ADVERTISEMENT

ಹುಬ್ಬಳ್ಳಿ | ಮಾದಕ ವಸ್ತು ಬಳಕೆ; 399 ಮಂದಿ ವಶ

ವೈದ್ಯಕೀಯ ಪರೀಕ್ಷೆ; ಪಾಲಕರ ಸಮ್ಮುಖದಲ್ಲಿ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 15:38 IST
Last Updated 28 ಜುಲೈ 2024, 15:38 IST
ಡ್ರಗ್ಸ್‌ (ಸಾಂದರ್ಭಿಕ ಚಿತ್ರ)
ಡ್ರಗ್ಸ್‌ (ಸಾಂದರ್ಭಿಕ ಚಿತ್ರ)   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡವನ್ನು ಮಾದಕ ವಸ್ತು ಮುಕ್ತ ನಗರವನ್ನಾಗಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಮಹಾನಗರ ಪೊಲೀಸರು, ಭಾನುವಾರ ಮಾದಕ ವಸ್ತು ಬಳಸುವ ಸಂಶಯಾಸ್ಪದ 399 ಮಂದಿಯನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಇಷ್ಟು ದೊಡ್ಡ ಸಾಮೂಹಿಕ ವೈದ್ಯಕೀಯ ಪರೀಕ್ಷೆ ಹು–ಧಾ ಮಹಾನಗರ ಪೊಲೀಸ್ ಘಟಕದ ಇತಿಹಾಸದಲ್ಲಿಯೇ ಪ್ರಥಮ.

ಮಾದಕ ವಸ್ತುಗಳ ಸೇವನೆ ಮಾಡಿರುವ ಅನುಮಾನಾಸ್ಪದ ವ್ಯಕ್ತಿಯನ್ನು ಧಾರವಾಡ ಜಿಲ್ಲಾಸ್ಪತ್ರೆ, ಡಿಮಾನ್ಸ್‌ ಮತ್ತು ಕಿಮ್ಸ್‌ ಆಸ್ಪತ್ರೆಗೆ ಕರೆದೊಯ್ದು, ರಕ್ತ ಮತ್ತು ಪರೀಕ್ಷಿ ಮಾಡಲಾಯಿತು. 254 ಮಂದಿ ಮಾದಕ ವಸ್ತುಗಳನ್ನು ಬಳಸಿರುವ ವರದಿಯಾಗಿದ್ದು, ಅವರಲ್ಲಿ 59 ಮಂದಿ ವಿರುದ್ಧ ಮಾದಕ ವಸ್ತು ಬಳಕೆ ನಿಷಿದ್ಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಂತರ ಮಾದಕ ವ್ಯಸನಿಗಳಿಗೆ ಆರ್‌.ಎನ್‌. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಪಾಲಕರ ಸಮ್ಮುಖದಲ್ಲಿ ಆಪ್ತಸಮಾಲೋಚನೆ ನಡೆಸಿ, ಅವುಗಳ ಸೇವನೆಯ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.

ವಾರದ ಹಿಂದೆ ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟ ಮಾಡುವವರ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಎಚ್ಚರಿಕೆ ನೀಡಿದ್ದರು. ಅವರಿಂದ ಬಳಕೆದಾರರ ಮಾಹಿತಿ ಆಧರಿಸಿ, ಕಾರ್ಯಾಚರಣೆಗೆ ಯೋಜನೆ ರೂಪಿಸಿದ್ದರು. ಅದರನ್ವಯ ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಿಗ್ಗೆ ವಿಶೇಷ ಕಾರ್ಯಾಚರಣೆ ನಡೆಸಿ, ಪ್ರತಿ ಪೊಲೀಸ್‌ ಠಾಣೆ ವ್ಯಾಪ್ತಿಯಿಂದ 20ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದರು. ವೈದ್ಯಕೀಯ ಪರೀಕ್ಷೆಯಲ್ಲಿ ಮಾದಕ ವಸ್ತು ಸೇವನೆ ದೃಢಪಟ್ಟ ಬಳಿಕ ಪ್ರಕರಣ ದಾಖಲಿಸಿಕೊಂಡರು.

ADVERTISEMENT

ಮಾದಕವಸ್ತು ಬಳಕೆದಾರರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಏಕಾಏಕಿ ಕಿಮ್ಸ್‌ಗೆ ಕರೆದುಕೊಂಡು ಬಂದ ಸಂದರ್ಭದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಭಾನುವಾರ ರಜಾ ದಿನ ಇರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ.  15–20 ಮಂದಿ ಹತ್ತಾರು ತಂಡಗಳನ್ನು ಏಕಾಏಕಿ ಪರೀಕ್ಷೆಗೆ ಒಳಪಡಿಸಲು ಬಂದಾಗ ಆಸ್ಪತ್ರೆ ಸಿಬ್ಬಂದಿ ಜೊತೆ ಪೊಲೀಸರು ಸಹ ಹೈರಾಣಾದರು. ಬಳಿಕ ಎಚ್ಚೆತ್ತ ಆಸ್ಪತ್ರೆ ವೈದ್ಯಾಧಿಕಾರಿಗಳು ಹೆಚ್ಚಿನ ಸಿಬ್ಬಂದಿ ನಿಯೋಜಿಸಿ, ಪರೀಕ್ಷಾ ಕಾರ್ಯ ಮುಂದುವರಿಸಿದರು. ಕಿಮ್ಸ್‌ ಪ್ರಯೋಗಾಲಯದ ಎದುರು ನೂರಾರು ಮಂದಿಯನ್ನು ಸಾಲಾಗಿ ಕುಳ್ಳಿರಿಸಿ, ಸಂಜೆವರೆಗೂ ಪರೀಕ್ಷೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.