ADVERTISEMENT

ಇಎಲ್‌ಐ | ಉದ್ಯೋಗ ಸೃಷ್ಟಿ ಗುರಿ: ಪರಿಪುರನ ನಾಥ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 5:06 IST
Last Updated 10 ಜುಲೈ 2025, 5:06 IST
ಪರಿಪುರನ ನಾಥ
ಪರಿಪುರನ ನಾಥ   

ಹುಬ್ಬಳ್ಳಿ: ‘ಕೇಂದ್ರ ಸಚಿವ ಸಂಪುಟವು ಉದ್ಯೋಗ ಆಧಾರಿತ ಪ್ರೋತ್ಸಾಹಧನ (ಇಎಲ್‌ಐ) ಯೋಜನೆಗೆ ಅನುಮೋದನೆ ನೀಡಿದ್ದು, ಇದರಿಂದ ಉತ್ಪಾದನಾ ವಲಯಕ್ಕೆ ಮತ್ತು ಉದ್ಯೋಗಿಗಳಿಗೆ ಪ್ರೋತ್ಸಾಹಧನ ದೊರೆಯಲಿದೆ’ ಎಂದು ಹುಬ್ಬಳ್ಳಿ ವಲಯದ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ (ಗ್ರೇಡ್–1) ಪರಿಪುರನ ನಾಥ ಹೇಳಿದರು. 

ನಗರದ ಭವಿಷ್ಯ ನಿಧಿ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ’ಎಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ ಮತ್ತು ಉದ್ಯೋಗಿಗಳ ಸಾಮಾಜಿಕ ಭದ್ರತೆ ಹೆಚ್ಚಿಸುವುದು ಈ ಯೋಜನೆಯ ಉದ್ಧೇಶವಾಗಿದೆ’ ಎಂದರು. 

‘ಆಗಸ್ಟ್‌ 1, 2025ರಿಂದ ಜುಲೈ 31, 2027ರ ನಡುವೆ ಸೃಷ್ಟಿಯಾಗುವ ಉದ್ಯೋಗಿಗಳಿಗೆ ಈ ಯೋಜನೆಯ ಲಾಭ ದೊರೆಯಲಿದೆ. ಈ ಎರಡು ವರ್ಷಗಳ ಅವಧಿಯಲ್ಲಿ ದೇಶದಲ್ಲಿ 3.5 ಕೋಟಿಗೂ ಹೆಚ್ಚು ಹೊಸ ಉದ್ಯೋಗಗಳು ಸೃಷ್ಟಿಸುವ ಗುರಿ ಹೊಂದಲಾಗಿದೆ’ ಎಂದರು. 

ADVERTISEMENT

‘ಮೊದಲ ಬಾರಿಗೆ ಉದ್ಯೋಗ ಪಡೆಯುವ ಉದ್ಯೋಗಿಗಳಿಗೆ ವರ್ಷದಲ್ಲಿ ಎರಡು ಕಂತುಗಳಲ್ಲಿ ಗರಿಷ್ಠ ₹15 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ. ಇದರೊಂದಿಗೆ ಉದ್ಯೋಗದಾತರಿಗೆ ಹೆಚ್ಚುವರಿ ಉದ್ಯೋಗ ಸೃಷ್ಟಿಗಾಗಿ ಎರಡು ವರ್ಷಗಳವರೆಗೆ ಪ್ರೋತ್ಸಾಹಧವನ್ನೂ ನೀಡಲಾಗುತ್ತದೆ’ ಎಂದರು. 

‘ಮೊದಲ ಕಂತಿನ ಪ್ರೋತ್ಸಾಹಧನವನ್ನು 6 ತಿಂಗಳ ಸೇವೆಯ ನಂತರ ಮತ್ತು 2ನೇ ಕಂತನ್ನು 12 ತಿಂಗಳ ಸೇವೆಯ ನಂತರ ನೇರವಾಗಿ ಉದ್ಯೋಗಿಯ ಖಾತೆಗೆ ಪಾವತಿಸಲಾಗುತ್ತದೆ’ ಎಂದರು. 

’ಈ ಯೋಜನೆಯು ಎರಡು ಭಾಗಗಳನ್ನು ಒಳಗೊಂಡಿದೆ. ಮೊದಲ ಭಾಗವು ಉದ್ಯೋಗಿಗಳಿಗೆ ಪ್ರೋತ್ಸಾಹ ನೀಡುವಲ್ಲಿ ಗಮನ ಹರಿಸಿದರೆ, ಎರಡನೇ ಭಾಗವು ಉದ್ಯೋಗದಾತರ ಮೇಲೆ ಗಮನ ಹರಿಸಲಿದೆ‘ ಎಂದರು. 

‘ಗರಿಷ್ಠ ₹1 ಲಕ್ಷವರೆಗಿನ ವೇತನ ಹೊಂದಿರುವ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಉದ್ಯೋಗದಾತರು ಈ ಪ್ರೋತ್ಸಾಹಧನ ಪಡೆಯುತ್ತಾರೆ. ಕನಿಷ್ಠ ಆರು ತಿಂಗಳವರೆಗೆ ಉದ್ಯೋಗ ಹೊಂದಿರುವ ಪ್ರತಿ ಹೆಚ್ಚುವರಿ ಉದ್ಯೋಗಿಗೆ ಸರ್ಕಾರವು ತಿಂಗಳಿಗೆ ₹3,000 ಪ್ರೋತ್ಸಾಹಧನ ನೀಡಲಿದೆ. ಇದನ್ನು ಎರಡು ವರ್ಷಗಳ ವರೆಗೆ ನೀಡಲಾಗುತ್ತದೆ. ತಯಾರಿಕಾ ವಲಯಕ್ಕೆ ಪ್ರೋತ್ಸಾಹಧನವನ್ನು 3 ಮತ್ತು 4ನೇ ವರ್ಷಗಳ ತನಕ ವಿಸ್ತರಿಸಲಾಗುವುದು. ಇದರಿಂದ ಸುಮಾರು 2.60 ಕೋಟಿ ಜನರಿಗೆ ಹೆಚ್ಚುವರಿ ಉದ್ಯೋಗ ಸೃಷ್ಟಿಸಲು ಉದ್ಯೋಗದಾತರನ್ನು ಪ್ರೋತ್ಸಾಹಿಸುವ ನಿರೀಕ್ಷೆ ಇದೆ’ ಎಂದರು.  

‘₹10 ಸಾವಿರ ತನಕ ಇಪಿಎಫ್‌ ವೇತನ ಹೊಂದಿರುವ ಉದ್ಯೋಗಿಗಳಿಗೆ ಅನುಗುಣವಾಗಿ ಪ್ರೋತ್ಸಾಹಧನ ಸಿಗಲಿದೆ’ ಎಂದರು.  

‘ಉದ್ಯೋಗಿಗಳಲ್ಲಿ ಉಳಿತಾಯ ಮನೋಭಾವ ಉತ್ತೇಜಿಸಲು ಹಾಗೂ ಉದ್ಯೋಗದಾತರಿಗೆ ಹೆಚ್ಚಿನ ಉದ್ಯೋಗಗಳನ್ನು ಸೃಜಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಈ ಯೋಜನೆ ಸಹಾಯಕವಾಗಲಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.