ADVERTISEMENT

ಲಿಂಗಾಯತರಲ್ಲಿ ಒಡಕು ಮೂಡಿಸಿದರೆ ತಕ್ಕ ಪಾಠ: ಮೈತ್ರಿ ಪಕ್ಷ ಬೆಂಬಲಿಗರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 9:16 IST
Last Updated 21 ಏಪ್ರಿಲ್ 2019, 9:16 IST
ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹುಬ್ಬಳ್ಳಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು–
ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹುಬ್ಬಳ್ಳಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು–   

ಹುಬ್ಬಳ್ಳಿ: ‘ವಿಜಯ ಸಂಕೇಶ್ವರ ಅವರ ನಂತರ ಲಿಂಗಾಯತರು ಧಾರವಾಡ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿಲ್ಲ. ಆದ್ದರಿಂದ, ಈ ಬಾರಿ ವಿನಯ ಕುಲಕರ್ಣಿ ಅವರನ್ನು ಬೆಂಬಲಿಸಲು ಲಿಂಗಾಯತರು ನಿರ್ಧರಿಸಿದ್ದಾರೆ. ಲಿಂಗಾಯತರ ಮತಗಳಿಂದಲೇ ಗೆದ್ದಿರುವ ಬಿಜೆಪಿಯವರು ಈಗ ಸಮಾಜದಲ್ಲಿ ಒಡಕು ಮೂಡಿಸಲು ಯತ್ನಿಸಿದರೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಕಾಂಗ್ರೆಸ್– ಜೆಡಿಎಸ್ ಮೈತ್ರಿ ಅಭ್ಯರ್ಥಿ ಪರವಾಗಿರುವ ಲಿಂಗಾಯತ ಮುಖಂಡರು ಎಚ್ಚರಿಕೆ ನೀಡಿದರು.

ಭಾನುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ವೀರಣ್ಣ ಮತ್ತೀಕಟ್ಟಿ, ಬಂಗಾರೇಶ್ ಹಿರೇಮಠ, ಪಿ.ಸಿ. ಸಿದ್ದನಗೌಡ, ನಾಗರಾಜ ಛಬ್ಬಿ, ಗುರುರಾಜ ಹುಣಸೀಮರದ, ಬಾಪುಗೌಡ ಪಾಟೀಲ, ಕಾಡಯ್ಯ ಹಿರೇಮಠ ಅವರು, ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿರುವ ಲಿಂಗಾಯತ ಸಮಾಜದ ಶಾಸಕರನ್ನು ಒಟ್ಟು ಸೇರಿಸಿ ಪತ್ರಿಕಾಗೋಷ್ಠಿ ನಡೆಸಿ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಜಾತಿ ರಾಜಕಾರಣ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು.

ಬಸವರಾಜ ಹೊರಟ್ಟಿ ಮಾತನಾಡಿ, ‘ರಂಭಾಪುರಿ ಸ್ವಾಮೀಜಿ ಅವರನ್ನು ನಿಂದಿಸಿದವರೇ ಈಗ ಅವರ ಕಾಲು ಹಿಡಿದಿದ್ದಾರೆ ಎಂದು ಜಗದೀಶ ಶೆಟ್ಟರ್ ರಾಜಕೀಯ ಪ್ರೇರಿತ ಹೇಳಿಕೆಯನ್ನು ನೀಡಿದ್ದಾರೆ. ಯಾವ ಸ್ವಾಮೀಜಿಯನ್ನೂ ನಿಂದಿಸಿಲ್ಲ. ಇಲ್ಲಿ ಜಾತಿ ವಿಷಯ ತರುವ ಅಗತ್ಯ ಇರಲಿಲ್ಲ. ರಾಜಕೀಯ ಬೇರೆ ಧರ್ಮದ ವಿಷಯವೇ ಬೇರೆ’ ಎಂದರು.

ADVERTISEMENT

‘ಬಿಜೆಪಿಯವರು ಅರವಿಂದ ಬೆಲ್ಲದ ಅವರಿಗೆ ಹವಾ ಹಾಕಿ ನೀನೇ ಮುಂದಿನ ಸಿ.ಎಂ. ಎಂದು ಹೇಳಿರಬೇಕು. ಅದಕ್ಕೆ ಅವರು ಈ ರೀತಿ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಜೋಶಿ ಆರಿಸಿ ಬಂದರೆ ಲಿಂಗಾಯತರಿಗೆ ಕಂಟಕ ಎಂದು ವಿನಯ ಕುಲಕರ್ಣಿ ಅವರು ಹೇಳಿರುವುದು ಜಾತಿ ರಾಜಕಾರಣ ಅಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದರು.

‘ಗ್ರಾಮೀಣ ಭಾಗದಲ್ಲಿ ಲಿಂಗಾಯತರು, ಹಿಂದುಳಿದವರು, ದಲಿತರು ಹಾಗೂ ಅಲ್ಪಸಂಖ್ಯಾತರು ನಮ್ಮ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದಾರೆ. ಅದೇ ಕಾರಣಕ್ಕೆ ಬಿಜೆಪಿಯವರು ಸಮಾಜದ ಜನಪ್ರತಿನಿಧಿಗಳನ್ನು ಸೇರಿಸಿ ಪತ್ರಿಕಾಗೋಷ್ಠಿ ಮಾಡಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ವೀರಣ್ಣ ಮತ್ತೀಕಟ್ಟಿ ಹೇಳಿದರು.

‘ಲಿಂಗಾಯತ ಸಮಾಜದ 9 ಮಂದಿ ಸಂಸದರಾಗಿ ಆಯ್ಕೆಯಾಗಿದ್ದಾರೆ, ಆದರೆ ಒಬ್ಬರನ್ನು ಸಹ ಬಿಜೆಪಿ ಕೇಂದ್ರ ಸಚಿವರನ್ನಾಗಿ ಮಾಡಿಲ್ಲ. ಸಿದ್ದೇಶ್ವರ ಅವರಿಗೆ ಸಚಿವರನ್ನಾಗಿ ಮಾಡಿ ನಂತರ ಕಿತ್ತುಕೊಂಡರು’ ಎಂದರು.

‘ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರ ರೈತರು ಒದೆ ತಿಂದರೂ ಇಲ್ಲಿನ ಸಮಸ್ಯೆಯನ್ನು ಪ್ರಧಾನಿ ಅವರೊಂದಿಗೆ ಚರ್ಚಿಸುವ ಕೆಲಸವನ್ನು ಸಂಸದರು ಮಾಡಲಿಲ್ಲ. ಹುಬ್ಬಳ್ಳಿ– ಧಾರವಾಡ ಸಮಸ್ಯೆಗಳ ಬಗ್ಗೆಯೂ ಮಾತನಾಡಿಲ್ಲ. ಈಗ ಮುಖಂಡರು ಅವರವರ ತಿಂಡಿಗಾಗಿ ಜಾತಿ ಬಗ್ಗೆ ಮಾತನಾಡುತ್ತಾರೆ. ಲಿಂಗಾಯತ ಮತದಿಂದಲೇ ಗೆದ್ದು ಬಂದಿರುವವವರು ಈ ರೀತಿ ಮಾತು ಮುಂದುವರೆಸಿದರೆ, ಜನರು ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಪಿ.ಸಿ. ಸಿದ್ದನಗೌಡ ಹೇಳಿದರು.

ನಮ್ಮ ಸಮಾಜದವರೇ ಸಂಸದರಾಗಬೇಕು ಎಂದು ಲಿಂಗಾಯತ ಸಮಾಜ ಎದ್ದು ಕೂತಿದೆ. ಈ ಚುನಾವಣೆಯಲ್ಲಿ ವಿನಯ ಕುಲಕರ್ಣಿ ಅವರ ಪರವಾಗಿ ಮತ ಚಲಾಯಿಸಲಿದ್ದಾರೆ ಎಂದು ಗುರುರಾಜ ಹುಣಸೀಮರದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.