ಪ್ರಜಾವಾಣಿ ವಾರ್ತೆ
ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ದೌರ್ಜನ್ಯವೆಸಗಿ ಕೊಲೆ ಮಾಡಿದ ಪ್ರಕರಣದ ಆರೋಪಿ ರಿತೇಶಕುಮಾರ್ ಶವದ ವಾರಸುದಾರರು ಪತ್ತೆಯಾಗದ ಕಾರಣ 14 ದಿನಗಳಿಂದ ಕೆಎಂಸಿ–ಆರ್‌ಐ ಆಸ್ಪತ್ರೆಯ ಶವಾಗಾರದಲ್ಲೇ ಇದೆ.
ವಾರಸುದಾರರ ಪತ್ತೆಗೆ ಹುಬ್ಬಳ್ಳಿಯ ಪೊಲೀಸರು ಬಿಹಾರಕ್ಕೆ ತೆರಳಿ 12 ದಿನಗಳಾದರೂ, ಈವರೆಗೆ ಯಾರೊಬ್ಬರ ಸುಳಿವು ಸಿಕ್ಕಿಲ್ಲ. ರಿತೇಶಕುಮಾರ್‌ನ ಭಾವಚಿತ್ರ ಹಿಡಿದು ಬಿಹಾರ ಅಲ್ಲದೆ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ ಮತ್ತು ಸುತ್ತಮುತ್ತಲಿನ ರಾಜ್ಯಗಳಿಗೂ ಭೇಟಿ ನೀಡಿ ಕುಟುಂಬದವರ ಅಥವಾ ಪರಿಚಯದವರ ಪತ್ತೆ ಕಾರ್ಯ ನಡೆಸಿದ್ದಾರೆ. ಧಾರವಾಡ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಆರೋಪಿಯ ಪರಿಚಯದವರು ಪತ್ತೆಯಾಗಿಲ್ಲ.
ಆರೋಪಿ ಪೊಲೀಸರ ಗುಂಡೇಟಿನಲ್ಲಿ ಮೃತಪಟ್ಟಿರುವ ಪ್ರಕರಣದ ಕುರಿತು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಶವದ ಅಂತ್ಯಕ್ರಿಯೆ ಮಾಡಿದರೆ ಸಾಕ್ಷಿ ನಾಶವಾಗುತ್ತದೆ ಎಂದು ಆಕ್ಷೇಪಿಸಿ ಅರ್ಜಿ ಸಲ್ಲಿಕೆಯಾಗಿದ್ದು, ಈಗಾಗಲೇ ಎರಡು ಬಾರಿ ವಿಚಾರಣೆ ನಡೆದಿದೆ. ‘ಏಪ್ರಿಲ್ 28ರಂದು ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆಯಿದ್ದು, ಶವದ ಅಂತ್ಯಕ್ರಿಯೆಗೆ ಅನುಮತಿ ಸಿಗಬಹುದು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಕೆಎಂಸಿ–ಆರ್‌ಐ ಶವಾಗಾರದ ಫ್ರೀಜರ್‌ನಲ್ಲಿ ಶವ ಇಡಲಾಗಿದ್ದು, ಕೊಳೆಯುವ ಹಂತಕ್ಕೆ ತಲುಪಿದೆ. ಆಸ್ಪತ್ರೆ ವೈದ್ಯರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಈ ಕುರಿತು ಪೊಲೀಸರಿಗೆ ವರದಿ ನೀಡಿ, ಶವ ಪರಿಶೀಲಿಸುವಂತೆ ವಿನಂತಿಸಿದ್ದಾರೆ’ ಎಂದು ಕೆಎಂಸಿ–ಆರ್‌ಐ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.