ADVERTISEMENT

ಧಾರವಾಡ: ‘ಕನ್ನಡ ಕಾವ್ಯ ಕಸ್ತೂರಿ’ ಮಕ್ಕಳ ರಂಗ ಸಂಸ್ಕೃತಿ ಶಿಬಿರ ಏ. 21ರಿಂದ 

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 13:29 IST
Last Updated 10 ಏಪ್ರಿಲ್ 2025, 13:29 IST
ಪ್ರಕಾಶ ಗರುಡ
ಪ್ರಕಾಶ ಗರುಡ   

ಧಾರವಾಡ: ‘ಸೃಜನಾ ರಂಗಮಂದಿರದಲ್ಲಿ ಏಪ್ರಿಲ್ 21ರಿಂದ ಮೇ 11ರವರೆಗೆ ‘ಕನ್ನಡ ಕಾವ್ಯ ಕಸ್ತೂರಿ’ ಮಕ್ಕಳ ರಂಗ ಸಂಸ್ಕೃತಿ ಶಿಬಿರ ನಡೆಯಲಿದೆ’ ಎಂದು ರಂಗಕರ್ಮಿ ಪ್ರಕಾಶ ಗರುಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಕ್ಕರಿ ಬಾಳಾಚಾರ್ಯ ಟ್ರಸ್ಟ್, ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್, ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್ ಹಾಗೂ ಗೊಂಬೆಮನೆ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿದೆ. 21ರಂದು ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಉದ್ಘಾಟನೆ ನೆರವೇರಿಸುವರು’ ಎಂದು ತಿಳಿಸಿದರು.

‘ಕನ್ನಡ ಭಾಷೆ- ಸಂಸ್ಕೃತಿ ಉಳಿಸಲು ‘ಮಾತೃ ಭಾಷೆಯಿಂದ ಮನೋವಿಕಾಸ’ ಎಂಬ ಧ್ಯೇಯದೊಂದಿಗೆ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರವರಗೆ ಶಿಬಿರ ಜರುಗಲಿದೆ. 10ರಿಂದ 14 ವರ್ಷದೊಳಗಿನ ಮಕ್ಕಳು ಪಾಲ್ಗೊಳ್ಳಬಹುದು’ ಎಂದರು.

ADVERTISEMENT

‘ರಂಗಭೂಮಿ ಮೂಲಕ ಮಕ್ಕಳಿಗೆ ಕನ್ನಡ ಭಾಷೆಯ ಸೊಗಡು, ಸೊಗಸು, ಸತ್ವ, ಸಂಸ್ಕೃತಿ ಜೊತೆಗೆ ಮಾತೃಭಾಷಾ ವೈವಿಧ್ಯತೆ ಕುರಿತು ತಿಳಿಸುವುದು ಶಿಬಿರದ ಉದ್ದೇಶ. ಶಿಬಿರದಲ್ಲಿ ಕಥೆ-ಕಾವ್ಯ ಹೇಳುವುದು, ಅವುಗಳ ಚಿತ್ರ ಬಿಡಿಸುವುದು, ರಂಗಾಟ, ಕೋಲಾಟ, ಸಾಹಿತಿಗಳ ಸಾಕ್ಷಚಿತ್ರಗಳ ಪರಿಚಯಿಸಲಾಗುವುದು’ ಎಂದು ಹೇಳಿದರು.

‘ಶಿಬಿರದ ಕೊನೆಗೆ ಮಕ್ಕಳಿಂದ ಕನ್ನಡ ಕಾವ್ಯ-ಪದ್ಯಗಳ ವಾಚನ, ಗಾಯನ, ಅಭಿನಯದಿಂದ ಕನ್ನಡ ಕಾವ್ಯ-ಕಥಾ ರಂಗ ಪ್ರಯೋಗ ಜರುಗಲಿದೆ. 30 ಮಕ್ಕಳಿಗೆ ಮಾತ್ರ ಅವಕಾಶವಿದೆ. ಮಾಹಿತಿಗೆ ಮೊ:93431 00135 ಸಂಪರ್ಕಿಸಬಹುದು’ ಎಂದರು.

ಕೃಷ್ಣ ಕಟ್ಟಿ, ಹನುಮೇಶ ಸಕ್ಕರಿ, ಶಶಿಧರ ನರೇಂದ್ರ, ಸಮೀರ ಜೋಶಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.