ADVERTISEMENT

ಹುಬ್ಬಳ್ಳಿ|ಗುಂಡಿಬಿದ್ದ ರಸ್ತೆ ದುರಸ್ತಿಗೆ ನಿರ್ಲಕ್ಷ್ಯ; ಉಸಿರಾಟದ ಸಮಸ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 5:16 IST
Last Updated 9 ನವೆಂಬರ್ 2025, 5:16 IST
<div class="paragraphs"><p>ಹುಬ್ಬಳ್ಳಿ–ಧಾರವಾಡ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್‌ ರಸ್ತೆಯ ತಾರಿಹಾಳ ಸಮೀಪ ಶನಿವಾರ ವಾಹನಗಳು ಸಂಚರಿಸಿದಾಗ ಆವರಿಸಿದ ದೂಳು </p></div>

ಹುಬ್ಬಳ್ಳಿ–ಧಾರವಾಡ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್‌ ರಸ್ತೆಯ ತಾರಿಹಾಳ ಸಮೀಪ ಶನಿವಾರ ವಾಹನಗಳು ಸಂಚರಿಸಿದಾಗ ಆವರಿಸಿದ ದೂಳು

   

ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಹುಬ್ಬಳ್ಳಿ: ನಿರ್ಮಾಣ ಹಂತದಲ್ಲಿರುವ ಬೃಹತ್‌ ಕಾಮಗಾರಿ, ಗುಂಡಿ ಬಿದ್ದ ಹಾಗೂ ನಿರ್ಹಣೆಯಿಲ್ಲದ ರಸ್ತೆಯಿಂದಾಗಿ ಹುಬ್ಬಳ್ಳಿ ನಗರದಲ್ಲಿ ದೂಳಿನ ಪ್ರಮಾಣ ಹೆಚ್ಚಾಗಿದೆ. ಪರಿಣಾಮ ಆಸ್ತಮಾ, ಕೆಮ್ಮು ಸೇರಿ ಇತರ ಕಾಯಿಲೆಗಳು ಹೆಚ್ಚುತ್ತಿವೆ.

ADVERTISEMENT

ನಗರದ ಚನ್ನಮ್ಮ ವೃತ್ತ, ರಾಯಣ್ಣ ವೃತ್ತ, ಹಳೇ ಕೋರ್ಟ್‌ ವೃತ್ತ, ಹಳೇ ಬಸ್‌ ನಿಲ್ದಾಣದ ಎದುರು, ಬಸವವನ, ಐಟಿ ಪಾರ್ಕ್‌, ಹೊಸೂರು ವೃತ್ತ, ಇಂಡಿ ಪಂಪ್‌ ವೃತ್ತ, ಕಾರವಾರ ರಸ್ತೆ ಮೇಲ್ಸೇತುವೆ ಕೆಳಭಾಗ ಸೇರಿ ನಗರದ ಹೊರವಲಯದ ಹುಬ್ಬಳ್ಳಿ–ಧಾರವಾಡ ಬೈಪಾಸ್‌ ರಸ್ತೆಯಲ್ಲೂ ವಿಪರೀತ ಪ್ರಮಾಣದಲ್ಲಿ ದೂಳು ಏಳುತ್ತಿದೆ.

ಬಿಸಿಲೇರುತ್ತಿದ್ದಂತೆ ದೂಳಿನ ಪ್ರಮಾಣ ಹೆಚ್ಚಾಗುತ್ತಿದ್ದು, ಬಸ್‌, ಲಾರಿ, ಟಂಟಂ ವಾಹನಗಳು ಸಂಚರಿಸಿದರೆ ಆಳೆತ್ತರಕ್ಕೆ ದೂಳು ಆವರಿಸುತ್ತದೆ. ಅವುಗಳ ಹಿಂದೆ ಸಂಚರಿಸುವ ಬೈಕ್‌ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ,  ಪಾದಚಾರಿಗಳು ಸಹ ಸಮಸ್ಯೆ ಅನುಭವಿಸುವಂತಾಗಿದೆ.

‘ವಾತಾವರಣದಲ್ಲಿ ದೂಳಿನ ಕಣಗಳು ಹೆಚ್ಚುವುದರಿಂದ, ಸಾರ್ವಜನಿಕರಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕ್ರಮೇಣ ಅದು ಆಸ್ತಮಾ ಕಾಯಿಲೆಗೂ ಕಾರಣವಾಗುತ್ತಿದೆ. ಹದಿನೈದು ದಿನಗಳಿಂದೀಚೆಗೆ ಈ ಸಮಸ್ಯೆಯಿಂದ ಕ್ಲಿನಿಕ್‌ಗೆ ಬರುವವರ ಸಂಖ್ಯೆ ಹೆಚ್ಚಾಗಿದೆ’ ಎಂದು ಹುಬ್ಬಳ್ಳಿ ಆಸ್ತಮಾ ಕ್ಲಿನಿಕ್‌ ಸೆಂಟರ್‌ನ ಡಾ. ಅಶೋಕ ಗುಡಗಂಟಿ ಹೇಳಿದರು.

‘ಮಳೆ ಬಿದ್ದ ನಂತರ ಸಹಜವಾಗಿ ಬಿಸಿಲಿಗೆ ದೂಳು ಹೆಚ್ಚಾಗುತ್ತದೆ. ಅದರ ಜತೆಗೆ, ಗುಂಡಿ ಬಿದ್ದ ಹಾಗೂ ನಿರ್ಹಣೆಯಿಲ್ಲದ ರಸ್ತೆಗಳಿಂದಾಗಿ ವಿಪರೀತ ಎನ್ನುವಷ್ಟು ದೂಳು ಆವರಿಸುತ್ತಿದೆ. ಪ್ರತಿ ಬಾರಿಯೂ ಈ ಸಮಸ್ಯೆಯಿದ್ದು, ಸಮರ್ಪಕ ರಸ್ತೆ ನಿರ್ಮಾಣ ಹಾಗೂ ಕಾಮಗಾರಿಗಳನ್ನು ತುರ್ತಾಗಿ ಮುಗಿಸಿ ನಿರ್ವಹಣೆ ಮಾಡುವುದೊಂದೇ ಪರಿಹಾರ. ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಹಾಗೂ ವಾಹನ ಸವಾರರು ಮಾಸ್ಕ್‌ ಧರಿಸಿ, ಸಂಭವನೀಯ ಕಾಯಿಲೆಯಿಂದ ರಕ್ಷಿಸಿಕೊಳ್ಳಬೇಕು’ ಎಂದರು.

ಶೀತ ಜ್ವರ ಹೆಚ್ಚಳ

ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದ್ದು ರಾತ್ರಿಯಾಗುತ್ತಿದ್ದಂತೆ ವಿಪರೀತವಾಗುತ್ತಿದೆ. ವಾತಾವರಣದಲ್ಲಿ ಒಮ್ಮೆಲೆ ಬದಲಾವಣೆಯಾಗಿದ್ದರಿಂದ ವೈರಾಣು ಜ್ವರ ಹಾಗೂ ಶೀತ ನೆಗಡಿಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಗರದ ಕೆಎಂಸಿ–ಆರ್‌ಐ ಆಸ್ಪತ್ರೆ ಚಿಟಗುಪ್ಪಿ ಆಸ್ಪತ್ರೆಗೆ ಬರುವ ಹೊರ ರೋಗಿಗಳಲ್ಲಿ ಇವರ ಸಂಖ್ಯೆ ತುಸು ಹೆಚ್ಚಾಗಿದೆ. ‘ಶೀತ ಗಾಳಿ ಬೀಸುವುದರಿಂದ ಸಹಜವಾಗಿ ವೈರಾಣು ಜ್ವರ ಬಾಧಿಸುತ್ತದೆ. ಸೂಕ್ತ ಚಿಕಿತ್ಸೆ ಪಡೆಯಬೇಕು’ ಎಂದು ಕೆಎಂಸಿ–ಆರ್‌ಐ ಆಸ್ಪತ್ರೆಯ ನಿರ್ದೇಶಕ ಡಾ. ಈಶ್ವರ ಹೊಸಮನಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.