ADVERTISEMENT

ಪಾಲಿಕೆ ಚುನಾವಣೆ: ಇಂದಿನ ತೀರ್ಪಿನತ್ತ ಚಿತ್ತ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 16:25 IST
Last Updated 9 ಡಿಸೆಂಬರ್ 2020, 16:25 IST
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ   

ಹುಬ್ಬಳ್ಳಿ: ಇಲ್ಲಿನ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವ ಸಂಬಂಧ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯ ತೀರ್ಪು ಗುರುವಾರ (ಡಿ. 10) ಪ್ರಕಟವಾಗುವ ಸಾಧ್ಯತೆಯಿದೆ.

ವಾರ್ಡ್‌ ಮರುವಿಂಗಡಣೆ ಮತ್ತು ಮೀಸಲಾತಿ ಅಧಿಸೂಚನೆಗಳನ್ನು ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯಂತೆ ಹಿಂಪಡೆಯಲು ನಗರಾಭಿವೃದ್ಧಿ ಇಲಾಖೆ ವಿಳಂಬ ಮಾಡಿತ್ತು. ಆದ್ದರಿಂದ ಇಲಾಖೆಯ ಪ್ರಧಾನ ಕಾರ್ಯದರ್ಶಿ ನ್ಯಾಯಾಲಯದಲ್ಲಿ ಕ್ಷಮೆಯಾಚಿಸಿದ್ದರು. ಆದಷ್ಟು ಬೇಗನೆ ಚುನಾವಣೆ ನಡೆಸಲು ಸಿದ್ಧವಿರುವುದಾಗಿಯೂ ತಿಳಿಸಿದ್ದರು.

ಮಹಾನಗರ ಪಾಲಿಕೆಗೆ ಆದಷ್ಟು ಬೇಗನೆ ಚುನಾವಣೆ ನಡೆಸಬೇಕು, ಈ ಕುರಿತು ಸರ್ಕಾರ ಹಾಗೂ ಚುನಾವಣಾಧಿಕಾರಿಗೆ ನಿರ್ದೇಶನ ನೀಡಬೇಕು ಎಂದು ಕಾಂಗ್ರೆಸ್‌ ಮುಖಂಡ ನಾಗರಾಜ ಗೌರಿ ಸೇರಿದಂತೆ ಹಲವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದರು. ಡಿ. 1ರಂದು ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಡಿ. 10ಕ್ಕೆ ಮುಂದೂಡಿತ್ತು. ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳ ಚಿತ್ತ ಕೋರ್ಟ್‌ನತ್ತ ನೆಟ್ಟಿದೆ. 2019ರ ಮಾರ್ಚ್‌ 6ರಂದು ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಕೊನೆಗೊಂಡಿತ್ತು. ಸುಧೀರ ಸರಾಫ್‌ ಮೇಯರ್‌ ಆಗಿದ್ದರು.

ADVERTISEMENT

‘ಚುನಾವಣೆ ವಿನಾಕಾರಣ ವಿಳಂಬ ಮಾಡಲಾಗುತ್ತಿದೆ. ಕೊನೆಗೂ ತೀರ್ಪು ಬರುವ ಕಾಲ ಸನ್ನಿಹಿತವಾಗಿದೆ. ಜನಪ್ರತಿನಿಧಿಗಳಿಲ್ಲದ ಕಾರಣ ಜನ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಸ ವಿಲೇವಾರಿ, ಸ್ವಚ್ಛತೆ ಬಗ್ಗೆ ಗಮನ ಹರಿಸುವವರೇ ಇಲ್ಲದಂತಾಗಿದೆ. ಆದಷ್ಟು ಬೇಗ ಚುನಾವಣೆ ನಡೆದರೆ ಜನರಿಗೂ ಅನುಕೂಲವಾಗುತ್ತದೆ’ ಎಂದು ಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿರುವ ನಾಗರಾಜ ಗೌರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.