ADVERTISEMENT

ಫೈ ಓವರ್‌ ನಿರ್ಮಾಣಕ್ಕೆ 15ರಂದು ಶಂಕುಸ್ಥಾಪನೆ: ಜೋಶಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 15:13 IST
Last Updated 10 ಜನವರಿ 2021, 15:13 IST
ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಐಆರ್‌ಸಿಟಿಸಿ ಕ್ಯಾಂಟೀನ್‌ ಉದ್ಘಾಟಿಸಿ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್‌ ಸಿಂಗ್‌ ಅವರಿಗೆ ಉ‍ಪಾಹಾರ ನೀಡಿದರು
ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಐಆರ್‌ಸಿಟಿಸಿ ಕ್ಯಾಂಟೀನ್‌ ಉದ್ಘಾಟಿಸಿ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್‌ ಸಿಂಗ್‌ ಅವರಿಗೆ ಉ‍ಪಾಹಾರ ನೀಡಿದರು   

ಹುಬ್ಬಳ್ಳಿ: ನಗರದ ಹೃದಯ ಭಾಗವಾದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಫ್ಲೈ ಓವರ್‌ ನಿರ್ಮಾಣ ಕಾಮಗಾರಿಗೆ ಜ. 15ರಂದುಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವರ್ಚುವಲ್‌ ಮೂಲಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿನಗರದ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದ ಮೊದಲ ಪ್ಲಾಟ್‌ಫಾರ್ಮ್‌ನಲ್ಲಿ ಭಾನುವಾರ ಐಆರ್‌ಸಿಟಿಸಿ ಕ್ಯಾಂಟೀನ್‌ ಉದ್ಘಾಟಿಸಿದ ಬಳಿಕ ಈ ವಿಷಯ ತಿಳಿಸಿದರು.

‘₹300 ಕೋಟಿ ಮೊತ್ತದ ಕಾಮಗಾರಿ ಇದಾಗಿದ್ದು, ಗಬ್ಬೂರು ಕ್ರಾಸ್‌ವರೆಗೆ ವಿಸ್ತರಣೆ ಮಾಡಬೇಕು ಎನ್ನುವ ಆಸೆ ನನ್ನದು. ಇದಕ್ಕೆ ಅಂದಾಜು ₹100 ಕೋಟಿ ಹೆಚ್ಚುವರಿಯಾಗಿ ಖರ್ಚಾಗಲಿದ್ದು, ಮಹಾನಗರ ಪಾಲಿಕೆ, ಹುಡಾ ಮತ್ತು ಸ್ಥಳೀಯ ಸಂಸ್ಥೆಗಳಿಂದ ₹50 ಕೋಟಿ ಹೊಂದಿಸಿಕೊಂಡು, ಇನ್ನುಳಿದ ₹50 ಕೋಟಿ ಸಾಲ ಪಡೆಯಲು ಯೋಜನೆ ರೂಪಿಸಲಾಗುತ್ತಿದೆ. ಈ ಕುರಿತು ಅಧಿಕಾರಿಗಳಿಗೂ ಸೂಚಿಸಿದ್ದೇನೆ’ ಎಂದರು.

ADVERTISEMENT

‘ಅದೇ ದಿನ ಕಲಘಟಗಿ ತಾಲ್ಲೂಕಿನ ದಾಸ್ತಿಕೊಪ್ಪ ಗ್ರಾಮದಲ್ಲಿ ₹27 ಕೋಟಿ ವೆಚ್ಚದಲ್ಲಿ ಬ್ರಿಡ್ಜ್‌ ನಿರ್ಮಾಣಕ್ಕೆ ನಿತಿನ್ ಗಡ್ಕರಿ ಭೂಮಿಪೂಜೆ ನೆರವೇರಿಸಲಿದ್ದಾರೆ.ಫ್ಲೈ ಓವರ್ ಶಂಕುಸ್ಥಾಪನೆಯ ಕಾರ್ಯಕ್ರಮವನ್ನು ಸ್ಥಳೀಯವಾಗಿ ಡೆನಿಸನ್‌ ಹೋಟೆಲ್‌ನಲ್ಲಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

ತೃಪ್ತಿ ನೀಡಿಲ್ಲ: ಎರಡು ದಿನಗಳ ಹಿಂದೆ ಅವಳಿ ನಗರಗಳಲ್ಲಿ ಸುರಿದ ಮಳೆಯಿಂದ ಆದ ಅನಾಹುತದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ನೀರು ನಿಲ್ಲುತ್ತಿರುವ ಬಗ್ಗೆ ಅನೇಕ ದೂರುಗಳಿವೆ. ಒಟ್ಟಾರೆಯಾಗಿ ಈ ಕಾಮಗಾರಿ ತೃಪ್ತಿ ನೀಡಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬರುವಷ್ಟರಲ್ಲಿ ಶೇ 90ರಷ್ಟು ಕಾಮಗಾರಿ ಮುಗಿದು ಹೋಗಿತ್ತು. ಮುಂದಿನ ವಾರದಲ್ಲಿ ಅಧಿಕಾರಿಗಳ ಸಭೆ ಕರೆದು ಲೋಪದೋಷಗಳನ್ನು ಸರಿಪಡಿಸುತ್ತೇನೆ’ ಎಂದು ಭರವಸೆ ನೀಡಿದರು.

ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್‌ ಸಿಂಗ್‌, ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಐಆರ್‌ಸಿಟಿಸಿ ವಿಭಾಗೀಯ ವ್ಯವಸ್ಥಾಪಕ ಬಿ. ರಮೇಶ,ರೈಲ್ವೆ ಅಧಿಕಾರಿಗಳಾದ ಜೋಗಿಂದರ್ ಯದುವೇಂದು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.