ADVERTISEMENT

ಹುಬ್ಬಳ್ಳಿ | ಮುಷ್ಕರ ಕೈಬಿಟ್ಟ ಕಿಮ್ಸ್‌ ಕಿರಿಯ ವೈದ್ಯರು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2024, 16:19 IST
Last Updated 22 ಆಗಸ್ಟ್ 2024, 16:19 IST

ಹುಬ್ಬಳ್ಳಿ: ಸರ್ಕಾರ ಸ್ಥಾನಿಕ ವೈದ್ಯರ ಶಿಷ್ಯವೇತನ ಹೆಚ್ಚಿಸುವ ಭರವಸೆ ನೀಡಿದ್ದರಿಂದ ಕರ್ನಾಟಕ ಸ್ಥಾನಿಕ ವೈದ್ಯರ ಸಂಘದ (ಕೆಆರ್‌ಡಿ) ನೇತೃತ್ವದಲ್ಲಿ ಕಿಮ್ಸ್‌ನಲ್ಲಿ ಕಿರಿಯ ವೈದ್ಯರು ಕಳೆದ 10 ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಗುರುವಾರ ಕೈಬಿಟ್ಟರು.

ತುರ್ತು ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ ಹೊರ ರೋಗಿಗಳ ವಿಭಾಗ ಸೇರಿದಂತೆ ಎಲ್ಲ ವಿಭಾಗಗಳ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. 500ಕ್ಕೂ ಹೆಚ್ಚು ಕಿರಿಯ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

ಕಿಮ್ಸ್‌ ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಡಾ.ಸುಹಾಸ ಎಸ್‌.ಟಿ ಮಾತನಾಡಿ, ಸ್ಥಾನಿಕ ವೈದ್ಯರ ಶಿಷ್ಯವೇತನವನ್ನು ಶೇ 25ರಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿರುವುದು ಸ್ವಾಗತಾರ್ಹ. ಇನ್ನು ಮುಂದೆ ಇಂತಹ ಮುಷ್ಕರಕ್ಕೆ ಆಸ್ಪದ ಕೊಡದಂತೆ ಕಾಲಕಾಲಕ್ಕೆ ಶಿಷ್ಯವೇತನ ಹೆಚ್ಚಳ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ಕೆಲಸ ಸ್ಥಳದಲ್ಲಿ ವೈದ್ಯರಿಗೆ ರಕ್ಷಣೆಗೆ ಒದಗಿಸಬೇಕು. ಬೇರೆ ರಾಜ್ಯಗಳ ವೈದ್ಯಕೀಯ ಕೋರ್ಸ್‌ಗಳಿಗೆ ಹೋಲಿಸಿದರೆ ಇಲ್ಲಿ ಹೆಚ್ಚು ಶುಲ್ಕ ಇದ್ದು, ಅದನ್ನು ಕಡಿಮೆ ಮಾಡಬೇಕು. ಈ ಬೇಡಿಕೆಗಳ ಈಡೇರಿಕೆ ಕುರಿತು ಮೌಖಿಕವಾಗಿ ಭರವಸೆ ನೀಡಲಾಗಿದೆ. ಕೂಡಲೇ ಇವುಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.