ADVERTISEMENT

ಧಾರವಾಡ ಕೃಷಿ ಮೇಳ| ಕಣ್ಸೆಳೆದ ವಿಭಿನ್ನ ತಳಿಯ ಕುರಿಗಳು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 19:30 IST
Last Updated 19 ಸೆಪ್ಟೆಂಬರ್ 2022, 19:30 IST
ಕೃಷಿ ಮೇಳದಲ್ಲಿ ರಾಜಸ್ಥಾನದ ಶಿರೋಹಿ ತಳಿ ಕುರಿಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದ ಬಸವರಾಜ ಕದಾಡಿ
ಕೃಷಿ ಮೇಳದಲ್ಲಿ ರಾಜಸ್ಥಾನದ ಶಿರೋಹಿ ತಳಿ ಕುರಿಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದ ಬಸವರಾಜ ಕದಾಡಿ   

ಹುಬ್ಬಳ್ಳಿ: ಮೂರ್ನಾಲ್ಕು ಅಡಿ ಎತ್ತರವಿರುವಕಪ್ಪು, ಬಿಳಿ, ಕಂದು ಬಣ್ಣದ ಆ ಕುರಿಗಳನ್ನು ನೋಡುವುದೇ ಚೆಂದ. ನೀಳ ಕಿವಿ, ಸೆಳೆಯುವ ಕಣ್ಣುಗಳು, ಮೊನಚಾದ ಕೋಡುಗಳು, ನುಗ್ಗಿದರೆ ಒಬ್ಬರು ಹಿಡಿಯಲಾಗದ ದೃಢಕಾಯತೆ... ಕೃಷಿ ಮೇಳದ ಪ್ರವೇಶ ದ್ವಾರದ ಎಡಭಾಗದಲ್ಲಿ ಕುರಿಗಳ ಪ್ರದರ್ಶನ ವಿಭಾಗದಲ್ಲಿ ಗಮನ ಸೆಳೆದ ತರಹೇವಾರಿ ತಳಿಯ ಕುರಿಗಳ ನೋಟವಿದು.

ವಿದೇಶಿ ತಳಿ ಸೇರಿದಂತೆ ದೇಶದ ವಿವಿಧ ರಾಜ್ಯಗಳ ತಳಿಗಳ ಆ ಕುರಿಗಳನ್ನು ಮುಗಿಬಿದ್ದು ಕಣ್ತುಂಬಿಕೊಂಡ ರೈತರು, ‘ನಮ್ಮಲ್ಲೂ ಇವುಗಳನ್ನು ಸಾಕಬಹುದಾ?’ ಎನ್ನುತ್ತಾ ತಳಿಗಳ ಬಗ್ಗೆ ಮಾಹಿತಿ ಪಡೆದರು. ಕೊಬ್ಬಿದ ಕುರಿಗಳೊಂದಿಗೆ ಯುವಜನರು ಸೆಲ್ಫಿ ಕ್ಲಿಕ್ಕಿಸಿಕೊಂಡರು.

ವಿಭಿನ್ನ ತಳಿ: ದಕ್ಷಿಣ ಆಫ್ರಿಕಾದ ತೋತಾಪುರಿ, ರಾಜಸ್ಥಾನದ ಶಿರೊಹಿ, ಕರ್ನಾಟಕದ ಜಮುನಾಪುರೆ, ಪಂಜಾಬ್‌ನ ಬಿಟಲ್ ಹಾಗೂ ಛತ್ತೀಸಗಢದ ಕೊಟ್ಟಾ ತಳಿಗಳು ಪ್ರದರ್ಶನದ ಆಕರ್ಷಣೆಯಾಗಿದ್ದವು. ಧಾರವಾಡದ ವಿನಯ್ ಗೋಟ್ ಫಾರ್ಮ್‌ನಲ್ಲಿ ಈ ಐದೂ ತಳಿಗಳ ಕುರಿಗಳನ್ನು ಸಾಕಲಾಗಿದೆ.

ADVERTISEMENT

‘ರಾಜಸ್ಥಾನದ ಶಿರೊಹಿ ಬೇಗನೆ ಬೆಳವಣಿಗೆ ಹೊಂದುವ ತಳಿಯ ಕುರಿ. ಆರು ತಿಂಗಳಲ್ಲಿ 40 ಕೆ.ಜಿ. ತೂಗುವ ಇದು, ಒಂದು ವರ್ಷದ ಹೊತ್ತಿಗೆ 100 ಕೆ.ಜಿ ದಾಟುತ್ತದೆ. ಒಂದೂವರೆ ವರ್ಷದಲ್ಲಿ ಗಂಡು ಕುರಿ ಸುಮಾರು 150 ಕೆ.ಜಿ. ಹಾಗೂ ಹೆಣ್ಣು ಕುರಿ 96 ಕೆ.ಜಿ. ತೂಗುತ್ತವೆ. ಸದ್ಯ ಈ ಕುರಿ ಮಾಂಸ ಪ್ರತಿ ಕೆ.ಜಿ.ಗೆ ₹500ಕ್ಕೆ ಮಾರಾಟವಾಗುತ್ತಿದೆ’ ಎಂದು ವಿನಯ್‌ ಗೋಟ್ ಫಾರ್ಮ್‌ನ ಮೇಲ್ವಿಚಾರಕರಾದ ಬಸವರಾಜ ಕದಾಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಕ್ಷಿಣ ಆಫ್ರಿಕಾದ ತೋತಾಪುರಿ ತಳಿಯ ಗಂಡು ಕುರಿ ವರ್ಷಕ್ಕೆ 75 ಕೆ.ಜಿ ಹಾಗೂ ಹೆಣ್ಣು ಕುರಿ 60 ಕೆ.ಜಿ ತೂಗುತ್ತವೆ. ವರ್ಷಕ್ಕೆ ಒಂದು ಕುರಿಯಿಂದ ಗರಿಷ್ಠ ₹50 ಸಾವಿರದ ವರೆಗೆ ಆದಾಯ ಸಿಗುತ್ತದೆ. ಕರ್ನಾಟಕದ ಜಮುನಾಪುರೆ ತಳಿ ಕುರಿಗಳು ಸಹ ಗರಿಷ್ಠ 74ರ ವರೆಗೆ ತೂಕ ಬರುತ್ತವೆ. ಸದ್ಯ ಅವುಗಳ ಮಾಂಸವು ಕೆ.ಜಿ.ಗೆ ₹550ಕ್ಕೆ ಮಾರಾಟವಾಗುತ್ತಿದೆ’ ಎಂದರು.

‘ಛತ್ತೀಸಗಢದ ಕೊಟ್ಟಾ ತಳಿಯ ಕೋಡು ರಿಂಗಿನ ಆಕಾರದಲ್ಲಿರುತ್ತದೆ. ಗಂಡು ಕುರಿ ವರ್ಷಕ್ಕೆ 68 ಕೆ.ಜಿ ತೂಗುತ್ತದೆ. ಸದ್ಯ ಕೆ.ಜಿ.ಗೆ ₹550 ಇದ್ದು, ವರ್ಷಕ್ಕೆ ಎರಡು ಮರಿ ಹಾಕುತ್ತದೆ. ಪಂಜಾಬಿನ ಬಿಟಲ್ ತಳಿ ಕುರಿಗಳು 90 ಕೆ.ಜಿ.ವರೆಗೆ ಬರುತ್ತವೆ. ವರ್ಷಕ್ಕೆ ನಾಲ್ಕು ಮರಿಹಾಕುವ ಈ ತಳಿಯ ಮಾಂಸ ಪ್ರತಿ ಕೆ.ಜಿ.ಗೆ ₹650ಕ್ಕೆ ಮಾರಾಟವಾಗುತ್ತದೆ’ ಎಂದು ಹೇಳಿದರು.

‘ಉತ್ತರ ಕರ್ನಾಟಕಕ್ಕೆ ಪೂರಕವಾದ ತಳಿ’

‘ಶಿರೊಹಿ, ಜಮುನಾಪುರೆ,ತೋತಾಪುರಿ, ಬಿಟಲ್ ಹಾಗೂ ಕೊಟ್ಟಾ ಬಯಲುಸೀಮೆಯಲ್ಲಿ ಸಾಕಲು ಹೇಳಿ ಮಾಡಿಸಿದ ಕುರಿಯ ತಳಿಗಳಾಗಿವೆ. ಈ ಭಾಗದ ಕುರಿಗಳಿಗೆ ಸಾಮಾನ್ಯವಾಗಿ ನೀಡುವ ಆಹಾರವನ್ನೇ ಇವುಗಳಿಗೂ ನೀಡಬಹುದು. ನಾವು ಯಾವ ರೀತಿಯ ಆಹಾರ ನೀಡುತ್ತೇವೊ ಆ ರೀತಿ ಅವು ಬೆಳೆಯುತ್ತವೆ. ಇವುಗಳ ಮಾಂಸವಷ್ಟೇ ಅಲ್ಲದೆ, ಗೊಬ್ಬರವೂ ರೈತರ ಜೇಬು ತುಂಬಿಸಲಿದೆ’ ಎಂದು ವಿನಯ್ ಗೋಟ್ ಫಾರ್ಮ್‌ನ ಬಸವರಾಜ ಕದಾಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.