ADVERTISEMENT

ದೂಳು: ಕಾಂಗ್ರೆಸ್‌ನಿಂದ ಮಾಸ್ಕ್ ವಿತರಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 15:22 IST
Last Updated 7 ನವೆಂಬರ್ 2019, 15:22 IST
ಅವಳಿನಗರವನ್ನು ದೂಳು ಮುಕ್ತ ಹಾಗೂ ಸ್ವಚ್ಛ ಪರಿಸರ ನಗರವನ್ನಾಗಿಸಬೇಕು ಎಂದು ಆಗ್ರಹಿಸಿ, ಕಾಂಗ್ರೆಸ್ ಮುಖಂಡರು ಗುರುವಾರ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ವಿದ್ಯಾರ್ಥಿಗಳಿಗೆ ಮಾಸ್ಕ್ (ಮುಖಗವುಸು) ವಿತರಿಸಿದರು. ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮುಖಂಡರಾದ ಶಾಕೀರ್ ಸನದಿ, ರಾಜಶೇಖರ ಮೆಣಸಿನಕಾಯಿ, ನವೀದ್ ಮುಲ್ಲಾ ಇದ್ದಾರೆ
ಅವಳಿನಗರವನ್ನು ದೂಳು ಮುಕ್ತ ಹಾಗೂ ಸ್ವಚ್ಛ ಪರಿಸರ ನಗರವನ್ನಾಗಿಸಬೇಕು ಎಂದು ಆಗ್ರಹಿಸಿ, ಕಾಂಗ್ರೆಸ್ ಮುಖಂಡರು ಗುರುವಾರ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ವಿದ್ಯಾರ್ಥಿಗಳಿಗೆ ಮಾಸ್ಕ್ (ಮುಖಗವುಸು) ವಿತರಿಸಿದರು. ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮುಖಂಡರಾದ ಶಾಕೀರ್ ಸನದಿ, ರಾಜಶೇಖರ ಮೆಣಸಿನಕಾಯಿ, ನವೀದ್ ಮುಲ್ಲಾ ಇದ್ದಾರೆ   

ಹುಬ್ಬಳ್ಳಿ: ಹದಗೆಟ್ಟ ರಸ್ತೆಗಳಿಂದಾಗಿ ಅವಳಿನಗರವನ್ನು ದೂಳು ಮುಕ್ತಗೊಳಿಸಿ ಸ್ವಚ್ಛ ನಗರವನ್ನಾಗಿಸಬೇಕು ಎಂದು ಆಗ್ರಹಿಸಿ, ಕಾಂಗ್ರೆಸ್ ಮುಖಂಡರು ಗುರುವಾರ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ರಸ್ತೆ ಬದಿ ವ್ಯಾಪಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ಮಾಸ್ಕ್ (ಮುಖಗವುಸು) ವಿತರಿಸುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಶಾಕೀರ್ ಸನದಿ, ‘ರಸ್ತೆಗಳ ದುರಸ್ತಿಗೆ ಒತ್ತಾಯಿಸಿ ಎರಡು ತಿಂಗಳ ಹಿಂದೆ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿದ್ದೆವು. ಆ ಕುರಿತು ಭರವಸೆ ನೀಡಿದ್ದ ಆಯುಕ್ತರು, ಇದುವರೆಗೆ ರಸ್ತೆ ನಿರ್ಮಾಣ ಹಾಗೂ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ‘ ಎಂದು ಬೇಸರ ವ್ಯಕ್ತಪಡಿಸಿದರು.

‘ವಿಪರೀತ ದೂಳು ಸೂಸುವ ರಸ್ತೆಗಳಿಂದಾಗಿ ನಗರದ ಜನರಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಗುಂಡಿಮಯ ರಸ್ತೆಗಳು ವಾಹನಗಳ ಸಂಚಾರವನ್ನು ದುಸ್ತರಗೊಳಿಸಿವೆ. ಪಾದಚಾರಿಗಳ ಓಡಾಡುವುದೇ ಕಷ್ಟವಾಗಿದೆ. ಇಷ್ಟಾದರೂ ಪಾಲಿಕೆ ಕಣ್ಣು ಮುಚ್ಚಿ ಕುಳಿತಿದೆ’ ಎಂದರು.

ADVERTISEMENT

ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ ಮಾತನಾಡಿ, ‘ಸದ್ಯ ವ್ಯಾಪಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ವಿತರಿಸಿರುವ ಮಾಸ್ಕ್‌ಗಳನ್ನು ಮುಂದೆ ಸಚಿವರಾದ ಜಗದೀಶ ಶೆಟ್ಟರ್, ಪ್ರಹ್ಲಾದ ಜೋಶಿ ಹಾಗೂ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರಿಗೂ ವಿತರಿಸಲಾಗುವುದು. ಕಡೆ ಪಕ್ಷ ಅವರ ಆರೋಗ್ಯವಾದರೂ ಚನ್ನಾಗಿದ್ದರೆ, ಅಭಿವೃದ್ಧಿ ಕೆಲಸಗಳಾಗಬಹುದು‘ ಎಂದು ವ್ಯಂಗ್ಯವಾಡಿದರು.

ಮುಖಂಡರಾದ ರಾಜಶೇಖರ ಮೆಣಸಿನಕಾಯಿ, ನವೀದ್ ಮುಲ್ಲಾ, ಇಲಿಯಾಸ್ ಮನಿಯಾರ, ಸಂತೋಷ ಜಕ್ಕಪ್ಪನವರ ಬಾಬಾಜಾನ ಮುಧೋಳ, ಮದನ್ ಕುಲಕರ್ಣಿ, ಇಮ್ರಾನ್ ಎಲಿಗಾರ, ಪುಷ್ಪರಾಜ್ ಹಳ್ಳಿ, ಮಂಜೂರ ಅಥಣಿ, ವೆಂಕಟೇಶ ಪೂಜಾರ, ನಿಸಾರ ನಿಲಗಾರ, ಇರ್ಶಾದ ಗಡವಾಲೆ, ದುರ್ಗಪ್ಪ ಪೂಜಾರ, ಬಸವರಾಜ್ ಬೆಣಕಲ್, ಮಂಜುನಾಥ ಉಪ್ಪಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.