ಧಾರವಾಡ: ಜಿಲ್ಲಾ ಕನ್ನಡ ಸಾಹಿತ್ಯ ಭವನ ಜಾಗದ ಗುತ್ತಿಗೆ ಅವಧಿ ನವೀಕರಣ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಈ ಜಾಗದ ‘ಲೀಸ್’ ಮುಂದುವರಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವು ಸಲ್ಲಿಸಿರುವ ಮನವಿಯನ್ನು ಸರ್ಕಾರ ಇತ್ಯರ್ಥಗೊಳಿಸಿಲ್ಲ.
ಸರ್ಕಾರವು ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದ ಮುಂಭಾಗದ ಜಾಗವನ್ನು (1.11 ಎಕರೆ) ಕನ್ನಡ ಸಾಹಿತ್ಯ ಪರಿಷತ್ತಿಗೆ ‘ಲೀಸ್’ಗೆ ನೀಡಿದೆ. ಇಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಭವನ, ಸಭಾಂಗಣ ಕಟ್ಟಡ ನಿರ್ಮಿಸಲಾಗಿದೆ. ಭವನದಲ್ಲಿ ಗ್ರಂಥಾಲಯ, ಪರಿಷತ್ತಿನ ಜಿಲ್ಲಾಧ್ಯಕ್ಷರ ಕಚೇರಿ ಇವೆ. ಸಾಹಿತ್ಯ ಭವನ ಕಟ್ಟಡದಲ್ಲಿ ಸರ್ಕಾರಿ ಪದವಿ ಮಹಿಳಾ ಕಾಲೇಜಿನ ಕೆಲವು ತರಗತಿಗಳಿಗೆ ತಾತ್ಕಾಲಿಕವಾಗಿ ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿದೆ.
‘ಸಾಹಿತ್ಯ ಭವನ ಜಾಗದ ಲೀಸ್ ಅವಧಿ 1994ರಲ್ಲಿ ಮುಗಿದಿದೆ. 2021ರಲ್ಲಿ ಜಿಲ್ಲಾಧಿಕಾರಿ ಜಿಲ್ಲಾ ಸಾಹಿತ್ಯ ಪರಿಷತ್ತಿಗೆ ನೋಟಿಸ್ ನೀಡಿದ್ದರು. 2022–23ನೇ ಸಾಲಿನವರೆಗೂ ಜಾಗದ ವಾರ್ಷಿಕ ಬಾಡಿಗೆ ಪಾವತಿಸಲಾಗಿದೆ. ಜಾಗದ ‘ಲೀಸ್’ ಮುಂದುವರಿಸುವಂತೆ ಮೂರು ವರ್ಷಗಳ ಹಿಂದೆ ಮನವಿ ಸಲ್ಲಿಸಲಾಗಿದೆ. ಈವರಗೆ ನಿರ್ಧಾರ ಕೈಗೊಂಡಿಲ್ಲ’ ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಲಿಂಗರಾಜ ಅಂಗಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಸಾಹಿತ್ಯ ಭವನ ಆವರಣದಲ್ಲಿ ಸಾಂಸ್ಕೃತಿಕ ಬಯಲು ರಂಗಮಂದಿರವನ್ನು ನಿರ್ಮಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವು ಉದ್ದೇಶಿಸಿದೆ. ಧಾರವಾಡದಲ್ಲಿ 2019ರಲ್ಲಿ ನಡೆದಿದ್ದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೀಡಿದ ಹಣದಲ್ಲಿ ಉಳಿದಿದ್ದ ₹ 26 ಲಕ್ಷವನ್ನೂ ಈ ಬಯಲು ರಂಗಮಂದಿರ ನಿರ್ಮಾಣಕ್ಕೆ ಬಳಸಿಕೊಳ್ಳಲು ನಿರ್ಧರಿಸಿದೆ. ಆದರೆ, ಜಾಗದ ‘ಲೀಸ್’ ಮುಂದುವರಿಸುವ ಇತ್ಯರ್ಥವಾಗುವವರೆಗೆ ಕಾಯಬೇಕಿದೆ.
ಸಾಹಿತ್ಯ ಪರಿಷತ್ತಿಗೆ ಗುತ್ತಿಗೆ ಆಧಾರದಲ್ಲಿ ಒದಗಿಸಿರುವ ಜಾಗದ ವಿವರಗಳನ್ನು ಸಲ್ಲಿಸುವಂತೆ ಮೂರೂವರೆ ತಿಂಗಳ ಹಿಂದೆ ಉಪವಿಭಾಗಾಧಿಕಾರಿಯವರಿಗೆ ತಿಳಿಸಲಾಗಿದೆ. 26 ಅಂಶಗಳ ‘ಚೆಕ್‌ಲಿಸ್ಟ್’ ಪರಿಶೀಲಿಸಿ ವಿವರ ನೀಡಲು ತಿಳಿಸಲಾಗಿದೆ. ಈ ಜಾಗದ ಗುತ್ತಿಗೆ ಅವಧಿ ನವೀಕರಣ ಪ್ರಕ್ರಿಯೆ ಬಹಳ ಮಂದಗತಿಯಲ್ಲಿ ನಡೆಯುತ್ತಿದೆ ಎಂಬುದು ಸಾಹಿತ್ಯ ಪರಿಷತ್ತಿನವರ ದೂರು.
‘ಧಾರವಾಡ ಸಾಹಿತಿಗಳ ಊರು. ಸರ್ಕಾರವು ಜಿಲ್ಲಾ ಸಾಹಿತ್ಯ ಭವನದ ಜಾಗದ ಗುತ್ತಿಗೆ ಅವಧಿಯನ್ನು ನವೀಕರಣಗೊಳಿಸಬೇಕು. ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು’ ಎಂದು ಪ್ರೊ.ವೀರಣ್ಣ ರಾಜೂರ ಕೋರಿದರು.
ಗುತ್ತಿಗೆ ಅವಧಿಯನ್ನು 30 ವರ್ಷಕ್ಕೆ ನವೀಕರಣಗೊಳಿಸುವಂತೆ ಬೇಡಿಕೆ ಇಟ್ಟಿದ್ದೇವೆ. ಸರ್ಕಾರ ತ್ವರಿತವಾಗಿ ಪ್ರಕ್ರಿಯೆ ಮುಗಿಸಲು ಕ್ರಮ ವಹಿಸಬೇಕುಪ್ರೊ.ಲಿಂಗರಾಜ ಅಂಗಡಿ ಜಿಲ್ಲಾ ಘಟಕದ ಅಧ್ಯಕ್ಷ ಕಸಾಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.