ADVERTISEMENT

ರಸ್ತೆ ಅಧ್ವಾನ; ಪ್ರಯಾಣ ಹೈರಾಣ

24X7 ನೀರು ಪೂರೈಕೆಗೆ ಪೈಪ್‌ ಅಳವಡಿಕೆ ಕಾಮಗಾರಿ; ರಸ್ತೆ ಅಗೆತ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 4:19 IST
Last Updated 19 ಆಗಸ್ಟ್ 2025, 4:19 IST
ಧಾರವಾಡದಿಂದ ಕ್ಯಾರಕೊಪ್ಪ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯು ತಪೋವನದ ಬಳಿ ಗದಿಗೆಟ್ಟುವುದು
ಧಾರವಾಡದಿಂದ ಕ್ಯಾರಕೊಪ್ಪ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯು ತಪೋವನದ ಬಳಿ ಗದಿಗೆಟ್ಟುವುದು   

ಧಾರವಾಡ: ನಗರ ಮತ್ತು ಹೊರವಲಯದ ವಿವಿಧೆಡೆ ರಸ್ತೆಗಳು ಹದಗೆಟ್ಟಿವೆ. ಈ ರಸ್ತೆಗಳಲ್ಲಿ ಪ್ರಯಾಣ ಹೈರಾಣಾಗಿ ಪರಿಣಮಿಸಿದೆ. 

ನಿರಂತರ ತುಂತುರು ಮಳೆಯಾಗುತ್ತಿದ್ದು, ಹಲವು ರಸ್ತೆಗಳಲ್ಲಿ ಡಾಂಬರ್‌ ಕಿತ್ತಿದೆ. ಜಲ್ಲಿಕಲ್ಲು ಚೆಲ್ಲಾಪಿಲ್ಲಿಯಾಗಿ ಹೊಂಡ, ಗುಂಡಿಗಳಾಗಿ ಅಧ್ವಾನವಾಗಿವೆ. ಮಳೆಯಾದಾಗ ಗುಂಡಿಗಳಲ್ಲಿ ನೀರು ತುಂಬಿರುತ್ತದೆ. ತಗ್ಗು, ಗುಂಡಿ ಭಾಗದಲ್ಲಿ ವಾಹನಗಳು ಸಾಗುವಾಗ ಕೆಸರು ನೀರು ಪಾದಚಾರಿಗಳಿಗೆ ಸಿಡಿಯುತ್ತದೆ. 

24X7 ಕುಡಿಯುವ ನೀರಿನ ಯೋಜನೆಯ ಪೈಪ್‌ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ರಸ್ತೆ ಅಗೆದು ಮುಚ್ಚಿರುವ ಕಡೆಗಳಲ್ಲಿ ತಗ್ಗು, ಗುಂಡಿಗಳಾಗಿವೆ. ಕೆಲ ಬಡಾವಣೆಗಳಲ್ಲಿ ಹೆಜ್ಜೆಹೆಜ್ಜೆಗೂ ಗುಂಡಿಗಳಾಗಿದ್ದು, ಓಡಾಟ ತಾಪತ್ರಯವಾಗಿದೆ.  ಗುಂಡಿ ತಪ್ಪಿಸಿ ವಾಹನ ಚಲಾಯಿಸುವ ಭರದಲ್ಲಿ ಕೆಲ ಬೈಕ್‌ ಸವಾರರು ಬಿದ್ದು ಪೆಟ್ಟಾಗಿರುವ ನಿದರ್ಶನಗಳು ಇವೆ. 

ADVERTISEMENT

ಕಲಘಟಗಿ ಕಡೆಗಿನ ಮಾರ್ಗದ ತೇಜಸ್ವಿನಗರದ ರೈಲ್ವೆ ಸೇತುವೆ ಬಳಿ, ಮಾಳಮಡ್ಡಿ, ರಾಮನಗರ, ಕುಮಾರೇಶ್ವರ ನಗರ, ಪ್ರತಿಭಾ ಕಾಲೊನಿ, ಆಂಜನೇಯ ನಗರ, ಕಲ್ಯಾಣ ನಗರ, ಮದಿಹಾಳ, ಮಾಳಾಪುರ, ಹೆಬ್ಬಳ್ಳಿ ಅಗಸಿ, ಸಾಧನಕೇರಿ, ಸಾಧನಕೇರಿ, ಸಾಯಿನಗರ, ಪತ್ರೇಶ್ವರ ನಗರ, ಸಂಗೊಳ್ಳಿ ರಾಯಣ್ಣ ನಗರ, ಹೊಸಯಲ್ಲಾಪುರ ಸಹಿತ ವಿವಿಧೆಡೆ ರಸ್ತೆಗಳು ದುಃಸ್ಥಿತಿಯಲ್ಲಿವೆ. 

ಮೆಹಬೂಬ್‌ ನಗರ, ಹಶ್ಮಿ ನಗರ ಸಹಿತ ಕೆಲವು ಬಡಾವಣೆಗಳಲ್ಲಿ ಡಾಂಬರ್‌ ರಸ್ತೆಯೇ ಇಲ್ಲ. ಇಲ್ಲಿನ ನಿವಾಸಿಗಳು ಮಳೆಗಾಲದಲ್ಲಿ ಕೆಸರುಮಯ ಮಣ್ಣಿನ ಹಾದಿಯಲ್ಲಿ ಓಡಾಡಲು ಪರದಾಡಬೇಕಾದ ಸ್ಥಿತಿ ಇದೆ. 

‘ಹಶ್ಮಿ ನಗರದಲ್ಲಿ ರಸ್ತೆಯ ತಗ್ಗುಗಳಲ್ಲಿ ನೀರು ನಿಲ್ಲುತ್ತದೆ. ವಾಹನಗಳು ಸಂಚರಿಸಿದಾಗ ಮನೆಗಳ ಗೋಡೆಗೆ ಕೆಸರು ಸಿಡಿಯುತ್ತದೆ. ಸಣ್ಣಪುಟ್ಟ ಅಪಘಾತಗಳೂ ಸಂಭವಿಸುತ್ತವೆ. ರಸ್ತೆಯಲ್ಲಿ ನೀರು ನಿಲ್ಲುವುದರಿಂದ ರೋಗ ಹರಡುವ ಭೀತಿ ಇದೆ. ರಸ್ತೆ ಅಭಿವೃದ್ಧಿ ಮತ್ತು ಒಳಚರಂಡಿ ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕ್ರಮವಹಿಸಲ್ಲ’ ಎಂದು ಹಶ್ಮಿ ನಗರದನಿವಾಸಿ ಮೋಹನ ಶೆಟ್ಟಿ ಹೇಳುತ್ತಾರೆ. 

‘ಪೈಪ್‌ ಅಳವಡಿಸಲು ರಸ್ತೆಗಳನ್ನು ಅಗೆದು ಸರಿಯಾಗಿ ಮುಚ್ಚದ ಕಾರಣ ಗುಂಡಿಗಳಾಗಿವೆ. ರಸ್ತೆ ದುರಸ್ತಿ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಿಲ್ಲ’ ಎಂದು ರಾಮನಗರದ ನಿವಾಸಿಯೊಬ್ಬರು ದೂರಿದರು. 

ಧಾರವಾಡದಟೊಲ್‍ನಾಕಾ ಬಳಿಯ ಕಲಘಟಗಿ ಮಾರ್ಗದ ರಸ್ತೆಯಲ್ಲಿ ಗುಂಡಿಗಳಲ್ಲಿ ನೀರು ನಿಂತಿರುವುದು 
ಗುಂಡಿಮಯ ರಸ್ತೆಗಳಲ್ಲಿ ಆಟೊರಿಕ್ಷಾ ಚಾಲನೆ ಮಾಡುವುದು ಸಾಹಸವಾಗಿದೆ. ಅಧ್ವಾನವಾದ ರಸ್ತೆಗಳಲ್ಲಿ ಚಲಿಸುವುದರಿಂದ ವಾಹನಗಳು ಹಾಳಾಗುತ್ತವೆ. ಪದೇಪದೇ ರಿಪೇರಿ ಮಾಡಿಸುವಂತಾಗಿದೆ. ದುರಸ್ತಿ ಖರ್ಚು ಚಾಲಕರಿಗೆ ಆರ್ಥಿಕ ಹೊರೆಯಾಗಿದೆ
ಕೆ.ಎಂ.ಚೌಧರಿ ಅಧ್ಯಕ್ಷ ಆಟೊರಿಕ್ಷಾ ಚಾಲಕರ ಸಂಘ ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.