ಹುಬ್ಬಳ್ಳಿ: ‘ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಈಗಾಗಲೇ ಆರಂಭಿಸಲಾಗಿದೆ’ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ನೂತನ ಅಧ್ಯಕ್ಷ ನಿಂಗಣ್ಣ ಬಿರಾದಾರ ಹೇಳಿದರು.
ನಗರದಲ್ಲಿ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದಿಂದ (ಎನ್‌ಕಾಸಿಯಾ) ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಇ–ಸ್ವತ್ತು, ಕನಿಷ್ಠ ವೇತನ ನೀಡುವ ವಿಚಾರ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಪ್ರತ್ಯೇಕಿಸಬೇಕು ಎನ್ನುವ ಬೇಡಿಕೆಗಳ ಬಗ್ಗೆ ಈಗಾಗಲೇ ಸರ್ಕಾರದ ಗಮನ ಸೆಳೆಯಲಾಗಿದೆ. ಎಫ್‌ಕೆಸಿಸಿಐ, ಪೀಣ್ಯ ಕೈಗಾರಿಕೆಗಳ ಸಂಘ ಹಾಗೂ ಕಾಸಿಯಾ ಪದಾಧಿಕಾರಿಗಳು ಒಗ್ಗಟ್ಟಾಗಿ ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದೇವೆ. ಬೇಡಿಕೆ ಈಡೇರಿಸುವ ಬಗ್ಗೆ ಉಪಮುಖ್ಯಮಂತ್ರಿ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.
‘ಕಾಸಿಯಾ ಇತಿಹಾಸದಲ್ಲಿ ಉತ್ತರ ಕರ್ನಾಟಕ ಭಾಗದಿಂದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದು ಇದೇ ಪ್ರಥಮ ಬಾರಿ. ಅದರಲ್ಲೂ ಶೇ 75ರಷ್ಟು ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದು ಕೂಡಾ ದಾಖಲೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದ ಬೆಂಬಲ ವ್ಯಕ್ತವಾಗಿದೆ. ಸಣ್ಣ ಕೈಗಾರಿಕೆಗಳ ಯಾವುದೇ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಎಲ್ಲರೂ ಮಾಡುತ್ತೇವೆ. ಕಾಸಿಯಾದಲ್ಲಿ ಈ ಬಾರಿ ಉತ್ತರ ಕರ್ನಾಟಕದ ಧ್ವನಿ ಗಟ್ಟಿಯಾಗಿದೆ’ ಎಂದು ತಿಳಿಸಿದರು.
ಕಾಸಿಯಾ ನೂತನ ಅಧ್ಯಕ್ಷ ನಿಂಗಣ್ಣ ಬಿರಾದಾರ, ಸಮಿತಿ ಸದಸ್ಯರಾಗಿ ಆಯ್ಕೆಯಾದ ಗಿರೀಶ ನಲವಡಿ, ಮಲ್ಲೇಶ ಜಾಡರ ಹಾಗೂ ನಾಗರಾಜ ಯಲಿಗಾರ ಅವರನ್ನು ಸನ್ಮಾನಿಸಲಾಯಿತು.
ಎನ್‌ಕಾಸಿಯಾ ಗೌರವ ಕಾರ್ಯದರ್ಶಿ ಶಂಕರ ಹಿರೇಮಠ, ನಿಕಟಪೂರ್ವ ಅಧ್ಯಕ್ಷ ಜೆ.ಸಿ.ಮಠದ, ಉಪಾಧ್ಯಕ್ಷರಾದ ಅಶೋಕ ಕುನ್ನೂರು, ಅಶೋಕ ಕಲಬುರ್ಗಿ, ಅನಿಲಕುಮಾರ ಜೈನ, ಭರತ ಕುಲಕರ್ಣಿ, ಜಂಟಿ ಕಾರ್ಯದರ್ಶಿ ಭರತ ಕುಲಕರ್ಣಿ ಹಾಗೂ ಖಜಾಂಚಿ ರಮೇಶ ಯಾದವಾಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.