ADVERTISEMENT

ಡಿಮ್ಹಾನ್ಸ್ | ಅನುಮೋದನೆಯಿಲ್ಲದೆ ಬಿಲ್ ಪಾವತಿ: ಟೆಂಡರ್‌ನಲ್ಲಿ ಅವ್ಯವಹಾರ ಶಂಕೆ

ನಾಗರಾಜ್ ಬಿ.ಎನ್‌.
Published 16 ಮಾರ್ಚ್ 2025, 23:30 IST
Last Updated 16 ಮಾರ್ಚ್ 2025, 23:30 IST
<div class="paragraphs"><p>ಧಾರವಾಡದ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ಕಟ್ಟಡ</p></div>

ಧಾರವಾಡದ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ಕಟ್ಟಡ

   

ಹುಬ್ಬಳ್ಳಿ: ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ಡಿಮ್ಹಾನ್ಸ್) ಆಡಳಿತಾತ್ಮಕ ಅನುಮೋದನೆ ಇಲ್ಲದೇ, ₹98.67 ಲಕ್ಷ ವೆಚ್ಚದ ವೈದ್ಯಕೀಯ ಮತ್ತು ಇತರ ಸಾಮಗ್ರಿಗಳನ್ನು‌ ಟೆಂಡರ್ ಮೂಲಕ ಖರೀದಿಸಲಾಗಿದೆ.‌ ನಿಯಮಬಾಹಿರವಾಗಿ ಟೆಂಡರ್ ಕರೆದಿದ್ದೂ ಅಲ್ಲದೆ, ಅನುಮತಿ ಪಡೆಯದೇ ಗುತ್ತಿಗೆದಾರರಿಗೆ ಹಣ ಪಾವತಿಸಲಾಗಿದೆ. ಈ ಸಂಬಂಧ ಅಧಿಕಾರಿಗಳಿಗೆ ನಿರ್ದೇಶಕರು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.

ವೈಫೈ ರೂಟರ್, ಟಿವಿ, ಎಸಿ ಸೇರಿ ಹತ್ತಕ್ಕೂ ಹೆಚ್ಚು ಸಾಮಗ್ರಿಗಳನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಖರೀದಿಸಿ, ಅವ್ಯವಹಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸಂಸ್ಥೆಯ ಮೇಲಧಿಕಾರಿಗಳ ಅನುಮತಿ‌ ಪಡೆಯದೆ ಬಿಲ್‌ ಪಾವತಿಸಿದ್ದು ಒಂದೆಡೆಯಾದರೆ, ಮಾರುಕಟ್ಟೆ ದರಕ್ಕಿಂತ ಹೆಚ್ಚಿಗೆ ಹಣದ ಬಿಲ್‌ ಪಡೆದು ಸಾಮಗ್ರಿಗಳನ್ನು ಪೂರೈಸಿಕೊಂಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ADVERTISEMENT

ಡಿಮ್ಹಾನ್ಸ್ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಜನವರಿ 18ರಂದು ನಡೆದ ನಡಾವಳಿ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ಆಗಿದೆ. ಟೆಂಡರ್‌ಗೆ ಸಂಬಂಧಿಸಿದ ಪ್ರತಿ, ಸಭಾ ನಡವಳಿ ಪ್ರತಿ, ಕಚೇರಿ ಟಿಪ್ಪಣಿ ಮತ್ತು ಪ್ರಮುಖ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಸಂಸ್ಥೆಯ ಆರ್ಥಿಕ ಸಲಹೆಗಾರ ಮತ್ತು ಮುಖ್ಯ ಲೆಕ್ಕಾಧಿಕಾರಿ ಪ್ರದೀಪಕುಮಾರ್ ಅವರು, ಸಂಸ್ಥೆಯ ನಿರ್ದೇಶಕ ಅರುಣಕುಮಾರ್ ಸಿ. ಅವರಿಗೆ ಜನವರಿ 28ರಂದು ಪತ್ರ ಬರೆದಿದ್ದು, ‘ತಮ್ಮ ಗಮನಕ್ಕೆ ತರದೆ, ಕಡತಗಳನ್ನು ಮಂಡಿಸದೆ ಬಿಲ್ ಪಾವತಿಸಲಾಗಿದೆ. ಆರ್ಥಿಕ ಸಮಿತಿ ಅನುಮೋದನೆ ನೀಡಿದ ಮೊತ್ತಕ್ಕಿಂತ ಹೆಚ್ಚು ಹಣ ಪಾವತಿಸಲಾಗಿದೆ. ಕೆಲವು ಸಾಮಗ್ರಿಗಳಿಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದ ಬಿಲ್‌ ಸಲ್ಲಿಸಲಾಗಿದೆ‌. ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಸ್ಪಷ್ಟನೆ ಪಡೆದು, ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದ್ದಾರೆ.

ರಾಷ್ಟ್ರೀಯ ಮಾನಸಿಕ‌ ಆರೋಗ್ಯ ಕಾರ್ಯಕ್ರಮ(NMHP) ಯೋಜನೆಯ ಮಾಸಾಂತ್ಯದ ಲೆಕ್ಕ‌ಪರಿಶೀಲನೆ‌ ಕೈಗೊಂಡಾಗ ಏಳು ಸಾಮಗ್ರಿಗಳ ಖರೀದಿಗೆ ನಿಯಮ ಬಾಹಿರವಾಗಿ ಬಿಲ್‌ ಪಾವತಿಸಿದ್ದು ಕಂಡು ಬಂದಿದೆ. ₹5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಸಾಮಗ್ರಿ ಖರೀದಿಸಬೇಕೆಂದರೆ ಸರ್ಕಾರದ ಜೆಮ್ ಪೋರ್ಟಲ್‌ನಲ್ಲೇ ಟೆಂಡರ್ ಕರೆಯಬೇಕು. ಅದಕ್ಕೂ ಮುನ್ನ  ಕಚೇರಿಯ ಟಿಪ್ಪಣಿಯೊಂದಿಗೆ ವಿಷಯ ನಿರ್ವಾಹಕರ ಮೂಲಕ ಕಚೇರಿ ಅಧೀಕ್ಷಕರು, ಸಹಾಯಕ ಆಡಳಿತಾಧಿಕಾರಿ, ವೈದ್ಯಕೀಯ ಅಧೀಕ್ಷಕರು, ಆರ್ಥಿಕ ಸಲಹೆಗಾರರು, ಮುಖ್ಯ ಆಡಳಿತಾಧಿಕಾರಿಗಳು ಮತ್ತು ನಿರ್ದೇಶಕರಿಗೆ ಕಡತ ಮಂಡಿಸಿ ಅನುಮೋದನೆ‌ ಪಡೆಯಬೇಕು.‌ ಆದರೆ, ಈ ಟೆಂಡರ್ ಪ್ರಕ್ರಿಯೆಯಲ್ಲಿ ಇದ್ಯಾವುದನ್ನೂ ಪಾಲನೆ ಮಾಡಿಲ್ಲ.

ಜೆಮ್‌ ಪೋರ್ಟಲ್‌ನಲ್ಲಿ‌ ಟೆಂಡರ್ ಕರೆದ ನಂತರ ತಾಂತ್ರಿಕ ಬಿಡ್ ಮತ್ತು ಫೈನಾನ್ಶಿಯಲ್ ಬಿಡ್ ತೆರೆಯುವಾಗಲೂ ಕಡತ ಮಂಡಿಸದೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಸಾಮಗ್ರಿಗಳ ಪೂರೈಕೆ‌ಗೆ ಆದೇಶ ನೀಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಬಿಲ್‌ಗಳನ್ನು ಪರಿಶೀಲಿಸಿದ ನಂತರ, ಕಚೇರಿ ಟಿಪ್ಪಣೆಯೊಂದಿಗೆ ಕಡತ ಅನುಮೋದನೆ‌ ಪಡೆದು ನಗದು ಶಾಖೆಗೆ ಕಳುಹಿಸಬೇಕು. ಬಿಲ್ ಪಾವತಿ ಕುರಿತು ಸರ್ಕಾರದ ಖಜಾನೆ ತಂತ್ರಾಂಶ(K2)ದಲ್ಲಿ ರೋಲ್‌ ಮ್ಯಾಪಿಂಗ್ (ಸಂಪೂರ್ಣ ಪರಿಶೀಲನೆ) ಆಗುತ್ತದೆ. ಆದರೆ, ಈ ಟೆಂಡರ್‌ನಲ್ಲಿ ರೋಲ್ ಮ್ಯಾಪಿಂಗ್ ಆಗದೆ, ನೇರವಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯ ಅನುಮೋದನೆ‌ ಪಡೆದು ಹಣ ಪಾವತಿಸಲಾಗಿದೆ.

ಎರಡು ವೈಫೈ ರೂಟರ್ ಬೆಲೆ ಮಾರುಕಟ್ಟೆಯಲ್ಲಿ ಜಿಎಸ್‌ಟಿ‌ ಸೇರಿ ₹8,270 ಇದೆ. ಅವುಗಳಿಗೆ ₹30 ಸಾವಿರ ಬಿಲ್ ಮಾಡಲಾಗಿದೆ. 55 ಇಂಚಿನ 15 ಎಲ್‌ಇಡಿ‌ ಟಿವಿ ಮೊತ್ತ ₹3.97 ಲಕ್ಷವಿದ್ದು, ಅವುಗಳಿಗೆ ₹4.64 ಲಕ್ಷ ಬಿಲ್‌ ಸಲ್ಲಿಸಲಾಗಿದೆ. 25 ಎಸಿ ಸ್ಪ್ಲಿಟ್ ಮಾರುಕಟ್ಟೆ ದರ ₹9.50 ಲಕ್ಷವಿದ್ದು, ಅವುಗಳಿಗೆ ₹17 ಲಕ್ಷ ಬಿಲ್‌ ಸಲ್ಲಿಸಲಾಗಿದೆ. ಈ ಮೂರು ಉಪಕರಣವನ್ನು ಒಂದೇ ಕಂಪನಿ ₹22.85 ಲಕ್ಷಕ್ಕೆ ಪೂರೈಸಿದ್ದು, ಡಿಮ್ಹಾನ್ಸ್ ಇನ್ನೂ ಹಣ ಪಾವತಿಸಿಲ್ಲ.

ಡಿಮ್ಹಾನ್ಸ್‌ ಹಣಕಾಸಿನ ವಿಭಾಗದಲ್ಲಿ ಕೆಲ ಸಿಬ್ಬಂದಿಯ ಕಣ್ತಪ್ಪಿನಿಂದ ಬಿಲ್‌ ಪಾವತಿಯಲ್ಲಿ ಸಮಸ್ಯೆಯಾಗಿದೆ. ಈ ಕುರಿತು ಆಡಳಿತಾಧಿಕಾರಿ ವೈದ್ಯಕೀಯ ಅಧೀಕ್ಷಕರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ
ಡಾ. ಅರುಣಕುಮಾರ್‌ ಸಿ. ನಿರ್ದೇಶಕ ಡಿಮ್ಹಾನ್ಸ್‌ ಧಾರವಾಡ
ಸಿದ್ದಲಿಂಗಯ್ಯ ಹಿರೇಮಠ
ಆಡಳಿತಾತ್ಮಕ ಅನುಮೋದನೆ ಪಡೆಯದೆ ಬಿಲ್‌ ಪಾವತಿಸಿರುವ ಹಾಗೂ ಕೆಲವು ಸಾಮಗ್ರಿಗಳಿಗೆ ಹೆಚ್ಚುವರಿ ದರ ನಿಗದಿ ಪಡಿಸಿರುವ ಕುರಿತು ನಿರ್ದೇಶಕರು ಆಂತರಿಕ ತನಿಖೆಗೆ ಸೂಚಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು
ಸಿದ್ದಲಿಂಗಯ್ಯ ಹಿರೇಮಠ ಆಡಳಿತಾಧಿಕಾರಿ ಡಿಮ್ಹಾನ್ಸ್‌ ಧಾರವಾಡ

ಹೆಚ್ಚುವರಿ ₹18 ಲಕ್ಷ ಪಾವತಿ!

ಆರ್ಥಿಕ‌ ಸಮಿತಿಯ ಸಭೆಯಲ್ಲಿ ನ್ಯೂರೊ‌ ಸೈಕಾಲಜಿ ಟೆಸ್ಟ್ ಬ್ಯಾಟರಿ ಖರೀದಿಗೆ ₹3.50 ಲಕ್ಷಕ್ಕೆ ಒಪ್ಪಿಗೆ ನೀಡಿದ್ದು, ಟೆಂಡರ್‌ನಲ್ಲಿ ₹9.50 ಲಕ್ಷಕ್ಕೆ ಖರೀದಿಸಲಾಗಿದೆ. ಹೆಚ್ಚುವರಿಯಾಗಿ ₹6ಲಕ್ಷ ನೀಡಲಾಗಿದೆ.‌ ಅದೇ ರೀತಿ, ಬಯೋಫೀಡ್‌ಬ್ಯಾಕ್ ಇಕ್ವಿಪ್‌ಮೆಂಟ್‌ ಅನ್ನು ₹4.50 ಲಕ್ಷದ ಬದಲಾಗಿ, ₹7.33 ಲಕ್ಷಕ್ಕೆ‌ ಖರೀದಿಸಿ ಹೆಚ್ಚುವರಿ ₹2.83 ಲಕ್ಷ ಪಾವತಿಸಲಾಗಿದೆ. ಕಾಗ್ನಿಟಿವ್ ಟ್ರೇನಿಂಗ್ ಸಾಫ್ಟ್‌ವೇರ್‌ಗೆ ಒಪ್ಪಿಗೆ ನೀಡಿದ್ದ ₹4 ಲಕ್ಷದ ಬದಲಾಗಿ, ಹೆಚ್ಚುವರಿಯಾಗಿ ₹9ಲಕ್ಷ ನೀಡಿ ಖರೀದಿಸಲಾಗಿದೆ.

ಈಗಾಗಲೇ ಎರಡು ವರ್ಷದಲ್ಲಿ 70 ಹವಾನಿಯಂತ್ರಣ (ಎಸಿ) ಯತ್ರಗಳನ್ನು‌ ಖರೀದಿಸಿ ದಾಸ್ತಾನು ಮಾಡಲಾಗಿದೆ. ಹೀಗಿದ್ದರೂ ಮತ್ತೆ 25 ಎ.ಸಿ ಯಂತ್ರಗಳನ್ನು ಮಾರುಕಟ್ಟೆ ದರಕ್ಕಿಂತ (₹42 ಸಾವಿರ) ಹೆಚ್ಚು ನೀಡಿ, ಅಂದರೆ ₹68 ಸಾವಿರಕ್ಕೆ ಒಂದರಂತೆ (ಒಟ್ಟು ₹17ಲಕ್ಷ) ಖರೀದಿಸಲಾಗಿದೆ. ಈ ವ್ಯವಹಾರದಲ್ಲಿ ರಾಜ್ಯ ಆರ್ಥಿಕ ಸಂಹಿತೆ 1958ರ ಅನುಚ್ಛೇದ 15 ಉಲ್ಲಂಘನೆಯಾಗಿದೆ ಎಂದು ಮುಖ್ಯ ಲೆಕ್ಕಾಧಿಕಾರಿ ಪ್ರದೀಪಕುಮಾರ್ ಅವರು ನಿರ್ದೇಶಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.