ADVERTISEMENT

ಡಿಕೆಶಿ ಆರೋಪದಲ್ಲಿ ಹುರುಳಿಲ್ಲ: ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 23 ಜೂನ್ 2020, 15:33 IST
Last Updated 23 ಜೂನ್ 2020, 15:33 IST

ಹುಬ್ಬಳ್ಳಿ: ‘ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಹಾಗಾಗಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ವಿರುದ್ಧ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ’ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರವಿರುವ ಕಾರಣಕ್ಕೆ ಕೊರೊನಾ ನಿಯಂತ್ರಣದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯವನ್ನು ಹೊಗಳಿಲ್ಲ. ಸರ್ಕಾರ ನಿಯಂತ್ರಣಕ್ಕೆ ಶ್ರಮಿಸುತ್ತಿರುವುದರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದರು.

‘ವಿರೋಧಿಸಬೇಕು ಎಂಬ ಉದ್ದೇಶದಿಂದ ಶಿವಕುಮಾರ್ ಸರ್ಕಾರದ ಕ್ರಮಗಳನ್ನು ಟೀಕಿಸುತ್ತಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ’ ಎಂದು ತಿರುಗೇಟು ನೀಡಿದ ಅವರು, ‘ಕಾಂಗ್ರೆಸ್ ಪಕ್ಷವು ನಾಯಕರಿಂದ ತುಂಬಿ ಹೋಗಿದೆ. ಅಲ್ಲಿ ಕಾರ್ಯಕರ್ತರೇ ಇಲ್ಲ. ಹೀಗಿರುವಾಗ ಹೇಗೆ ಪಕ್ಷ ಕಟ್ಟುತ್ತಾರೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಮುಂದೆ ಮುಖ್ಯಮಂತ್ರಿಯಾಗುತ್ತೇನೆ’ ಎಂಬ ಶಾಸಕ ಉಮೇಶ್ ಕತ್ತಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅದು ಅವರ ವೈಯಕ್ತಿಕ ಹೇಳಿಕೆ. ರಾಜ್ಯಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದವರಿಗೆ ಅವಕಾಶ ಕೊಟ್ಟಿದ್ದಾರೆ. ಅಲ್ಲದೆ, ವಿಧಾನ ಪರಿಷತ್‌ಗೆ ಈ ಭಾಗದವರನ್ನು ನಾಮ ನಿರ್ದೇಶನ ಮಾಡಲು ಒತ್ತಾಯಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.