ADVERTISEMENT

ಹುಬ್ಬಳ್ಳಿ|ಸಡಗರದ ‘ಈದ್‌ ಮಿಲಾದ್‌’ ಮೆರವಣಿಗೆ: ಪೈಗಂಬರರ ಸಂದೇಶ ಸಾರಿದ ಮುಸ್ಲಿಮರು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 5:11 IST
Last Updated 6 ಸೆಪ್ಟೆಂಬರ್ 2025, 5:11 IST
<div class="paragraphs"><p>ಈದ್‌ ಮಿಲಾದ್‌ ಪ್ರಯುಕ್ತ ಶುಕ್ರವಾರ ಹುಬ್ಬಳ್ಳಿಯಲ್ಲಿ ಮೆರವಣಿಗೆ ನಡೆಯಿತು. ಹುಬ್ಬಳ್ಳಿ ಅಂಜುಮನ್‌ ಸಂಸ್ಥೆ ಅಧ್ಯಕ್ಷ ಎ.ಎಂ.ಹಿಂಡಸಗೇರಿ, ಪ್ರೊ.ಐ.ಜಿ.ಸನದಿ, ಅಲ್ತಾಫ್‌ ಹಳ್ಳೂರು ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು&nbsp;&nbsp;&nbsp;&nbsp;&nbsp; </p></div>

ಈದ್‌ ಮಿಲಾದ್‌ ಪ್ರಯುಕ್ತ ಶುಕ್ರವಾರ ಹುಬ್ಬಳ್ಳಿಯಲ್ಲಿ ಮೆರವಣಿಗೆ ನಡೆಯಿತು. ಹುಬ್ಬಳ್ಳಿ ಅಂಜುಮನ್‌ ಸಂಸ್ಥೆ ಅಧ್ಯಕ್ಷ ಎ.ಎಂ.ಹಿಂಡಸಗೇರಿ, ಪ್ರೊ.ಐ.ಜಿ.ಸನದಿ, ಅಲ್ತಾಫ್‌ ಹಳ್ಳೂರು ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು     

   

ಪ್ರಜಾವಾಣಿ ಚಿತ್ರ

ಹುಬ್ಬಳ್ಳಿ: ಇಸ್ಲಾಂ ಧರ್ಮದ ಪ್ರವರ್ತಕ ಮುಹಮ್ಮದ್‌ ಪೈಗಂಬರರ ಜನ್ಮದಿನದ ಅಂಗವಾಗಿ ಮುಸ್ಲಿಂ ಸಮುದಾಯದವರು ಶುಕ್ರವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಪ್ರವಾದಿ ಅವರ ಸಂದೇಶಗಳನ್ನು ಘೋಷಣೆ ಕೂಗುತ್ತ ಪ್ರಮುಖ ಬೀದಿಯಲ್ಲಿ ಸಾಗಿದರು.

ನಗರದ ಕೇಶ್ವಾಪುರ, ಸಿಬಿಟಿ, ಇಸ್ಲಾಂಪುರದಲ್ಲಿ ಧರ್ಮಗುರುಗಳು ಹಾಗೂ ಮುಖಂಡರು ಮೆರವಣಿಗೆಗೆ ಚಾಲನೆ ನೀಡಿದರು. ಮಧ್ಯಾಹ್ನ ಮೂರರ ವೇಳೆ ಆರಂಭವಾದ ಮೆರವಣಿಗೆ ರಾತ್ರಿ 9ರವರೆಗೂ ನಡೆಯಿತು.

ಗೋಪನಕೊಪ್ಪ, ಕೇಶ್ವಾಪುರ, ಮಂಟೂರು ರಸ್ತೆ, ಯಲ್ಲಾಪುರ ಓಣಿ, ಬಮ್ಮಾಪುರ ಚೌಕ, ಆನಂದನಗರ ಸೇರಿದಂತೆ ನಗರದ ವಿವಿಧೆಡೆ ಇರುವ ನೂರಕ್ಕೂ ಹೆಚ್ಚು ಮಸೀದಿಗಳಿಂದ ಮೆರವಣಿಗೆ ಹೊರಟು, ಆಸಾರ ಹೊಂಡದಲ್ಲಿರುವ ಮಸೀದಿ ತಲುಪಿದರು. ಅಲ್ಲಿ ಪೆಟ್ಟಿಗೆಯಲ್ಲಿಟ್ಟು ಸಂರಕ್ಷಣೆ ಮಾಡಿರುವ ಮೊಹಮ್ಮದ್‌ ಪೈಗಂಬರರ ಮುಹ್‌–ಎ–ಮುಬಾರಕ್‌ (ಕೇಶ ದರ್ಶನ) ದರ್ಶನ ಪಡೆದು ಭಕ್ತಿ ನಮನ ಸಲ್ಲಿಸಿದರು.

ಇಸ್ಲಾಂಪುರ ರಸ್ತೆಯ ದಾರುಲ್‌ ಉಲುಮ್‌ ಅಹಲೆ ಸುನ್ನತ ಗೌಸಿಯಾ ವತಿಯಿಂದ ಹಮ್ಮಿಕೊಂಡಿದ್ದ ಮೆರವಣಿಗೆಗೆ ಮುಸ್ಲಿಂ ಧರ್ಮಗುರುಗಳು ಹಾಗೂ ಮುಖಂಡರು ಚಾಲನೆ ನೀಡಿದರು. ಹುಬ್ಬಳ್ಳಿ ಅಂಜುಮನ್‌ ಸಂಸ್ಥೆಯ ಅಧ್ಯಕ್ಷ ಎ.ಎಂ. ಹಿಂಡಸಗೇರಿ ನೇತೃತ್ವ ವಹಿಸಿದ್ದರು. ಸಮುದಾಯದ ಮುಖಂಡರು, ಧರ್ಮಗುರುಗಳು, ಮಕ್ಕಳು ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಮೆರವಣಿಗೆಯು ಪುಣೆ–ಬೆಂಗಳೂರು ರಸ್ತೆ, ಬಂಕಾಪುರ ಚೌಕ, ಯಲ್ಲಾಪುರ ಓಣಿ, ರಾಧಾಕೃಷ್ಣ ಗಲ್ಲಿ, ದುರ್ಗದ ಬೈಲ್‌, ಕಾಳಮ್ಮನ ಅಗಸಿ, ಬಮ್ಮಾಪುರ ಚೌಕ, ಪೆಂಡಾರಗಲ್ಲಿ ಮೂಲಕ ಸಾಗಿ ಅಸಾರ ಹೊಂಡದಲ್ಲಿರುವ ಮೊಹಲ್ಲಾ ತಲುಪಿತು. ಹೊಸ ಬಟ್ಟೆ ಹಾಗೂ ಸಾಂಪ್ರದಾಯಿಕ ಪೇಟ ಧರಿಸಿದ್ದ ಸಾವಿರಾರು ಮುಸ್ಲಿಮರು, ಕುರ್‌ಆನ್‌ ಪಠಣ ಮಾಡುತ್ತ ಸಾಗಿದ್ದು ಗಮನ ಸೆಳೆಯಿತು.

ಧರ್ಮಗುರು ತಾಜುದ್ದೀನ್‌ ಪೀರಾ ಖಾದ್ರಿ, ಶಾಸಕ ಪ್ರಸಾದ ಅಬ್ಬಯ್ಯ, ಅಂಜುಮನ್‌ ಸಂಸ್ಥೆ ಅಧ್ಯಕ್ಷ ಎ.ಎಂ.ಹಿಂಡಸಗೇರಿ, ಪ್ರೊ.ಐ.ಜಿ. ಸನದಿ, ಅಲ್ತಾಫ್‌ ಹಳ್ಳೂರ, ಅಬ್ದುಲ್‌ ವಹಾಬ್‌ ಮುಲ್ಲಾ, ಆಶ್ರಫ್‌ ಅಲಿ, ಅನ್ವರ ಮುಧೋಳ, ಶಫಿ ಮುದ್ದೇಬಿಹಾಳ, ಯೂಸೂಪ್‌ ಸವಣೂರು, ಸಿರಾಜ್‌ ಅಹ್ಮದ್‌ ಕುಡಚಿವಾಲೆ, ಬಸೀರ್‌ ಅಹ್ಮದ್, ನಜೀರ್‌ ಹೊನ್ಯಾಳ, ದಾಯತ್ ಖೈರಾತ್, ನವೀದ್‌ ಮುಲ್ಲಾ. ಆಸೀಫ್ ಬಳ್ಳಾರಿ, ಇನಾಯತಖಾನ್ ಪಠಾಣ, ಅಬ್ಬಾಸ್ ಕುಮಟಾಕರ್, ಆರೀಫ್ ಮುಜಾವರ್, ಮೆಹಮೂದ್ ಕೋಳೂರ, ಸಮದ್‌ ಗುಲಬರ್ಗಾ, ಮಲ್ಲಿಕಜಾನ್, ರಮೇಶ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಈದ್‌ ಮಿಲಾದ್‌ ಪ್ರಯುಕ್ತ ಎಲ್ಲ ಮಸೀದಿ, ದರ್ಗಾಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಕೆಲವು ಕಟ್ಟಡಗಳ ಮೇಲೆ ಹಸಿರು ಧ್ವಜ, ಮಾರ್ಗಗಳಲ್ಲಿ ಹಸಿರು ಬಟ್ಟೆಯ ತೋರಣಗಳನ್ನು ಕಟ್ಟಿ ಹಬ್ಬದ ಸಂಭ್ರಮ ಹೆಚ್ಚಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ನಿಗಾ ಇಡಲಾಗಿತ್ತು. ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಹಿಂದೂ–ಮುಸ್ಲಿಂ ಸಾಮರಸ್ಯ

ಅಂಜುಮನ್‌ ಸಂಸ್ಥೆ ಅಧ್ಯಕ್ಷ ಎ.ಎಂ.ಹಿಂಡಸಗೇರಿ ನೇತೃತ್ವದಲ್ಲಿ ನಡೆದ ಮೆರವಣಿಗೆಯು ದುರ್ಗದ ಬೈಲ್‌ ಬಳಿ ಬಂದಾಗ, ಅಲ್ಲಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸದಸ್ಯರು ಮುಖಂಡರಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ಫಲ–ಪುಷ್ಪ ನೀಡಿ ಸನ್ಮಾನಿಸಿದರು. ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಭಾವೈಕ್ಯ ಸಾರಿದರು. ಮುಸ್ಲಿಮರು ಪೈಗಂಬರರ ಪರ ಘೋಷಣೆ ಕೂಗಿದರು. ಹಿಂದೂಗಳು ಗಣೇಶ ಬೊಪ್ಪ ಎಂದು ಜೈಕಾರ ಹಾಕಿದರು.

ಮೆರವಣಿಗೆ ಸಾಗುವ ಮಾರ್ಗ ಮಧ್ಯದಲ್ಲಿ ಎದುರಾದ ಗಣೇಶ ಪೆಂಡಾಲ್‌ಗಳ ಎದುರು, ಹಿಂದೂ ಸಂಘಟನೆಗಳ ಮುಖಂಡರು ಮುಸ್ಲಿಮರಿಗೆ ಹೂಮಾಲೆ ಹಾಕಿ ಸ್ವಾಗತಿಸುವ ಜೊತೆಗೆ, ಶರಬತ್‌, ಮಜ್ಜಿಗೆ, ನೀರು, ಹಣ್ಣು, ಸಿಹಿ ತಿನಿಸು ಹಂಚಿದರು.

‘ಪೈಗಂಬರರು ಸೌಹಾರ್ದದ ಪ್ರತೀಕ’

‘ಮುಹಮ್ಮದ್‌ ಪೈಗಂಬರ್‌ ಅವರು ಶಾಂತಿ ಸೌಹಾರ್ದತೆಯ ಪ್ರತೀಕ. ಅವರ ಬೋಧನೆಗಳು ಮನುಕುಲಕ್ಕೆ ಬೆಳಕು ನೀಡಿ ವಿಶ್ವದಲ್ಲಿ ಶಾಂತಿ ನೆಲೆಸುವುದಕ್ಕೆ ಪೂರಕವಾಗಿವೆ’ ಎಂದು ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅನ್ವರ ಮುಧೋಳ ಹೇಳಿದರು.

ಪ್ರವಾದಿ ಮುಹಮ್ಮದ್‌ ಪೈಗಂಬರ್ ಜನ್ಮದಿನ ಅಂಗವಾಗಿ ಶುಕ್ರವಾರ ನಡೆದ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶಫೀ ಮುದೇಬಿಹಾಳ, ಯುಸೂಫ್‌ ಬಳ್ಳಾರಿ, ಮೌಲಾಸಾಬ ನದಾಫ್‌, ಬಾಬು ಬೆಳಗಲಿ, ಮೆಹಬೂಬಖಾನ ಪಠಾಣ, ಅಜ್ಜುಖಾನ್‌ ಧಾರವಾಡ, ಜೈಲಾನಿ ಬ್ಯಾಡಗಿ, ಶೌಕತ್‌ಅಲಿ ಮುಜಾವರ್‌, ಇಮ್ತಿಯಾಜ್‌ ಬಿಳೆಪಸಾರ, ಎ.ಆರ್. ಜಕಾತಿ, ಪೀರಸಾಬ ನದಾಫ್‌, ಬಿ.ಎ.ಮುಧೋಳ, ಇಕ್ಬಾಲ್ ರಂಗರೇಜ ಇದ್ದರು.

ವರ್ಷದಲ್ಲಿ 2 ದಿನ ಮಾತ್ರ ಪೈಗಂಬರರ ಕೇಶ ದರ್ಶನಕ್ಕೆ ಅವಕಾಶವಿದ್ದು, ಹುಬ್ಬಳ್ಳಿ ಸೇರಿದಂತೆ ಸುತ್ತಲಿನ ಸಾವಿರಾರು ಮಂದಿ, ಧರ್ಮಾತೀತವಾಗಿ ಬಂದು ದರ್ಶನ ಪಡೆಯುತ್ತಾರೆಅಂಜುಮನ್‌ ಸಂಸ್ಥೆ
ನವೀದ್‌ ಮುಲ್ಲಾ, ಸದಸ್ಯ, ಹುಬ್ಬಳ್ಳಿ ಅಂಜುಮನ್‌ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.