ಯಾರನ್ನೋ ನೇಮಕ ಮಾಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದವು. ಇದರಲ್ಲಿ ಯಾವುದೇ ರಾಜಕೀಯವಿಲ್ಲ’ ಎಂದರು.
‘ಸದಸ್ಯರಿಗೆ ಬೆಂಗಳೂರಿನ ಕಮ್ಮಟದಲ್ಲಿ ಪಾಲ್ಗೊಳ್ಳದಂತೆ ಸೂಚಿಸಿದ್ದು ಗಮನಕ್ಕೆ ಬಂದಿಲ್ಲ. ಸಣ್ಣಪುಟ್ಟ ಬದಲಾವಣೆ ಮಾಡಿ, ಜಿಲ್ಲೆಯ ಸದಸ್ಯರಿಗೂ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಸಂಬಂಧಪಟ್ಟವರಿಗೆ ವಿನಂತಿಸಿಕೊಳ್ಳುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.