ADVERTISEMENT

ಹುಬ್ಬಳ್ಳಿಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪನೆ

ಜಿಲ್ಲೆಯ ಪ್ರಮುಖ ಪೊಲೀಸ್‌ ಅಧಿಕಾರಿಗಳ ಜೊತೆ ಗೃಹ ಸಚಿವ ಬೊಮ್ಮಾಯಿ ಸಭೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 14:44 IST
Last Updated 29 ಸೆಪ್ಟೆಂಬರ್ 2019, 14:44 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಹುಬ್ಬಳ್ಳಿ: ಅಪರಾಧ ಪ್ರಕರಣಗಳ ಪತ್ತೆ ಕಾರ್ಯ ಸುಲಭವಾಗಿಸಲು ಹುಬ್ಬಳ್ಳಿಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ಆರಂಭಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಮಿಷನರ್‌ ಕಚೇರಿಯಲ್ಲಿ ಭಾನುವಾರ ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ಕಮಿಷನರೇಟ್‌ ವ್ಯಾಪ್ತಿಯ ಪ್ರಮುಖ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪ್ರಯೋಗಾಲಯದಿಂದ ವರದಿ ಪಡೆಯಲು ಈಗ ಬೆಂಗಳೂರು ಅಥವಾ ಬೆಳಗಾವಿಗೆ ಹೋಗಬೇಕಾಗಿದೆ. ಇದರಿಂದ ವೇಗವಾಗಿ ತನಿಖೆ ನಡೆಸಲು ತೊಡಕಾಗುತ್ತದೆ. ಆದ್ದರಿಂದ ಹೊಸ ವಿಧಿವಿಜ್ಞಾನ ಪ್ರಯೋಗಾಲಯ ತೆರೆಯಲಾಗುವುದು’ ಎಂದರು.

‘ಸೈಬರ್‌ ಮತ್ತು ಆರ್ಥಿಕ ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಲು ಹಿಂದಿನ ಪ್ರಕರಣಗಳ ತ್ವರಿತ ತನಿಖೆ ಅಗತ್ಯವಿದೆ. ಆದ್ದರಿಂದ ಧಾರವಾಡದಲ್ಲಿ ಸೈಬರ್ ಅಪರಾಧಗಳ ಪತ್ತೆಗೆ ಮತ್ತೊಂದು ಹೊಸ ಸೈಬರ್‌ ಠಾಣೆ ಆರಂಭಿಸಲಾಗುವುದು’ ಎಂದರು.

ADVERTISEMENT

‘ಗಣೇಶ ಮೂರ್ತಿ ವಿಸರ್ಜನೆ ವೇಳೆ ನಗರದಲ್ಲಿ ನಡೆದ ಅಪರಾಧ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಮುಂದಿನ ಬಾರಿ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಗುಂಡಾಗಳ ಕಡಿವಾಣಕ್ಕೆ ವಿಶೇಷ ತಂಡ ರಚಿಸಲಾಗುವುದು. ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳು ನೆರೆಯಲ್ಲಿ ಇರುವುದರಿಂದ ಅಪರಾಧಿಗಳು ಇಲ್ಲಿ ಕೃತ್ಯ ಎಸಗಿ ಸುಲಭವಾಗಿ ತಲೆಮರೆಸಿಕೊಳ್ಳುತ್ತಾರೆ. ಜಿಲ್ಲೆಯಲ್ಲಿ ಕೈಗಾರಿಕೆಗಳು ಬೆಳೆಯುತ್ತಿರುವ ಕಾರಣ ಅವುಗಳಲ್ಲಿ ಕೆಲಸ ಮಾಡುವ ನೆಪದಲ್ಲಿ ಇಲ್ಲಿಗೆ ಹೊರರಾಜ್ಯಗಳಿಂದಲೂ ಜನ ಬರುತ್ತಿದ್ದಾರೆ’ ಎಂದರು.

‘ಅವಳಿ ನಗರದದಲ್ಲಿ ಜೂಜಾಟ, ಕ್ರಿಕೆಟ್‌ ಬೆಟ್ಟಿಂಗ್ ಪ್ರಕರಣಗಳು ಸಾಕಷ್ಟು ನಡೆಯುತ್ತಿವೆ. ಆದ್ದರಿಂದ ಇವುಗಳ ಕಡಿವಾಣಕ್ಕೆ ವಿಶೇಷ ತಂಡಗಳನ್ನು ರಚಿಸಲಾಗುವುದು. ಈ ತಂಡದ ಸದಸ್ಯರು ಪ್ರತಿ ವಾರ ಕಮಿಷನರ್‌ಗೆ ಮಾಹಿತಿ ಕೊಡಬೇಕು. ಕಮಿಷನರ್‌ ಎಡಿಜಿಪಿಗೆ ಮಾಹಿತಿ ಸಲ್ಲಿಸಬೇಕು’ ಎಂದರು.

ಕಮ್ಯುನಿಟಿ ಪೊಲೀಸ್‌ ವ್ಯವಸ್ಥೆ: ’ಜಿಲ್ಲೆಯಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಮ್ಯುನಿಟಿ ಪೊಲೀಸ್ ವ್ಯವಸ್ಥೆ ಜಾರಿಗೊಳಿಸಲಾಗುವುದು. ಹುಬ್ಬಳ್ಳಿಯಲ್ಲಿ ಹದಗೆಟ್ಟಿರುವ ಸಂಚಾರ ದಟ್ಟಣೆ ಪರಿಹಾರಕ್ಕೆ ಹೊಸ ಮಾದರಿಯ ಸಂಚಾರ ನಿಯಮ ಜಾರಿ ಮಾಡಲಾಗುವುದು. ಇನ್ನಷ್ಟು ಸಿಸಿಟಿವಿ ಕ್ಯಾಮೆರಾ ಮತ್ತು ವಾಕಿಟಾಕಿಗಳನ್ನು ನೀಡಬೇಕೆಂದು ಆಯುಕ್ತರು ಮನವಿ ಮಾಡಿದ್ದು, ಶೀಘ್ರದಲ್ಲಿಯೇ ಪೂರೈಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.