ಹುಬ್ಬಳ್ಳಿ: ‘ಎಡ್ಯುವರ್ಸ್’ ಶೈಕ್ಷಣಿಕ ಮೇಳ ವಿದ್ಯಾರ್ಥಿಗಳಿಗೆ ಭರಪೂರ ಶೈಕ್ಷಣಿಕ ಮಾಹಿತಿ ಒದಗಿಸಿತು. ಹುಬ್ಬಳ್ಳಿ, ಧಾರವಾಡ ಅಲ್ಲದೆ ಅಕ್ಕಪಕ್ಕದ ಜಿಲ್ಲೆಗಳ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ಬಂದರು. ಬೆಳಿಗ್ಗೆಯೇ ಸರತಿಯಲ್ಲಿ ನಿಂತು ಹೆಸರು ನೋಂದಾಯಿಸಿಕೊಂಡ ವಿದ್ಯಾರ್ಥಿಗಳು, ವಿವಿಧ ಮಳಿಗೆಗಳಿಗೆ ತೆರಳಿ ಹೊಸ ಕೋರ್ಸ್‌ಗಳ ಬಗ್ಗೆ ಕುತೂಹಲದಿಂದ ಮಾಹಿತಿ ಪಡೆದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಅಲ್ಲದೇ ತಮಿಳುನಾಡು, ಮಹಾರಾಷ್ಟ್ರ, ದೆಹಲಿ ಸೇರಿ ವಿವಿಧ ರಾಜ್ಯಗಳ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳ 60ಕ್ಕೂ ಹೆಚ್ಚು ಮಳಿಗೆಗಳು ಮೇಳದಲ್ಲಿ ಇವೆ.
ರಾಮಯ್ಯ ವಿಶ್ವವಿದ್ಯಾಲಯ, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ಸಪ್ತಗಿರಿ ಎನ್‌ಪಿಎಸ್ ವಿಶ್ವವಿದ್ಯಾಲಯ, ಗೀತಂ ಡೀಮ್ಡ್ ವಿ.ವಿ, ಪಾರುಲ್ ವಿಶ್ವವಿದ್ಯಾಲಯ, ಚಾಣಕ್ಯ ವಿಶ್ವವಿದ್ಯಾಲಯ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ, ಐಸಿಎಫ್‌ಎಐ ಫೌಂಡೇಷನ್ ಫಾರ್ ಹೈಯರ್ ಎಜುಕೇಷನ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ವಿ.ವಿಗಳ ಮಳಿಗೆಗಳ ಸಿಬ್ಬಂದಿ ಪ್ರವೇಶ ಪ್ರಕ್ರಿಯೆ, ನೂತನ ಕೋರ್ಸ್ ಸೇರಿ ಇನ್ನಿತರ ವಿಷಯಗಳ ಕುರಿತು ವಿವರಿಸಿದರು.
ವಿಧಿವಿಜ್ಞಾನ, ಫ್ಯಾಷನ್ ಡಿಸೈನಿಂಗ್, ಕಾನೂನು, ಎಂಜಿನಿಯರಿಂಗ್, ವೈದ್ಯಕೀಯ, ಆರ್ಕಿಟೆಕ್ಟ್, ಪ್ರವಾಸೋದ್ಯಮ, ಎಂಬಿಎ ಬಗ್ಗೆಯೂ ಮಾಹಿತಿ ಸಿಕ್ಕಿತು.ಪಾದರಕ್ಷೆಗಳ ವಿನ್ಯಾಸ ಕುರಿತು ಫುಟ್‌ವೇರ್ ಡಿಸೈನ್ ಆ್ಯಂಡ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಮಳಿಗೆ ಮಾಹಿತಿ ಒದಗಿಸಿದರೆ, ವಿದೇಶಗಳಲ್ಲಿ ಓದುವ ಬಗ್ಗೆ ಗ್ಲೋಬಲ್ ಮೈಂಡ್ಸ್ ಸಂಸ್ಥೆ ಮಾಹಿತಿ ನೀಡಿತು. ಪಿಯುಸಿ ನಂತರ ಓದಿನ ಜತೆಗೆ ಹಣ ಗಳಿಸುವ ಕೋರ್ಸ್ ಕುರಿತು ಜ್ಯೋತಿ ವರ್ಕ್ ಇಂಟಿಗ್ರೇಟೆಡ್ ಲರ್ನಿಂಗ್ ಪ್ರೋಗ್ರಾಂ ಮಳಿಗೆ ಸಿಬ್ಬಂದಿ ವಿವರಿಸಿದರು.
ಗ್ರಾಫಿಕ್ಸ್ ಡಿಸೈನಿಂಗ್, ವಿಡಿಯೊ ಎಡಿಟಿಂಗ್, 3ಡಿ ವಿಎಫ್‌ಎಕ್ಸ್ ಸೇರಿದಂತೆ ವಿವಿಧ ಕೋರ್ಸ್ ಪರಿಚಯಿಸಿರುವ ಫ್ರೇಮ್‌ಬಾಕ್ಸ್ 2.0‘ ಅಕಾಡೆಮಿಯ ಮಳಿಗೆಯು ವಿದ್ಯಾರ್ಥಿಗಳನ್ನು ಆಕರ್ಷಿಸಿತು. ಸಾಯಿ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಸಂಸ್ಥೆಯ ವಿವಿಧ ಕೋರ್ಸ್‌ಗಳ ವಿವರವಾದ ಮಾಹಿತಿ ಸಿಕ್ಕಿತು. ಕರ್ಣಾಟಕ ಬ್ಯಾಂಕ್‌ನ ಸಿಬ್ಬಂದಿ ಶೈಕ್ಷಣಿಕ ಸಾಲದ ಬಗ್ಗೆ ಮಾಹಿತಿ ಒದಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.