ADVERTISEMENT

‌ನವಲಗುಂದ | ಅಶುದ್ಧ ಕುಡಿಯುವ ನೀರು ಪೂರೈಕೆ

ಗುಡಿಸಾಗರ ಗ್ರಾಮದ ಜನರಲ್ಲಿ ಆರೋಗ್ಯ ಸಮಸ್ಯೆ: ಪರಿಹಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 11 ಮೇ 2024, 5:11 IST
Last Updated 11 ಮೇ 2024, 5:11 IST
ನಾಗನೂರ ಗ್ರಾಮದ ಕೆರೆಯಿಂದ ಟ್ರ್ಯಾಕ್ಟರ್ ಮೂಲಕ ನೀರು ತರುತ್ತಿರುವ ಗುಡಿಸಾಗರ ಗ್ರಾಮಸ್ಥರು 
ನಾಗನೂರ ಗ್ರಾಮದ ಕೆರೆಯಿಂದ ಟ್ರ್ಯಾಕ್ಟರ್ ಮೂಲಕ ನೀರು ತರುತ್ತಿರುವ ಗುಡಿಸಾಗರ ಗ್ರಾಮಸ್ಥರು    

ನವಲಗುಂದ: ತಾಲ್ಲೂಕಿನ ಗುಡಿಸಾಗರ ಗ್ರಾಮದ ಜನರಿಗೆ ಕುಡಿಯಲು ಯೋಗ್ಯವಲ್ಲದ ನೀರನ್ನು ಪೂರೈಸಲಾಗುತ್ತಿದ್ದು, ಇದರಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಸ್ಥಳೀಯರು ತುತ್ತಾಗಿದ್ದಾರೆ. 

ಗ್ರಾಮಸ್ಥರಿಗೆ ಪ್ರತಿ ದಿನ ನಲ್ಲಿ ಮೂಲಕ ಪೂರೈಸುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಗ್ರಾಮಸ್ಥರು ಪಕ್ಕದ ನಾಗನೂರ ಅಥವಾ ನವಲಗುಂದ ಪಟ್ಟಣಕ್ಕೆ ಬಂದು ಕುಡಿಯುವ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ. 

ಇಲ್ಲಿನ ಕೆರೆಯ ನೀರು ಶುದ್ಧವಾಗಿಲ್ಲ. ಇದೇ ನೀರನ್ನು ಗ್ರಾಮ ಪಂಚಾಯಿತಿಯಿಂದ  ಗ್ರಾಮದ ಜನರಿಗೆ ನಿತ್ಯ ಸರಬರಾಜು ಮಾಡಲಾಗುತ್ತಿದೆ. ಗಲೀಜು ಆಗಿರುವ ನೀರನ್ನು ಶುದ್ಧೀಕರಣ ಮಾಡಿ ಬಿಡಬೇಕು ಎಂಬ ಅರಿವು ಸ್ಥಳೀಯ ಅಧಿಕಾರಿಗಳಲ್ಲಿ ಇಲ್ಲವಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ. 

ADVERTISEMENT

ನಲ್ಲಿಯಲ್ಲಿ ಬರುವ ನೀರು ಕುಡಿಯುವಾಗ ದುರ್ವಾಸನೆ ಬರುತ್ತಿದೆ. ಈ ನೀರನ್ನು ಕುಡಿದು ಹಲವರಿಗೆ ವಾಂತಿ –ಬೇಧಿ ಕಾಣಿಸಿಕೊಂಡು ಈಗಾಗಲೇ ಹಲವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುತ್ತಾರೆ ಗ್ರಾಮದ ಹಿರಿಯರು. 

ಕುಡಿಯುಲು ಯೋಗ್ಯವಲ್ಲದ ಗಲೀಜು ನೀರು ಪೂರೈಸಲಾಗುತ್ತಿದೆ. ಇದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಮಸ್ಯೆಗೆ ‌ಪರಿಹಾರ ಕಂಡುಕೊಳ್ಳಬೇಕಾದ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರ ಆರೋಪಿಸುತ್ತಿದ್ದಾರೆ. 

‘ನೀರಿನ ಸಮಸ್ಯೆಯಾಗಿ ವಾಂತಿ– ಬೇಧಿ ಉಂಟಾಗಿದ್ದು, ಶಲವಡಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿದ್ದೇನೆ.  ಇದೀಗ ನಾವು ನವಲಗುಂದದಿಂದ ನೀರು ತಂದು ಕುಡಿಯುತ್ತಿದ್ದೇವೆ‘ ಎನ್ನುತ್ತಾರೆ ಕೂಲಿ ಕಾರ್ಮಿಕ ಮಹಿಳೆ ಸಾವಿತ್ರಿ ಕುಲಕರ್ಣಿ ಅವರು. 

ಆರ್ಥಿಕ ಸ್ಥಿತಿವಂತರು ಬೇರೆ ಕಡೆಯಿಂದ ಟ್ರ್ಯಾಕ್ಟರ್‌ ಮೂಲಕ ನೀರು ತರುತ್ತಾರೆ. ಕೂಲಿ ಕಾರ್ಮಿಕರಾದ ನಾವು ಗ್ರಾಮ ಪಂಚಾಯಿತಿ ಪೂರೈಸುವ ಗಲೀಜು ನೀರು ಕುಡಿಯುತ್ತಿದ್ದೇವೆ. ಸಂಬಂಧಿಸಿದವರು ಶುದ್ಧ ಕುಡಿಯುವ ನೀರು ಪೂರೈಸಬೇಕು. 

-ಸಂತೋಷ ಪೂಜಾರ, ಗ್ರಾಮಸ್ಥ

ಗುಡಿಸಾಗರ ಗ್ರಾಮದ ಕೆರೆಯ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಪರಿಶೀಲಿಸಿ, ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು.

-ಮಲ್ಲಿಕಾರ್ಜುನ ಹೆಗ್ಗಣ್ಣವರ, ತಹಶೀಲ್ದಾರ್, ನವಲಗುಂದ

ನವಲಗುಂದ ತಾಲ್ಲೂಕಿನ ಗುಡಿಸಾಗರ ಗ್ರಾಮದ ಕೆರೆಯ ನೀರು ದುರ್ವಾಸನೆಯಿಂದ ಕೂಡಿರುವುದು

ನಿತ್ಯ ಗಲೀಜು ನೀರು ಸರಬರಾಜು ವಾಂತಿ- ಬೇಧಿಗೆ ತುತ್ತಾಗಿರುವ ಸ್ಥಳೀಯರು ಮಕ್ಕಳ ಆರೋಗ್ಯದಲ್ಲಿಯೂ ಸಮಸ್ಯೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.