ADVERTISEMENT

3 ಸಾವಿರ ಅಂಗವಿಕಲ ಮಕ್ಕಳಿಗೆ ಶಿಕ್ಷಣ

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಆಯುಕ್ತ ದಾಸ್ ಸೂರ್ಯವಂಶಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2025, 16:13 IST
Last Updated 18 ಫೆಬ್ರುವರಿ 2025, 16:13 IST
ದಾಸ್ ಸೂರ್ಯವಂಶಿ
ದಾಸ್ ಸೂರ್ಯವಂಶಿ   

ಧಾರವಾಡ: ‘ಜಿಲ್ಲೆಯಲ್ಲಿ ಸರ್ವಶಿಕ್ಷಣ ಅಭಿಯಾನದಡಿ 3,000 ಅಂಗವಿಕಲ ಮಕ್ಕಳು ಶಿಕ್ಷಣ ಪಡೆಯುತ್ತಿದ್ಧಾರೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಕಲಿಕೆಗೆ ಪರಿಕರ ಕೊರತೆ ಇದೆ’ ಎಂದು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂಗವಿಕಲ ಮಕ್ಕಳು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್‌) ವಸತಿ ಶಾಲೆಗಳಿಗೆ ದಾಖಲಾಗಲು ಪ್ರವೇಶ ಪರೀಕ್ಷೆ ಬರೆಯಬೇಕಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಆದೇಶ ಹೊರಡಿಸಿದೆ. ರಾಷ್ಟ್ರಿಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ (ಆರ್‌ಬಿಎಸ್‌ಕೆ) 18 ವರ್ಷದೊಳಗಿನವರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

‘ಅಂಗವಿಕಲರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರೂಪ್ ‘ಎ’ ಮತ್ತು‘ಬಿ’ ಹುದ್ದೆಗಳಲ್ಲಿ ಶೇ 4 ಹಾಗೂ ಮತ್ತು ಗ್ರೂಪ್ ‘ಸಿ’ ಮತ್ತು ‘ಡಿ’ ಹುದ್ದೆಗಳಲ್ಲಿ ಶೇ 5 ಮೀಸಲಾತಿ ನೀಡಲು ಅಧಿನಿಯಮದಲ್ಲಿ ಆದೇಶಿಸಲಾಗಿದೆ. ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ 7,000 ಅಂಗವಿಕಲರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದರು.

ADVERTISEMENT

‘ಎಲ್ಲ ಇಲಾಖೆಗಳಲ್ಲಿ ಶೇ 5ರಷ್ಟು ಅನುದಾನವನ್ನು ಅಂಗವಿಕಲರ ಅಭಿವೃದ್ಧಿಗೆ ಮೀಸಲಿಡಬೇಕು. ಯೋಜನೆಗಳು, ಸವಲತ್ತುಗಳ ಕುರಿತು ಅರಿವು ಮೂಡಿಸಬೇಕು. ಸರ್ಕಾರವು ಬಜೆಟ್‌ನಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನ ಮೀಸಲಿಡುವಂತೆ, ಅಂಗವಿಕಲರ ಅನುದಾನ ಮೀಸಲಿಡಲೂ ಕ್ರಮ ವಹಿಸಬೇಕು. ಅಧಿಕಾರಿಗಳು ಸವಲತ್ತುಗಳನ್ನು ಅಂಗವಿಕಲರಿಗೆ ತಲುಪಿಸಬೇಕು’ ಎಂದು ಹೇಳಿದರು.

‘ಪೊಲೀಸ್ ಠಾಣೆಯಲ್ಲಿ ಅಂಗವಿಕಲರ ಸಂಜ್ಞೆ ಭಾಷೆ ಬಲ್ಲವರು ಇರಬೇಕು. ಮಾತು ಬಾರದ, ಕಿವಿಯು ಕೇಳವದವರಿಂದ ಸಂಜ್ಞೆ ಮೂಲಕ ವಿವರ ಪಡೆಯಬೇಕು’ ಎಂದರು.

ಅಂಗವಿಕಲರ ಇಲಾಖೆ ಜಿಲ್ಲಾ ಅಧಿಕಾರಿ ಜಗದೀಶ ಇದ್ದರು.

‘ಖೊಟ್ಟಿ ಪ್ರಮಾಣ ಪತ್ರ; ಸ್ವಯಂ ದೂರು ದಾಖಲಿಸಿಕೊಳ್ಳಲು ಅವಕಾಶ’

‘ಅನರ್ಹರು ಅಂಗವಿಕಲರ ಗುರುತಿನ ಚೀಟಿ ಸವಲತ್ತು ಪಡೆದಿದ್ದು ಕಂಡುಬಂದರೆ ಅಧಿನಿಯಮಕ್ಕೆ ಪತ್ರ ಬರೆದು ತಿಳಿಸಬಹುದು. ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಅವಕಾಶ ಇದೆ. ನಕಲಿ ಪ್ರಮಾಣಪತ್ರ ಕುರಿತು ದೂರು ಸಲ್ಲಿಕೆಯಾದರೆ ಪರಿಶೀಲಿಸಿ ಕ್ರಮ ವಹಿಸಲಾಗುವುದು’ ಎಂದು ದಾಸ್ ಸೂರ್ಯವಂಶಿ ತಿಳಿಸಿದರು. ಜಿಲ್ಲೆಯಲ್ಲಿ ಪ್ರತಿ ತಿಂಗಳು ಅಂಗವಿಕಲರ ಸಭೆ ನಡೆಸುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.