ADVERTISEMENT

ಹುಬ್ಬಳ್ಳಿ: ನಿತ್ಯ ಬದುಕಿನ ಚಿತ್ರ ಕಥನ ‘ಡೋಕ್ರ’

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 21:45 IST
Last Updated 16 ಜನವರಿ 2023, 21:45 IST
ಡೋಕ್ರ ಕಲಾಕೃತಿಗಳು
ಡೋಕ್ರ ಕಲಾಕೃತಿಗಳು   

ಹುಬ್ಬಳ್ಳಿ: ಪಶ್ಚಿಮ ಬಂಗಾಳದ ಕಲಾ ಪ್ರಕಾರ ‘ಡೋಕ್ರ’, ಜನರ ನಿತ್ಯ ಬದುಕಿನ ಚಿತ್ರಣವನ್ನು ಹಿತ್ತಾಳೆಯ ಕಲಾಕೃತಿಗಳಲ್ಲಿ ಅಚ್ಚಾಗಿಸುತ್ತದೆ. ತಮ್ಮ ಗ್ರಾಮದ ಡೋಕ್ರ ಬುಡಕಟ್ಟು ಜನಾಂಗದ ಕಲಾಕೃತಿಗಳನ್ನು ಪ್ರದರ್ಶಿಸಲು ಬಂದಿದ್ದ ಅಲ್ಲಿನ ತಪಸ್, ಅವುಗಳ ತಯಾರಿಯ ಕುರಿತು ವಿವರಿಸಿದರು.

‘ಡೋಕ್ರ ಕಲೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮೊಹೆಂಜೋದಾರೊ ಕಾಲಘಟ್ಟದಲ್ಲಿಯೇ ಇಂತಹ ಕಲಾಕೃತಿಗಳನ್ನು ತಯಾರಿಸಲಾಗುತ್ತಿತ್ತು. ಜನ ತಮ್ಮ ಬದುಕಿನ ಚಿತ್ರಗಳನ್ನು, ಆಗುಹೋಗುಗಳನ್ನು ಈ ರೀತಿ ದಾಖಲಿಸುತ್ತಿದ್ದರು. ಇದು ಪಾರಂಪರಿಕ ಕಲೆಯಾಗಿ ಮುಂದುವರಿದುಕೊಂಡು ಬಂದಿದೆ’ ಎಂದು ಮಾಹಿತಿ ನೀಡಿದರು.

‘ಜೇಡಿ ಮಣ್ಣಿನಲ್ಲಿ ಆಕೃತಿಗಳ ಅಚ್ಚು ತಯಾರಿಸಿ ಅದರೊಳಗೆ 120 ಡಿಗ್ರಿ ತಾಪದ ಹಿತ್ತಾಳೆಯ ದ್ರವ ಸುರಿಯಲಾಗುತ್ತದೆ. ಹಲವು ತಾಸು ಹಾಗೆಯೇ ಇಟ್ಟು, ನಂತರ ಅದನ್ನು ಹೊರ ತೆಗೆಯಲಾಗುತ್ತದೆ. ಕಲಾಕೃತಿ ತಯಾರಿಗೆ ಕನಿಷ್ಠ ಎರಡು ದಿನ ಬೇಕಾಗುತ್ತದೆ’ ಎನ್ನುತ್ತಾರೆ ಅವರು.

ADVERTISEMENT

ಬುಟ್ಟಿಯಲ್ಲಿ ಮೀನು ಹೊತ್ತು ಮಾರುವ ಮಹಿಳೆ, ಬುಟ್ಟಿ ಹೊತ್ತು ಕೆಲಸಕ್ಕೆ ಹೊರಟ ಮಹಿಳೆ, ಮಂಚದ ಮೇಲೆ ಕುಳಿತು ಕನ್ನಡಿ ನೋಡುತ್ತಾ ಕೂದಲು ಬಾಚುವ ಹುಡುಗಿ, ಪುಸ್ತಕ ಓದುವ ಹುಡುಗಿ, ನೃತ್ಯ ಮಾಡುತ್ತಿರುವ ಪ್ರೇಮಿಗಳು, ಜಾನಪದ ನೃತ್ಯದಲ್ಲಿ ತೊಡಗಿಸಿಕೊಂಡ ಬುಡಕಟ್ಟು ಸಮುದಾಯದ ತಂಡ... ಹೀಗೆ ಜನ ಬದುಕಿನ ಆಗುಹೋಗುಗಳು ಕಲಾಕೃತಿಯಲ್ಲಿ ಮೂಡಿವೆ. ₹300ರಿಂದ ಆರಂಭವಾಗುವ ಡೋಕ್ರ ಕಲಾಕೃತಿಗಳ ದರ, ಗರಿಷ್ಠ ₹3,000ಕ್ಕಿಂತ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.