ADVERTISEMENT

ಧಾರವಾಡ| ಕಾಮಣ್ಣನ ಹರಕೆ ತಿರಿಸಿದ ಭಕ್ತಜನ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 11:00 IST
Last Updated 7 ಮಾರ್ಚ್ 2023, 11:00 IST
ಧಾರವಾಡ ತಾಲ್ಲೂಕಿನ ಮುಳಮುತ್ತಲ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿರುವ ಕಾಮದೇವರ ಬೃಹತ್ ಮಂಟಪ
ಧಾರವಾಡ ತಾಲ್ಲೂಕಿನ ಮುಳಮುತ್ತಲ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿರುವ ಕಾಮದೇವರ ಬೃಹತ್ ಮಂಟಪ   

ಧಾರವಾಡ: ತಾಲ್ಲೂಕಿನ ಮುಳಮುತ್ತಲದಲ್ಲಿ ಕಾಮದೇವರ ಹಬ್ಬಕ್ಕೆ ಚಾಲನೆ ದೊರೆತಿದ್ದು, ಸಾಕಷ್ಟು ಸಂಖ್ಯೆಯ ಭಕ್ತರು ಗ್ರಾಮದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

ಹುಬ್ಬಾ ನಕ್ಷತ್ರದಂದು ವಿಶೇಷವಾಗಿ ಆಚರಿಸಲಾಗುವ ಇಲ್ಲಿನ ಕಾಮದೇವರ ಉತ್ಸವಕ್ಕೆ ರಾಜ್ಯದ ವಿವಿಧ ಪ್ರದೇಶಗಳಿಂದ ಭಕ್ತರು ಭೇಟಿ ನೀಡಿ ಭಕ್ತಿಭಾವದಿಂದ ಪೂಜೆ ಮತ್ತು ಹರಕೆ ಸಲ್ಲಿಸಿದರು. ಬೆಳಿಗ್ಗೆಯಿಂದಲೇ ಭಕ್ತರು ಬೈಕ್, ಬಸ್, ಚಕ್ಕಡಿ ಹೀಗೆ ವಿವಿಧ ವಾಹನಗಳಲ್ಲಿ ಬಂದು ಕಾಮದೇವನ ದರ್ಶನ ಪಡೆದರು. ಉತ್ಸವದ ಹಿನ್ನೆಲೆಯಲ್ಲಿ ವಿಶೇಷ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಇಷ್ಟಾರ್ಥ ಸಿದ್ಧಿಯಾಗಿದ್ದರಿಂದ ಕೆಲ ಭಕ್ತರು ಬೆಳಿಗ್ಗೆಯೇ ದೀಡ ನಮಸ್ಕಾರ ಹಾಕಿ ಕಾಮದೇವನಿಗೆ ಪೂಜೆ ಸಲ್ಲಿಸಿದರು. ಹೀಗೆ ಉತ್ಸದಲ್ಲಿ ಎತ್ತುಗಳ ಮೆರವಣಿಗೆ ಹಾಗೂ ಭಜನಾ ಸೇವೆ ನಡೆಯಿತು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಭಕ್ತ ಸಮೂಹ ಉತ್ಸವಕ್ಕೆ ಬಂದು ಕಾಮದೇವನ ದರ್ಶನ ಪಡೆದರು. ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿರುವುದರಿಂದ ಗ್ರಾಮದಲ್ಲಿ ಉತ್ಸವ ಕಳೆ ಕಟ್ಟಿತ್ತು. ಜಾತಿ, ಧರ್ಮ, ಅಂತಸ್ತಿನ ಬೇಧವಿಲ್ಲದೆ ಪ್ರತಿಯೊಬ್ಬರೂ ಪಾಲ್ಗೊಂಡು ಇಲ್ಲಿ ಸೇವೆ ಸಲ್ಲಿಸಿದ್ದು ವಿಶೇಷವಾಗಿತ್ತು.

ADVERTISEMENT

ಗ್ರಾಮದ ಮುಂಭಾಗದಲ್ಲಿ 12 ಅಡಿ ಎತ್ತರದ ಮಂಟಪ ನಿರ್ಮಿಸಿ, ಸುತ್ತಲೂ ಕಬ್ಬಿಣದ ಗೋಪುರದ ಮೇಲೆ ಕಾಮದೇವರ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಆಲಂಕಾರಿಕ ದೀಪಗಳಿಂದ ಮಂಟಪವನ್ನು ಸಿಂಗರಿಸಲಾಗಿತ್ತು.

ಗ್ರಾಮದ ಅಕ್ಕಪಕ್ಕದಲ್ಲಿರುವ ಹೊಲಗಳನ್ನು ಸ್ವಚ್ಛಗೊಳಿಸಿ, ಬರುವ ಭಕ್ತರ ವಾಹನಕ್ಕೆ ಸ್ಥಳಾವಕಾಶ ಕಲ್ಪಿಸಲಾಗಿತ್ತು. ಬೆಳಿಗ್ಗೆಯಿಂದಲೇ ಅನ್ನ ಪ್ರಸಾದ ನಡೆಯಿತು. ಸಹಸ್ರಾರು ಜನ ಉತ್ಸವದಲ್ಲಿ ಭಾಗವಹಿಸಿದ್ದರಿಂದ ಗದ್ದಲವು ಉಂಟಾಯಿತು. ಉತ್ಸವದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಮತ್ತು ಗದ್ದಲ ನಡೆಯದಂತೆ ನಿಗಾವಹಿಸಲು ಗರಗ ಠಾಣೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ನಗರದ ಮಂಗಳವಾರಪೇಟೆಯ ಭೂಸಗಲ್ಲಿಯ ಪ್ರಸಿದ್ಧ ಕಾಮಣ್ಣ ರತಿ ಮೂರ್ತಿ ಪ್ರತಿಷ್ಠಾಪನೆಗೊಂಡಿದ್ದು, ದರ್ಶನಕ್ಕೆ ಭಕ್ತರು ತಂಡೋಪತಂಡರಾಗಿ ಬರುತ್ತಿದ್ದಾರೆ. ಓಣಿಯ ಹುಡುಗರು ಹಲಗೆ ಬಾರಿಸುವ ಮೂಲಕ ಹಬ್ಬದ ಸಡಗರದಲ್ಲಿದ್ದರೆ, ಹಿರಿಯರು ಕಾಮಣ್ಣನ ಆರಾಧನೆ ಮೂಲಕ ಭಕ್ತಿಭಾವದಿಂದ ಪೂಜೆ ಸಲ್ಲಿಸುತ್ತಿದ್ದುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.