ಧಾರವಾಡ: ಕರ್ತವ್ಯ ಲೋಪದ ಆರೋಪದಡಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನವರ ಅವರನ್ನು ಅಮಾನತುಗೊಳಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಧೀನ ಕಾರ್ಯದರ್ಶಿ ಶ್ರೀನಿಧಿ ಅವರು ಅಮಾನತು ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಲ್ಲಪ್ಪ ತೊಗಲಬಾಗಿ ಅವರಿಗೆ ಯೋಜನಾ ನಿರ್ದೇಶಕ ಹುದ್ದೆ ಪ್ರಭಾರ ವಹಿಸಲಾಗಿದೆ.
ರೇಖಾ ಅವರು ರಾಜೀವ್‌ಗಾಂಧಿ ಚೈತನ್ಯ ಯೋಜನೆ (2016–17 ಮತ್ತು 2017–18ನೇ ಸಾಲಿನ) ಕಾರ್ಯಕ್ರಮಗಳ ಅನುದಾನಕ್ಕಾಗಿ ಪ್ರಸ್ತಾವ ಸಲ್ಲಿಕೆಗೆ ಸಂಬಂಧಿಸಿದಂತೆ ಲೋಪ ಎಸಗಿದ್ದಾರೆ. ಜಿಲ್ಲಾಮಟ್ಟದ ಸಮಿತಿಯನ್ನು ರಚಿಸಿಲ್ಲ. ಆದರೆ, ಸಮಿತಿ ಶಿಫಾರಸಿನೊಂದಿಗೆ ಎಂದು ನಮೂದಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಹಿ ಪಡೆದು ಸ್ಮಾನ್ ಐ.ಟಿ ಸಲ್ಯೂಷನ್ ಸಂಸ್ಥೆಗೆ ₹ 3.65 ಕೋಟಿ ಬಿಡುಗಡೆಗೆ ಪ್ರಸ್ತಾವ ಸಲ್ಲಿಸಲು ಕಾರಣರಾಗಿದ್ಧಾರೆ. ಸಂಸ್ಥೆಯವರು ಸಲ್ಲಿಸಿದ ಬಿಲ್‌ಗಳನ್ನು ಸಹ ಗಮನಕ್ಕೆ ತಂದಿಲ್ಲ. ರೇಖಾ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಧಾರವಾಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರದಿ ಸಲ್ಲಿಸಿದ್ದಾರೆ. ನಿಯಮ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.