ಪ್ರಾತಿನಿಧಿಕ ಚಿತ್ರ
ಧಾರವಾಡ: ‘ದಕ್ಷಿಣ ಭಾರತ ವಿದ್ಯುತ್ ಗ್ರಾಹಕರ ಸಮಾವೇಶವು ಅಕ್ಟೋಬರ್ 26ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಗಾಂಧಿಭವನದಲ್ಲಿ ನಡೆಯಲಿದೆ’ ಎಂದು ಕರ್ನಾಟಕ ವಿದ್ಯುತ್ ಬಳಕೆದಾರರ ಸಂಘದ ರಾಜ್ಯ ಕಾರ್ಯದರ್ಶಿ ಜ್ಞಾನಮೂರ್ತಿ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘದ ಅಖಿಲ ಭಾರತ ಘಟಕದ ಅಧ್ಯಕ್ಷ ಸ್ವಪನ್ ಘೋಷ್ ಉದ್ಘಾಟನೆ ನೆರವೇರಿಸುವರು. ಮಾಜಿ ಐಎಎಸ್ ಅಧಿಕಾರಿ ಎಂ.ಜಿ. ದೇವಸಹಾಯಂ, ಸಂಯುಕ್ತ ಕೃಷಿ ಮೋರ್ಚಾದ ಸಂಚಾಲಕ ವಡ್ಡೆ ಸೋಭನಾದ್ರಿಶ್ವರ, ತಮಿಳುನಾಡಿನ ಎಸ್. ಗಾಂಧಿ, ಕೇರಳದ ಬಿ. ದಿಲೀಪನ್ ಪಾಲ್ಗೊಳ್ಳುವರು’ ಎಂದರು.
‘ಎಐಇಸಿಎ ಕಾರ್ಯಾಧ್ಯಕ್ಷ ಸಮರ್ ಸಿನ್ಹಾ, ಉಪಾಧ್ಯಕ್ಷ ಕೆ. ಸೋಮಶೇಖರ, ಖಜಾಂಚಿ ಅಜಯ್ ಚಟರ್ಜಿ, ಎಐಕೆಕೆಎಂಎಸ್ ರಾಜ್ಯ ನಾಯಕಿ ದೀಪಾ ಭಾಷಣ ಮಾಡುವರು. ಎಐಇಸಿಎಫ್‍ನ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಭಟ್ ಅಧ್ಯಕ್ಷತೆ ವಹಿಸುವರು’ ಎಂದು ಹೇಳಿದರು.
‘ವಿದ್ಯುತ್ ವಲಯದ ಖಾಸಗೀಕರಣ ನಿಲ್ಲಿಸಬೇಕು. ಸ್ಮಾರ್ಟ್ ಮೀಟರ್ ಅಳವಡಿಸಬಾರದು. ‘ಟೈಮ್ ಆಫ್ ಡೇ’ ದರ ವಿಧಿಸುವುದನ್ನು ಕೈಬಿಡಬೇಕು. ಕರ್ನಾಟಕದಲ್ಲಿ ಪ್ರತಿ ಯುನಿಟ್‍ಗೆ 36 ಪೈಸೆ ಮೇಲ್ ತೆರಿಗೆ ಮತ್ತು ಸ್ಥಿರ ದರ ಏರಿಕೆ ಹಿಂತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
ದೀಪಾ ಧಾರವಾಡ, ಶರಣು ಗೋನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.