ADVERTISEMENT

ಚುನಾವಣೆ ಪ್ರಚಾರ: ವಾಗ್ವಾದ, ನೂಕಾಟ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 15:53 IST
Last Updated 29 ಆಗಸ್ಟ್ 2021, 15:53 IST

ಹುಬ್ಬಳ್ಳಿ: ಚುನಾವಣೆ ಪ್ರಚಾರದ ವೇಳೆ ಕೋವಿಡ್‌ ನಿಯಮ ಉಲ್ಲಂಘನೆಯಾಗುತ್ತಿದೆ ಎನ್ನುವ ವಿಷಯಕ್ಕೆ ಹಳೇ ಹುಬ್ಬಳ್ಳಿಯ ಸೋನಿಯಾಗಾಂಧಿ ನಗರದಲ್ಲಿ ಭಾನುವಾರ ಪಕ್ಷೇತರ ಅಭ್ಯರ್ಥಿ ಅಕ್ಷತಾ ಅಸುಂಡಿ ಬೆಂಬಲಿಗರು ಹಾಗೂ ಪೊಲೀಸರ ನಡುವೆ ವಾಗ್ವಾದ ಹಾಗೂ ನೂಕಾಟ ನಡೆದಿದೆ.

82ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಅಕ್ಷತಾ ಅಸುಂಡಿ ನೂರಾರು ಬೆಂಬಲಿಗರೊಂದಿಗೆ ಸೋನಿಯಾಗಾಂಧಿ ನಗರದಲ್ಲಿ ಪ್ರಚಾರ ನಡೆಸುತ್ತಿದ್ದರು. ಬೆಂಡಿಗೇರಿ ಠಾಣೆ ಇನ್‌ಸ್ಪೆಕ್ಟರ್‌ ಶಾಮರಾಜ್ ಸಜ್ಜನ ಅವರು ಸ್ಥಳಕ್ಕೆ ಬಂದು, ಕೋವಿಡ್‌ ನಿಯಮ ಉಲ್ಲಂಘನೆಯಾಗುತ್ತಿದೆ. ಇಷ್ಟೊಂದು ಮಂದಿ ಸೇರಿ ಪ್ರಚಾರ ನಡೆಸಬಾರದು ಎಂದು ಎಚ್ಚರಿಸಿದ್ದಾರೆ. ಆಗ ಬೆಂಬಲಿಗರು, ಪಕ್ಷೇತರ ಅಭ್ಯರ್ಥಿಗೆ ಒಂದು ನ್ಯಾಯ, ಪಕ್ಷದ ಅಭ್ಯರ್ಥಿಗೆ ಒಂದು ನ್ಯಾಯವೇ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್‌ ಸಿಬ್ಬಂದಿ ಹಾಗೂ ಬೆಂಬಲಿಗರ ನಡುವೆ ವಾಗ್ವಾದ ನಡೆದು ಪರಸ್ಪರ ನೂಕಾಟ, ಗಲಾಟೆಯಾಗಿದೆ. ಇದರಿಂದ ಆಕ್ರೋಶಗೊಂಡ ಬೆಂಬಲಿಗರು ಪೊಲೀಸರಿಗೆ ಧಿಕ್ಕಾರ ಕೂಗಿ ಕೆಲಹೊತ್ತು ಪ್ರತಿಭಟನೆ ನಡೆಸಿದರು.

‘ಪೊಲೀಸರು ರಾಜಕೀಯ ಒತ್ತಡದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗಬ್ಬೂರಲ್ಲಿ ಸಚಿವ ಶ್ರೀರಾಮುಲು ಜೊತೆ 200ಕ್ಕೂ ಹೆಚ್ಚು ಮಂದಿ ಬಂದು ಪ್ರಚಾರ ನಡೆಸಿದ್ದಾರೆ. ಶಾಸಕ ಪ್ರಸಾದ ಅಬ್ಬಯ್ಯ ಜೊತೆಯೂ ಅಷ್ಟೇ ಮಂದಿ ಬಂದು ಪ್ರಚಾರ ನಡೆಸಿದ್ದಾರೆ. ಅವರಿಗೆ ಅನ್ವಯಿಸದ ಕೋವಿಡ್‌ ನಿಯಮ ನಮಗಷ್ಟೇ ಯಾಕೆ’ ಎಂದು ಪಕ್ಷೇತರ ಅಭ್ಯರ್ಥಿ ಅಕ್ಷತಾ ಅವರ ಪತಿ ಮೋಹನ ಅಸುಂಡಿ ಪ್ರಶ್ನಿಸಿದ್ದಾರೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಇನ್‌ಸ್ಪೆಕ್ಟರ್‌ ಶಾಮರಾಜ್‌ ಸಜ್ಜನ, ‘ಪ್ರಚಾರದ ವೇಳೆ ಕೋವಿಡ್‌ ನಿಯಮ ಉಲ್ಲಂಘನೆಯಾಗುತ್ತಿತ್ತು. ನಿಯಮಾವಳಿ ಪಾಲಿಸಲು ಸೂಚಿಸಿದಾಗ ಬೆಂಬಲಿಗರು ಗಲಾಟೆ ಮಾಡಿ, ಧಿಕ್ಕಾರ ಕೂಗಿದ್ದಾರೆ. ಈವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.