ADVERTISEMENT

ಜಿಎಂ ಕಂಪನಿಯ ನಕಲಿ ಉತ್ಪನ್ನ ಮಾರಾಟ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 2:25 IST
Last Updated 12 ಏಪ್ರಿಲ್ 2022, 2:25 IST

ಹುಬ್ಬಳ್ಳಿ: ಜಿಎಂ ಬ್ರಾಂಡ್‌ ಹೆಸರಲ್ಲಿ ನಕಲಿ ವಿದ್ಯುತ್‌ ಉಪಕರಣಗಳನ್ನು ಮಾರಾಟ ಮಾಡುತ್ತಿದ್ದ ನಗರದ ಮೂರು ಎಲೆಕ್ಟ್ರಿಕಲ್‌ ಅಂಗಡಿ ಮಾಲೀಕರ ವಿರುದ್ಧ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಟರ್‌ ಮಾರುಕಟ್ಟೆಯ ವಿನಾಯಕ ಎಲೆಕ್ಟ್ರಿಕಲ್‌, ಪಂಕಜ್‌ ಎಲೆಕ್ಟ್ರಿಕಲ್‌ ಮತ್ತು ಪದ್ಮಾವತಿ ಎಲೆಕ್ಟ್ರಿಕಲ್‌ ಅಂಗಡಿ ಮಾಲೀಕರ ವಿರುದ್ಧ ದೆಹಲಿಯ ಜಿ.ಎಂ. ಕಂಪನಿಯ ಅಮನ್‌ಪ್ರೀತ್‌ ಸಿಂಗ್‌ ದೂರು ನೀಡಿದ್ದಾರೆ.

ಮಾರ್ಚ್‌ ತಿಂಗಳಲ್ಲಿ ಜಿಎಂ ಕಂಪನಿ ಸಿಬ್ಬಂದಿ ಗ್ರಾಹಕರ ಹೆಸರಲ್ಲಿ, ಈ ಮೂರು ಅಂಗಡಿಗಳಿಂದ ಜಿಎಂ ಕಂಪನಿಯ ಎಲೆಕ್ಟ್ರಿಕಲ್‌ ಉಪಕರಣಗಳನ್ನು ಖರೀದಿಸಿದ್ದರು. ನಂತರ ಅವುಗಳನ್ನು ಕಂಪನಿಗೆ ಕಳುಹಿಸಿ ಪರಿಶೀಲಿಸಲು ತಿಳಿಸಿದ್ದರು. ಪರಿಶೀಲನೆಯಲ್ಲಿ ಅದು ನಕಲಿ ಎಂದು ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

ಕಳವು: ಕುಸಗಲ್‌ ರಸ್ತೆಯ ಅಕ್ಷಯ್‌ ಎನ್‌ಕ್ಲೇವ್‌ ಅಪಾರ್ಟಮೆಂಟ್‌ನ ನೆಲಮಹಡಿಯಲ್ಲಿದ್ದ ಜೈನ್‌ ಮೆಡಿಕಲ್ಸ್‌ ಅಂಗಡಿಯ ಬಾಗಿಲು ಮುರಿದು, ₹25ಸಾವಿರ ನಗದು ಹಾಗೂ ಸಿಸಿಸಿವಿಯ ಡಿವಿಆರ್‌ ಉಪಕರಣ ಕಳವು ಮಾಡಲಾಗಿದೆ. ಅಂಗಡಿಯ ಮಾಲೀಕ ಅಲೋಕ್‌ಕುಮಾರ ಜೈನ್‌ ಕೇಶ್ವಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅದೇ ರೀತಿ, ಹೊಸೂರಿನ ಆಕಾಶ್‌ ಮೆಡಿಕಲ್ ಮತ್ತು ಜನರಲ್‌ ಸ್ಟೋರ್ಸ್‌ ಅಂಗಡಿಯ ಬಾಗಿಲು ಮುರಿದು ನಗದು ಹಾಗೂ ಔಷಧಿಗಳನ್ನು ಕಳವು ಮಾಡಲಾಗಿದೆ. ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.