ADVERTISEMENT

ಉಪಚುನಾವಣೆ ನ್ಯಾಯ, ಮುಕ್ತವಾಗಿ ನಡೆಯುವ ಭರವಸೆ ಇಲ್ಲ: ವಿ.ಎಸ್‌. ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 9:03 IST
Last Updated 24 ಸೆಪ್ಟೆಂಬರ್ 2019, 9:03 IST
   

ಹುಬ್ಬಳ್ಳಿ: ‘ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ವಿಧಾನಸಭೆಗೆ ನಡೆಯುತ್ತಿರುವ ಉಪಚುನಾವಣೆಗಳು ನ್ಯಾಯಯುತ ಹಾಗೂ ಮುಕ್ತವಾಗಿ ನಡೆಯುತ್ತವೆ ಎಂಬ ವಿಶ್ವಾಸವಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ವಿ.ಎಸ್‌. ಉಗ್ರಪ್ಪ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಧಾನಸಭಾ ಅಧ್ಯಕ್ಷ ನೀಡಿರುವ ತೀರ್ಪಿನ ಬಗೆಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತದೆ. ಚುನಾವಣಾ ಆಯೋಗಕ್ಕೂ ಇದಕ್ಕೂ ಸಂಬಂಧವಿರದಿದ್ದರೂ, ಅನರ್ಹ ಅರ್ಜಿಯನ್ನು ಬೇಗನೆ ಇತ್ಯರ್ಥಗೊಳಿಸಬೇಕು ಎಂದು ಆಯೋಗ ಅರ್ಜಿ ಸಲ್ಲಿಸುತ್ತದೆ. ಹಾಗೆಯೇ ಅನರ್ಹ ಸ್ಪರ್ಧೆಗೆ ಅಭ್ಯಂತರವಿಲ್ಲ ಎಂದು ಹೇಳಿಕೆ ನೀಡಿರುವುದು ಅನುಮಾನಗಳಿಗೆ ಕಾರಣವಾಗಿದೆ’ ಎಂದರು.

‘ಚುನಾವಣಾ ಆಯೋಗದ ಅಧಿಕಾರಿ ಬೆಂಗಳೂರಿನಲ್ಲಿ ಅನರ್ಹರು ಸ್ಪರ್ಧಿಸುವಂತಿಲ್ಲ ಎಂದು ಹೇಳಿದರೆ, ಕೋರ್ಟ್‌ನಲ್ಲಿ ಆಯೋಗದ ಪರ ವಕೀಲರು ಅನರ್ಹರು ಸ್ಪರ್ಧಿಸಿದರೆ ಅಭ್ಯಂತರವಿಲ್ಲ ಎಂದು ಹೇಳುತ್ತಾರೆ. ಇದು ಚುನಾವಣಾ ಆಯೋಗದ ದುರ್ಬಳಕೆಯನ್ನು ತೋರಿಸುತ್ತದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ನಿರ್ದೇಶನದ ಮೇಲೆಯೇ ಆಯೋಗದ ಪರ ವಕೀಲರು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಮೈತ್ರಿ ಇಲ್ಲ: ಉಪಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್‌, ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಎಲ್ಲ ಕ್ಷೇತ್ರಗಳಿಗೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದರು.

ಉಪಚುನಾವಣೆಯು ಮತದಾರರ ಸ್ವಾಭಿಮಾನ ಹಾಗೂ ಬಿಜೆಪಿಯ ಅವಕಾಶವಾದಿ ರಾಜಕಾರಣದ ನಡುವಿನ ಹೋರಾಟವಾಗಿದೆ. ಮತದಾರರು ಗೆಲುವು ಸಾಧಿಸಲಿದ್ದಾರೆ. ಪಿ. ಚಿದಂಬರಂ ಹಾಗೂ ಡಿ.ಕೆ. ಶಿವಕುಮಾರ್‌ ಅವರಿಗೆ ಪಕ್ಷದ ಬೆಂಬಲವಿದೆ. ದ್ವೇಷದ ರಾಜಕೀಯದ ಪರಿಣಾಮ ಅವರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಪ್ರಧಾನಿಗೆ ಸಮಯವಿಲ್ಲ: ಅಮೆರಿಕಕ್ಕೆ ಹೋಗಿ ಅಲ್ಲಿನ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಪರವಾಗಿ ಚುನಾವಣೆ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮಯವಿದೆ. ಆದರೆ, ರಾಜ್ಯದ ಪ್ರವಾಹ ಪೀಡಿತ ಜನರ ಸಂಕಷ್ಟ ಕೇಳಲು ಸಮಯವಿಲ್ಲ ಎಂದು ಉಗ್ರಪ್ಪ ಟೀಕಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾನವೀಯತೆ ತೋರುವಲ್ಲಿ ವಿಫಲವಾಗಿವೆ. ಪ್ರಧಾನಮಂತ್ರಿ ಅವರು ವೈಮಾನಿಕ ಸಮೀಕ್ಷೆ ನಡೆಸಲಿಲ್ಲ. ರಾಜ್ಯಕ್ಕೆ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ. ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.