ಧಾರವಾಡ: ಕೃಷಿ ವಿಶ್ವವಿದ್ಯಾಲಯದಲ್ಲಿ ಸೆ. 13ರಿಂದ ನಾಲ್ಕು ದಿನ ಕೃಷಿ ಮೇಳ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ. ವೇದಿಕೆಗಳು, ಮಳಿಗೆಗಳನ್ನು ಸಿದ್ಧಗೊಳಿಸಲಾಗಿದೆ.
‘ಪೌಷ್ಟಿಕ ಆಹಾರ ಭದ್ರತೆಗೆ ಮಣ್ಣಿನ ಆರೋಗ್ಯ ಮತ್ತು ಸಾಂಪ್ರದಾಯಿಕ ತಳಿಗಳು’ ಘೋಷ ವಾಕ್ಯದಡಿ ಮೇಳ ನಡೆಯಲಿದೆ. ಮೇಳದಲ್ಲಿ 500ಕ್ಕೂ ಹೆಚ್ಚು ಮಳಿಗೆ ತೆರೆಯಲು ವ್ಯವಸ್ಥೆ ಮಾಡಲಾಗಿದೆ.
ಬೀಜ, ರಸಾಯನಿಕ ಗೊಬ್ಬರ, ಕೀಟನಾಶಕ, ರೋಗನಾಶಕ, ಕಳೆನಾಶಕಗಳ ಮಳಿಗೆಗಳು, ಭಾರಿ ಯಂತ್ರೋಪಕರಣಗಳ ಮಳಿಗೆಗಳು, ನೀರಾವರಿ – ಕೃಷಿ ಉಪಕರಣಗಳ ಮಳಿಗೆಗಳು, ಆಹಾರ ಮಳಿಗೆಗಳು ಸಹಿತ ವಿವಿಧ ಮಳಿಗೆಗಳಿಗೆ ವ್ಯವಸ್ಥೆ ಮಾಡಲಾಗಿದೆ.
ಮೇಳದ ಮುಖ್ಯ ಪ್ರವೇಶ ದ್ವಾರದಲ್ಲಿ ಮೇಳದ ನಕ್ಷೆ (ಮಳಿಗೆ, ವೇದಿಕೆ ಮಾರ್ಗಗಳು, ಕಾರ್ಯಕ್ರಮ ಮತ್ತು ಪ್ರದರ್ಶನ ಸ್ಥಳ...) ಅಳವಡಿಸಲಾಗಿದೆ. ಕ್ಷೇತ್ರ ಪ್ರಾತ್ಯಕ್ಷಿಕೆಗಳ (ಬೆಳೆ ಪ್ರಯೋಗ ತಾಕು) ಭೇಟಿಗಾಗಿ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಪರಿಸರ ಸ್ನೇಹಿ ನೈಸರ್ಗಿಕ ಮತ್ತು ಸಾವಯವ ಕೃಷಿ, ಬೀಜಮೇಳ, ಮಳೆ ನೀರು ಸಂಗ್ರಹ, ಅಂತರ್ಜಲ ಮರುಪೂರಣ, ಫಲ-ಪುಷ್ಪ ಪ್ರದರ್ಶನ ಹಾಗೂ ವಿಸ್ಮಯಕಾರಿ ಕೀಟ ಪ್ರಪಂಚ, ಕಿಸಾನ್ ಡ್ರೋನ್ ಬಳಕೆ, ಕೃಷಿ ಅರಣ್ಯ, ಪಶು ಸಂಗೋಪನೆ, ಜಾನುವಾರು ಪ್ರದರ್ಶನ ಮೊದಲಾದವು ಈ ಬಾರಿ ಮೇಳದ ಪ್ರಮುಖ ಆಕರ್ಷಣೆಗಳಾಗಿವೆ.
ಬಿತ್ತನೆ ಬೀಜ: ಬೀಜ ಘಟಕದಲ್ಲಿ ಹಿಂಗಾರು ಹಂಗಾಮಿಗೆ ಕಡಲೆ, ಜೋಳ, ಗೋಧಿ, ಕಡಲೆ, ಕುಸುಬೆ ಮೊದಲಾದ ಬಿತ್ತನೆ ಬೀಜಗಳು, ಜೈವಿಕ ಗೊಬ್ಬರದ ದ್ರವ, ಜೈವಿಕ ಗೊಬ್ಬರ ಪುಡಿ, ಜೈವಿಕ ಪೀಡೆನಾಶಕ ಇವೆ.
ಸ್ಟಾರ್ಟ್ ಅಪ್ (ನವೋದ್ಯಮ) ಪೆವಿಲಿಯನ್: ಮೇಳದಲ್ಲಿ ನವೋದ್ಯಮ ಪೆವಿಲಿಯನ್ ವ್ಯವಸ್ಥೆ ಮಾಡಲಾಗಿದೆ. ರೈತರು ನವೋದ್ಯಮಗಳ (ನವೀನ ಉತ್ಪನ್ನಗಳು...) ಮಾಹಿತಿ ಪಡೆಯಬಹುದು.
ಕೃಷಿ ಕ್ಷೇತ್ರದಲ್ಲಿ ನವೋದ್ಯಮ ಸ್ಥಾಪನೆ, ಉದ್ಯೋಗ ಸೃಷ್ಟಿ ಕುರಿತು ಮಾಹಿತಿ ಪಡೆಯಬಹುದು.
ಎಂಟಕ್ಕೂ ಹೆಚ್ಚು ನವೋದ್ಯಗಳನ್ನು ಪೆವಿಲಿಯನ್‌ನಲ್ಲಿ ಪ್ರದರ್ಶಿಸಲಾಗುವುದು. ‘ಕಿಸಾನ್ ಕನೆಕ್ಟ್’, ‘ಕೃಷಿ ಹೃದಯ‘ ಮೊದಲಾದವು ಇವೆ ಎಂದು ಪ್ರೊ.ಡೊಳ್ಳಿ ತಿಳಿಸಿದರು.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು 14ರಂದು 11 ಗಂಟೆಗೆ ಬೀಜ ಮೇಳ ಉದ್ಘಾಟಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 15ರಂದು ಬೆಳಿಗ್ಗೆ 11.30ಕ್ಕೆ ಕೃಷಿ ಮೇಳದ ಉದ್ಘಾಟನೆ ನೇರವೇರಿಸುವರು. 16ರಂದು ಮಧ್ಯಾಹ್ನ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಮೇಳದಲ್ಲಿ ಇಂದು ಬೆಳಿಗ್ಗೆ 11ಕ್ಕೆ
‘ಸಾಂಪ್ರದಾಯಿಕ ತಳಿಗಳ ಪ್ರಾಮುಖ್ಯತೆ ಹಾಗೂ ಸಂರಕ್ಷಣೆ’ ಹಾಗೂ ಮಧ್ಯಾಹ್ನ 12.30 ರಿಂದ ‘ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಪೌಷ್ಟಿಕ ಆಹಾರ ಭದ್ರತೆ’ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ‘ಎಕರೆಗೆ 100 ಟನ್ ಕಬ್ಬು ಇಳುವರಿಗೆ ವಿಶೇಷ ತಾಂತ್ರಿಕತೆಗಳು’ ತರಬೇತಿ ಕಾರ್ಯಕ್ರಮ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಡೆಯಲಿದೆ. ಮಧ್ಯಾಹ್ನ 4.30ಕ್ಕೆ ಕನ್ನಡ ಕೃಷಿ ಗೋಷ್ಠಿ ಚನ್ನವೀರ ಕಣವಿ ಕೃಷಿ ಲೇಖನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
‘ಆನ್‌ಲೈನ್‌ನಲ್ಲಿ 46 ಸಾವಿರ ಮಂದಿ ನೋಂದಣಿ’
ಕೃಷಿ ಮೇಳದಲ್ಲಿ ಪಾಲ್ಗೊಳ್ಳಲು ‘ಕ್ಯೂಆರ್ ಕೋಡ್’ ಮೂಲಕವೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಆನ್‌ಲೈನ್‌ನಲ್ಲಿ ಈವರೆಗೆ 40 ಸಾವಿರ ಮಂದಿ ನೋಂದಣಿಯಾಗಿದ್ಧಾರೆ ಎಂದು ಕೃಷಿ ವಿ.ವಿ. ಪ್ರೊ.ಡೊಳ್ಳಿ ತಿಳಿಸಿದರು. ಮೇಳದ ಸ್ಥಳದಲ್ಲೇ ನೋಂದಣಿ ನಡೆಯಲಿದೆ. ಈಗಾಗಲೇ ಈ ನಿಟ್ಟಿನಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ನಾಡಿನ ವಿವಿಧೆಡೆಗಳ ರೈತರು ಮೇಳಕ್ಕೆ ಭೇಟಿ ನೀಡುತ್ತಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.